ಪ್ರಾದೇಶಿಕ ಅಸಮತೋಲನ ನಿವಾರಣೆಯ ಹರಿಕಾರ ಕೃಷ್ಣ; ಎಚ್.ಕೆ.ಪಾಟೀಲ್

Most read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಕಂಬನಿ ಮಿಡಿದಿದ್ದಾರೆ. ಪ್ರಾದೇಶಿಕ ಅಸಮತೋಲನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಯ ಸದುದ್ದೇಶದಿಂದ ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಉನ್ನತಾಧೀಕಾರ ಸಮಿತಿಯನ್ನು ನೇಮಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಪರ ಚಿಂತನೆ ನಡೆಸಿದ್ದರು.

ಕೃಷ್ಣ-ಕಾವೇರಿ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಪ್ರತಿಯೊಬ್ಬ ನಾಗರೀಕನ ಆಶೋತ್ತರಗಳನ್ನು ಎಲ್ಲ ವೇದಿಕೆಗಳಲ್ಲಿ ಪ್ರತಿಪಾದಿಸಿದ ಎಸ್.ಎಂ. ಕೃಷ್ಣ ಜಲವಿವಾದಗಳ ವಿಷಯಗಳಲ್ಲಿ ಕರ್ನಾಟಕಕ್ಕೆ ನ್ಯಾಯ ತಂದುಕೊಡುವಲ್ಲಿ ಅವಿರತವಾಗಿ ಶ್ರಮ ವಹಿಸಿದರು. ಕರ್ನಾಟಕ ಪ್ರತಿದಿನ 10000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಆದೇಶ ಮಾಡಿದಾಗ ಆ ಆದೇಶವು ಪ್ರಧಾನಮಂತ್ರಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ ಸಭೆ ಸೇರುವವರೆಗೂ ಮುಂದುವರೆಯುತ್ತದೆ ಎಂದು ಹೇಳಿ ಇಡೀ ಕರ್ನಾಟಕ ದಿಗ್ಬ್ರಮೆಗೊಂಡಾಗ ಅತ್ಯಂತ ಕಡಿಮೆ ಅವಧಿಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಸಿ ತಮಿಳುನಾಡಿಗೆ ನೀರು ಬಿಡುಗಡೆ ನಿಲ್ಲಿಸಿ ಕರ್ನಾಟಕಕ್ಕೆ ನ್ಯಾಯ ತಂದುಕೊಟ್ಟ ಕೀರ್ತಿಗೆ ಪಾತ್ರರಾದವರು. ಕೃಷ್ಣ, ಕಾವೇರಿ ಜಲ ವಿವಾದಗಳಲ್ಲಿ, ಗಡಿ ವಿವಾದಗಳಲ್ಲಿ ರಾಜ್ಯದ ಹಿತವೇ ಶ್ರೇಷ್ಠ ಎನ್ನುವ ನಿಲುವನ್ನು ಸದಾಕಾಲ ಪಾಲಿಸಿದವರು ಎಂದು ಕೊಂಡಾಡಿದ್ದಾರೆ.
ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನದ ಕಣಜವನ್ನಾಗಿ ಪರಿವರ್ತಿಸುವಲ್ಲಿ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯನ್ನಾಗಿ ಬದಲಾವಣೆಗೆ ಅಪಾರ ಕೊಡುಗೆ ನೀಡಿದ ಕೃಷ್ಣ ಸಭ್ಯ, ಸುಸಂಸ್ಕೃತ ಮತ್ತು ಮುತ್ಸದ್ದಿ ಶ್ರೇಷ್ಠ ರಾಜಕಾರಣಿಗಳ ಸಾಲಿನ ಮುಂಚೂಣಿಯಲ್ಲಿದ್ದವರು. ತಮ್ಮ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಇಲಾಖೆಯ ಸಚಿವನನ್ನಾಗಿ ಅಧಿಕಾರ ನೀಡಿದ ಕ್ಷಣಗಳನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದಿದ್ದಾರೆ.

ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ನೀರಾವರಿ ಯೋಜನೆಗಳಿಗೆ ಅದರಲ್ಲೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗ ನೀಡಿದರು. ನೆನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಯನ್ನು ಮಾರ್ಪಡಿಸಿ ಕಳಸಾ-ಬಂಡೂರಿ ಯೋಜನೆಗಳನ್ನಾಗಿ ಅತ್ಯಂತ ಚಾಕಚಕ್ಯತೆಯಿಂದ ಜಲಸಂಪನ್ಮೂಲ ಇಲಾಖೆ ಸಲ್ಲಿಸಿದ್ದ ಯೋಜನಾ ವರದಿಯನ್ನು ಅಂಗೀಕರಿಸಿದ ಮತ್ತು ಆ ಕಾರ್ಯಕ್ಕೆ ಚಾಲನೆ ನೀಡಿದ ಎಸ್.ಎಂ. ಕೃಷ್ಣ ಸಚಿವ ಸಂಪುಟದ ಕೊಡುಗೆಯನ್ನು ನಾನು ಕೃತಜ್ಞತೆಯನ್ನು ಸ್ಮರಿಸುತ್ತೇನೆ. ಕರ್ನಾಟಕ ಕಂಡ ಅಪರೂಪದ ಹಿರಿಯ ಚೈತನ್ಯವೊಂದು ಇಂದು ನಮ್ಮನ್ನು ಅಗಲಿ ನಾಡನ್ನು ಬಡವಾಗಿಸಿದೆ. ರಾಷ್ಟ್ರಕ್ಕೆ ತುಂಬಲಾರದ ಹಾನಿಯಾಗಿದೆ. ಎಸ್.ಎಂ.ಕೃಷ್ಣ ಅವರ ನಿಧನದಿಂದ ಮಡುಗಟ್ಟಿರುವ ಶೋಕವನ್ನು ಸೈರಿಸುವ ಶಕ್ತಿಯನ್ನು ಎಲ್ಲರಿಗೂ ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಾಘನನಾದ ಭಗವಂತನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

More articles

Latest article