ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ನಟ ಶಿವರಾಜ್ ಕುಮಾರ್ ಅನಾರೋಗ್ಯದ ನಡುವೆಯೂ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಅವರು ತಮ್ಮ ಕುಟುಂಬ ಮತ್ತು ಕೃಷ್ಣ ಅವರಿಗೆ ಇದ್ದ ಸಂಬಂಧ ಕುರಿತು ಹೇಳಿಕೊಂಡಿದ್ದಾರೆ.
ರಾಜ್‌ಕುಮಾರ್ ಹಾಗೂ ನಮ್ಮ ಕುಟುಂಬಕ್ಕೆ ವಿಶೇಷ ಸಂಬಂಧ ಇದೆ. ಒಬ್ಬ ಸೊಫೆಸ್ಟಿಕೇಟೆಡ್ ವ್ಯಕ್ತಿಯೆಂದರೆ ಎಸ್.ಎಂ. ಕೃಷ್ಣ ಅವರ ರೀತಿ ಇರಬೇಕು ಎಂದು ನಮ್ಮ ತಂದೆಯವರು ಹೇಳುತ್ತಿದ್ದರು. ಕೃಷ್ಣ ಅವರು ಶಿಸ್ತಿನ ಜೀವನ ನಡೆಸಿದರು, ಶಿಸ್ತಿನ ವ್ಯಕ್ತಿತ್ವ ಅವರದ್ದು. ಅಂತಹ ವ್ಯಕ್ತಿಗಳು ಬಹಳ ಅಪರೂಪ. ವೈಯಕ್ತಿಕವಾಗಿಯೂ ಅವರೊಂದಿಗೆ ಬಹಳ ಆತ್ಮೀಯತೆ ಇತ್ತು ಎಂದು ಹೇಳಿದ್ದಾರೆ. ಅಪ್ಪಾಜಿ ಅವರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಕೃಷ್ಣ ಅವರು ನೀಡಿದ ಸಹಾಯವನ್ನು ನಮ್ಮ ಕುಟುಂಬ ಯಾವತ್ತಿಗೂ ಮರೆಯುವುದಿಲ್ಲ ಎಂದು ಸ್ಮರಿಸಿಕೊಂಡಿದ್ದಾರೆ.
ಡಾ ರಾಜ್‌ಕುಮಾರ್ ಅವರ ಅಪಹರಣ ಆದ ಸಂದರ್ಭದಲ್ಲಿ ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದರು. ಆ ಸಮಯದಲ್ಲಿ ರಾಜಕುಮಾರ್ ಕುಟುಂಬ ಪ್ರತಿದಿನವೂ ಸಂಪರ್ಕದಲ್ಲಿತ್ತು. ಸತತ 108 ದಿನಗಳ ಬಳಿಕ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.