ಬೆಳಗಾವಿ: ಎಸ್ಎಂ ಕೃಷ್ಣ ಅವರು ನೀರಾವರಿ ಕ್ಷೇತ್ರಕ್ಕೆ ಕೊಡುಗೆ ಅಪಾರ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದರು. ಕೆಬಿಜೆಎನ್ಎಲ್, ಕರ್ನಾಟಕ ನೀರಾವರಿ ನಿಗಮ ಸ್ಥಾಪನೆಗೆ ಕಾರಣೀಭೂತರಾಗಿದ್ದರು. ಹಾಗೆಯೇ, ಕಾವೇರಿ ನೀರಾವರಿ ನಿಗಮಕ್ಕೂ ಅವರ ಕೊಡುಗೆ ಅಪಾರವಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
1999ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಜನಾದೇಶ ಬಂದಾಗ ನಾವು ಹೆಚ್ಚಿನ ಶಾಸಕರು ಮೆರವಣಿಗೆ ಮಾಡಿ ಕೃಷ್ಣ ಅವರೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯ ಮಾಡಿದ್ದೆವು. ಅವರನ್ನು ಅವಿರೋಧವಾಗಿ ಸಿಎಂ ಮಾಡಲಾಗಿತ್ತು. ಸಚಿವ ಸಂಪುಟ ರಚನೆ ಮಾಡುವಾಗ ನನ್ನ ಜೊತೆ ಮಾತನಾಡಿದ್ದರು. ಯಾವ ಖಾತೆ ಬೇಕೆಂದು ಕೇಳಿದರು. ನಾನು ಗ್ರಾಮೀಣಾಭಿವೃದ್ಧಿ ಖಾತೆ ಬೇಕೆಂದು ಕೇಳಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ನನಗೆ ನೀರಾವರಿ ಖಾತೆ ಕೊಟ್ಟರು. ಆ ಖಾತೆಯಲ್ಲಿ ನನಗೆ ಅನುಭವವಿರಲಿಲ್ಲ. ಉತ್ತರ ಕರ್ನಾಟಕ ಭಾಗದ ನೀರಾವರಿ ಸಮಸ್ಯೆ ಬಗ್ಗೆ ಮಾತ್ರ ಮಾಹಿತಿ ಇತ್ತು. ನೀರಾವರಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಾಯಿತು ಎಂದು ನೆನಪಿನ ಬುತ್ತಿ ತೆರೆದಿಟ್ಟರು. ಶೇ. 37ರಷ್ಟು ಹಣವನ್ನು ನೀರಾವರಿಗೆ ಮೀಸಲಾಗಿಟ್ಟಿದ್ದರು. ಅವರು ಅಜಾತ ಶತ್ರುವಾಗಿದ್ದರು. ಶಿಸ್ತಿಗೆ ಬದ್ಧತೆಗೆ ಮಾದರಿಯಾಗಿದ್ದರು. ಇದೀಗ ಅಂತಹ ದೊಡ್ಡ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ಸಂತಾಪ ಸೂಚಿಸಿದರು.