ಮಹಿಳೆಯರಿಗೆ ಕುಮಾರಸ್ವಾಮಿ ಕ್ಷಮೆ ಕೇಳಲೇಬೇಕು : ವಿ ಎಸ್ ಉಗ್ರಪ್ಪ

Most read

ಬೆಂಗಳೂರು: ರಾಜ್ಯದ ಮಹಿಳೆಯರನ್ನು ‘ದಾರಿ ತಪ್ಪಿದ್ದಾರೆ’ ಎಂದು ಅಪಮಾನಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗೋಷ್ಠಿ ನಡೆಸಿದರು.

ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ಅವರ ತಂದೆ ಸಿಎಂ, ಪಿಎಂ ಆಗಿದ್ದವರು. ಸಂವಿಧಾನದ ಬಗ್ಗೆ ಇವರಿಗೆ ನಂಬಿಕೆ ಇಲ್ಲ. ಮಹಿಳೆಯರನ್ನು ಗೌರವಿಸಬೇಕು. ಕುಮಾರಸ್ವಾಮಿ ತುರುವೇಕೆರೆಯಲ್ಲಿ ಸಭೆ ನಡೆಸಿದ್ದಾರೆ. ಆ ವೇಳೆ ಮಹಿಳೆಯರನ್ನ ಅಪಮಾನ ಮಾಡಿದ್ದಾರೆ ಎಂದು ಉಗ್ರಪ್ಪ ಕಿಡಿಕಾರಿದರು.

ಗ್ಯಾರಂಟಿಗಳಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂದಿದ್ದಾರೆ. ತಾಯಂದಿರು ಸ್ವಲ್ಪ ಯೋಚನೆ ಮಾಡಬೇಕೆಂದಿದ್ದಾರೆ. ದಾರಿ ತಪ್ಪಿದ್ದಾರೆ ಅಂದರೆ ಏನು?. ಯಾವ ರೀತಿ ದಾರಿ ತಪ್ಪಿದ್ದಾರೆ ಎಂದು ಹೇಳಬೇಕು. ಇಡೀ ಸಮುದಾಯಕ್ಕೆ ಅಪಮಾನ ಎಸಗಿದ್ದೀರಿ. ಬಿಜೆಪಿ ಸಖ್ಯ ಮಾಡಿದ ಮೇಲೆ ಈ ಹೇಳಿಕೆ ನೀಡ್ತಿದ್ದಾರೆ. ಬಿಜೆಪಿಯದ್ದು ಮನುವಾದ. ಮನುವಾದ ಮಹಿಳೆಯರಿಗೆ ಗೌರವ ನೀಡಲ್ಲ. ಹಾಗಾಗಿ ಇಂತಹ ಹೇಳಿಕೆ ನೀಡಿದ್ದಾರೆ. ಮಹಿಳಾ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು. ದಾರಿ ತಪ್ಪಿದ್ದಾರೆ ಅನ್ನುವುದಕ್ಕೆ ವಿವರಣೆ ಕೊಡಬೇಕು ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು‌.

ಕ್ಷಮೆ ಕೇಳದೇ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಬೇಕಾಗುತ್ತದೆ. ಚುನಾವಣಾ ಆಯೋಗಕ್ಕೂ ದೂರು ನೀಡ್ತೇವೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ರಾಜ್ಯ ಭೇಟಿ ವಿಚಾರವಾಗಿ ಮಾತನಾಡಿ, ೨೮ ಸಾರಿ ಇಲ್ಲಿಗೆ ಬಂದು ಹೋಗಿದ್ದಾರೆ. ಎಷ್ಟು ಆಶ್ವಾಸನೆ ಈಡೇರಿಸಿದ್ದೀರ ಹೇಳಿ. ಒಂದಾದ್ರೂ ನೀರಾವರಿ ಯೋಜನೆ ಜಾರಿಗೆ ತಂದ್ರಾ?. ಯಾವುದಾದ್ರೂ ಇಂಡಸ್ಟ್ರಿಗಳನ್ನ ತಂದ್ರಾ. ತುಮಕೂರು, ಗುಬ್ಬಿಯಲ್ಲಿ ಇಂಡಸ್ಟ್ರಿ ಕುಂಟುತ್ತಿವೆ. ಪ್ರತಿವರ್ಷ ೨ ಕೋಟಿ ಉದ್ಯೋಗ ಸೃಷ್ಟಿ ಅಂದ್ರಿ. ೧೦ ವರ್ಷದಲ್ಲಿ ೨೦ ಕೋಟಿ ಉದ್ಯೋಗ ಕೊಟ್ರಾ?. ಪೈಟರ್ ಜೆಟ್ ಉತ್ಪಾದನೆ ಹೆಚ್ ಎಎಲ್ ನಿಂದ ತಪ್ಪಿಸಿದ್ರಿ. ವಾಜಪೇಯಿ ಮಾಡಿದ್ದ ಒಪ್ಪಂದ ರದ್ಧು ಮಾಡಿದ್ರಿ. ರಾಫೆಲ್ ಕಂಪನಿಗೆ ಟೆಂಡರ್ ಕೊಟ್ರಿ. ಬಡತನ ನಿವಾರಣೆಗೆ ಏನು ಮಾಡಿದ್ರಿ. ಸುಳ್ಳಿನ ಮಾತು ಹೇಳುವುದಷ್ಟೇ ನಿಮ್ಮ ಕೆಲಸ. ಇವತ್ತು ಮ್ಯಾನಿಫ್ಯಾಸ್ಟೋ ರಿಲೀಸ್ ಮಾಡಿದ್ದಾರೆ. ಹಿಂದಿನ ಆಶ್ವಾಸನೆಗಳನ್ನೇ ರಿಪೀಟ್ ಮಾಡಿದ್ದಾರೆ. ಕೊಟ್ಟ ಆಶ್ವಾಸನೆಗಳನ್ನೇ ಈಡೇರಿಸಿಲ್ಲ ಎಂದು ಕೇಂದ್ರದ ವಿರುದ್ಧ ವಿ.ಎಸ್.ಉಗ್ರಪ್ಪ ಆಕ್ರೋಶ ಹೊರ ಹಾಕಿದ್ದಾರೆ.

More articles

Latest article