ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆನೆಹೊತ್ತ ಮಹಿಳೆಗೆ ಅಪಮಾನಿಸಿದ್ದಾರೆ. ನಮ್ಮ ಗ್ಯಾರೆಂಟಿಗಳು ಬಡವರ ಮನೆಯ ಬೆಳಕು. ಅಂತಹ ಯೋಜನೆಗಳು ದಾರಿ ತಪ್ಪಿಸಿವೆಯೇ? ಕುಮಾರಸ್ವಾಮಿ ಇದಕ್ಕೆ ಸರಿಯಾದ ಉತ್ತರ ಕೊಡಬೇಕಿದೆ ಎಂದು ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮಹಿಳೆಯರು ಘನತೆಯಿಂದ ಬದುಕುತ್ತಿದ್ದಾರೆ. ಅಂತವರನ್ನು ನೀವು ಅಪಮಾನಿಸಿದ್ದೀರಿ. ನಮ್ಮ ಸಹೋದರಿಯರು ದಾರಿ ತಪ್ಪಿದಂತೆ ಕಾಣ್ತಿದ್ದಾರಾ? ಸ್ವಾವಲಂಬಿಗಳಾಗುತ್ತಿರುವುದು ನಿಮಗೆ ದಾರಿ ತಪ್ಪಿದಂತೆ ಕಾಣುತ್ತಿದೆಯೇ? ಸಂಸಾರದ ನೊಗ ಎಳೆಯುತ್ತಿರುವವರು ದಾರಿ ತಪ್ಪುತ್ತಿದ್ದಾರಾ?. ಕುಮಾರಸ್ವಾಮಿಯವರೇ ಇದಕ್ಕೆ ಉತ್ತರ ಕೊಡಿ ಎಂದು ಅವರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಕುಮಾರಸ್ವಾಮಿ ಮಾತು ಎಲ್ಲಿಂದ ಬಂದಿದೆ? ಮಾತಿನ ಭರದಲ್ಲಿ ಬಂದಿದ್ದಾ, ಉದಾಸೀನದಿಂದ ಬಂದಿದ್ದಾ? ರಾಜ್ಯ ಆಳಿದವರ ಬಾಯಲ್ಲಿ ಇಂತ ಮಾತು ಬರಬಾರದು. ಪ್ರತಿಯೊಂದು ಪದ ಅಳೆದು ತೂಗಿ ಮಾತನಾಡಬೇಕು. ನನ್ನ ತಾಯಂದಿರು ದಾರಿ ತಪ್ಪಿದ್ದಾರೆ ಅಂದ್ರೆ ಹೇಗೆ ಎಂದು ಅವರು ಕಿಡಿಕಾರಿದ್ದಾರೆ.