ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು. ಈ ಹಿನ್ನೆಲೆಯಲ್ಲಿ ಮಂಗಳೂರು ವಿ.ವಿ ಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಸಬಿತಾ ಕೊರಗ ಅವರು ಬರೆದ ಲೇಖನ ಇಲ್ಲಿದೆ.
ಭಾರತದಲ್ಲಿ ಸುಮಾರು 75 ದುರ್ಬಲ ಬುಡಕಟ್ಟು ಮೂಲ ನಿವಾಸಿಗಳು ವಾಸವಾಗಿದ್ದಾರೆ. ಕರ್ನಾಟಕ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗರು ಮತ್ತು ಜೇನು ಕುರುಬರು ಮೈಸೂರು ಪ್ರಾಂತ್ಯದಲ್ಲಿ ವಾಸವಾಗಿದ್ದಾರೆ. ಕೊರಗರು ಸುಮಾರು 15,000 ಜನಸಂಖ್ಯೆಯನ್ನು ಹೊಂದಿದ್ದು ಮೂವತ್ತು ಸಾವಿರ ವರ್ಷದ ಹಿಂದಿನ ಪರಂಪರೆಯನ್ನು ಹೊಂದಿದ್ದಾರೆ. ಕೊರಗ ಬುಡಕಟ್ಟಿನ ಇತಿಹಾಸವು ಮುಖ್ಯ ಭೂಮಿಕೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ಅಂಚೀಕರಣಗೊಂಡಿದ್ದೆ ಹೆಚ್ಚು.
ಕೊರಗರು ಈ ನೆಲದ ಮೂಲನಿವಾಸಿಗಳಾಗಿದ್ದರೂ ಕೂಡ ಈ ನೆಲದಲ್ಲಿ ತಮ್ಮ ಹಕ್ಕನ್ನು ಪಡೆಯಲು ಹೋರಾಟಕ್ಕೆ ಇಳಿಯ ಬೇಕಾದ ಪರಿಸ್ಥಿತಿಯಲ್ಲಿಯೇ ಬದುಕಬೇಕಾಗಿದೆ. ನಾವು ನಮ್ಮದು ಎನ್ನುವ ಮನಸ್ಥಿತಿಯನ್ನು ಹೊಂದಿರುವ ಕೊರಗರು ಈ ನೆಲದ ಹಕ್ಕು ತನ್ನ ಖಾಸಗಿ ಎನ್ನುವ ಮನೋಭಾವನೆಯನ್ನು ಹೊಂದಿಲ್ಲ. ಇಂದಿಗೂ ಕೃಷಿ ಪೂರ್ವ ಜೀವನ ಕ್ರಮವನ್ನು ಹೊಂದಿರುವ ಕೊರಗರು ಭೂಮಿಯ ಹಕ್ಕಿಗಾಗಿ ಹೋರಾಟಕ್ಕಿಳಿದು ತಮ್ಮ ಮೂಲಭೂತ ಹಕ್ಕಿಗಾಗಿ ಧರಣಿ ನಿರತರಾಗಿರುವುದನ್ನು ಕಾಣಬಹುದು. 1990 ರಲ್ಲಿ ಡಾ. ಮಹ್ಮದ್ ಫೀರ್ ವರದಿ ಜಾರಿಯಾಗಿ ಕೇವಲ 500 ಎಕರೆ ಭೂಮಿಯನ್ನು ಪಡೆದ ಕೊರಗರು ಅದರ ಪುನರ್ವಸತಿಗಾಗಿ ಇಂದಿಗೂ ಭೂಮಿ ಹೋರಾಟದಲ್ಲಿ ತೊಡಗಿರುವುದು ಇವತ್ತಿನ ವಾಸ್ತವ.
1970 ರ ಕಾಲಘಟ್ಟದಲ್ಲಿ ಸಮಾಜದ ಒಂದಷ್ಟು ತಳಸ್ತರ ಸಮುದಾಯಗಳು ಹೋರಾಟಕ್ಕಿಳಿದು ತಮ್ಮ ಹಕ್ಕುಗಳ ಅರಿವನ್ನು ಪಡೆದವು. ಅದರಂತೆಯೇ ಕೊರಗ ಸಮುದಾಯವು ʼಸಮಗ್ರ ಗ್ರಾಮೀಣ ಆಶ್ರಮ ಕಾಪುʼ ಎಂಬ ಸರಕಾರೇತರ ಸಂಸ್ಥೆಯ ಸಹಕಾರದೊಂದಿಗೆ ಸಂಘಟನೆಗೊಂಡು ಮೂಲಭೂತ ಹಕ್ಕುಗಳ ಪ್ರತಿಪಾದನೆಗಾಗಿ ಸ್ಥಳೀಯ ಆಡಳಿತದೊಂದಿಗೆ ಚಳುವಳಿ ಕೈಗೊಂಡು ಒಂದಷ್ಟು ಕುಟುಂಬಗಳು ಭೂಮಿಯ ಹಕ್ಕನ್ನು ಪಡೆದವು. ಆದರೆ ಕೊರಗರ ಮೂಲಭೂತ ಸಮಸ್ಯೆಗಳು ಆಮೂಲಾಗ್ರವಾಗಿ ರಚನಾತ್ಮಕವಾಗಿ ಬದಲಾವಣೆಯಾಗದೆ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಈ ಹಿಂದಿನ ಸಮಸ್ಯೆಗಳೇ ಮುಂದುವರಿಯುತ್ತಿರುವುದು ವಿಪರ್ಯಾಸ.
ಸುಮಾರು 40 ವರ್ಷದ ಹೋರಾಟದ ಬದುಕಿನಲ್ಲಿ ಕೊರಗರು ಸರಕಾರದಿಂದ ಯಾಚಿಸಿದ್ದು ಸ್ವಾಭಿಮಾನದ ಬದುಕು, ತಮ್ಮದೇ ಆದ ನೆಲ, ಸೂರು, ಶಿಕ್ಷಣ, ಆಹಾರದ ಭದ್ರತೆ ಮತ್ತು ಆರೋಗ್ಯದ ಬೇಡಿಕೆಗಳು. ಆದರೆ ಇದು ಯಾವುದು ಕೂಡ ಪೂರ್ಣ ಪ್ರಮಾಣದಲ್ಲಿ ಕೊರಗರಿಗೆ ಇಂದಿಗೂ ಲಭಿಸಲಿಲ್ಲ. ನೆಲದ ಹಕ್ಕೇ ಇಲ್ಲದ ಕೊರಗರು ಏನು ತಾನೇ ತನ್ನ ಶಿಕ್ಷಣ, ಆರೋಗ್ಯ, ಅಭಿವೃದ್ಧಿಯ ಬಗ್ಗೆ ಚಿಂತಿಸಿಯಾರು?
ಮಾನವ ಶಾಸ್ತ್ರಜ್ಞರಾದ ಡಾ. ಎಲ್ವಿನ್‍ರವರು ಬುಡಕಟ್ಟು ಅಭಿವೃದ್ಧಿಗಾಗಿ ತಮ್ಮ ಸಲಹೆಯನ್ನು ನೆಹರೂರವರಿಗೆ ನೀಡುವಾಗ ಬಲವಾಗಿ ಒತ್ತು ನೀಡಿರುವುದು ಬುಡಕಟ್ಟು ಸಮುದಾಯಗಳ ಸಂಸ್ಕೃತಿಗಳನ್ನು ಉಳಿಸಿಕೊಂಡು ಅಂದರೆ ಬುಡಕಟ್ಟು ಜನರು ಮತ್ತು ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು. ಆದರೆ ಇಂದಿಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬುಡಕಟ್ಟು ಸಮುದಾಯಗಳು ಮುಖ್ಯ ಭೂಮಿಕೆಯಲ್ಲಿ ಕಾಣಿಸದೆ ಇರುವುದು ದುರಂತ.
ಕೊರಗರು ಹಿಂದೆ ಅಜಲು ಅಸ್ಪೃಶ್ಯತೆಯ ಕಾರಣದಿಂದ ಕೊರಗೇತರರ ಮನೆಗಳಲ್ಲಿ ಅಳಿದುಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಸೇವಿಸುತ್ತಿದ್ದರು. ಮತ್ತು ಇದನ್ನೇ ವಾರಗಟ್ಟಲೆ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಇದರಿಂದಾಗಿ ಅವರ ಆರೋಗ್ಯದ ಮೇಲೆ ತೀವ್ರ ತರಹದ ಸಮಸ್ಯೆಗಳು ಉಂಟಾಗಿ ಕ್ಷಯ, ಅನೀಮಿಯ ಇನ್ನೂ ಅನೇಕ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದರು. ಈ ಸಾಮಾಜಿಕ ಕಟ್ಟುಪಾಡಾದ ಅಜಲಿಗೆ ತುತ್ತಾಗಿ ತಮ್ಮ ಸಂತತಿಯನ್ನೇ ನಾಶ ಮಾಡಿಕೊಂಡರು. ಇದರಿಂದ ಒಂದು ಪೀಳಿಗೆಯೇ ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿದೆ. ಪ್ರಸ್ತುತ ಅಜಲು ನಿಷೇಧ ಕಾಯ್ದೆಯು ಜಾರಿಯಾಗಿ ಸರಕಾರ ರಕ್ಷಣೆ ನೀಡುತ್ತದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅನೌಪಚಾರಿಕವಾಗಿ ಸಮಾಜ ಮತ್ತು ಶಿಕ್ಷಿತ ಕೊರಗೇತರರು ಅಜಲು ಪದ್ಧತಿಯನ್ನು ಜೀವಂತವಿರಿಸಿದ್ದಾರೆ. ವೈಜ್ಞಾನಿಕವಾಗಿ ಚಂದ್ರನ ಮೇಲೆ ಕಾಲಿಡುವ ಯುಗದಲ್ಲಿರುವ ಸಮಾಜ ಅಮಾವಾಸ್ಯೆಯ ದಿನ ಕೊರಗರನ್ನು ಕರೆಸಿ ತನ್ನ ಶನಿ ಗ್ರಹಚಾರಗಳನ್ನು ವರ್ಗಾಯಿಸುವ ಪದ್ಧತಿಯನ್ನು ಉಳಿಸಿಕೊಂಡಿದೆ. ಈ ದ್ವಂದ್ವದಲ್ಲಿ ಕೊರಗ ಯುವಜನರು ಜೀವನದ ಭರವಸೆಯನ್ನು ಕಳೆದುಕೊಂಡಿದ್ದಾರೆ.
ಅಜಲು ನಿಷೇಧವಾಗದೆ ಕೊರಗರ ಅಭಿವೃದ್ಧಿ ಅಸಾಧ್ಯ. ಯಾಕೆಂದರೆ ಕೊರಗರು ಈ ಅನಿಷ್ಟ ವರ್ತುಲದೊಳಗೆ ಸಿಲುಕಿ ಅರ್ಧ ಸರ್ವನಾಶವಾಗಿದ್ದಾರೆ. ಇವತ್ತಿನ ತಂತ್ರಜ್ಞಾನದ ಕಾಲಘಟ್ಟದವರೆಗೆ ಅಜಲು ಮುಂದುವರೆದಿದೆ ಎಂದರೆ ನಂಬಲು ಅಸಾಧ್ಯ. ಈ ಒಂದು ಅನಿಷ್ಟ ಪದ್ಧತಿ ಕೊರಗ ಸಮುದಾಯವನ್ನು ಮಾನಸಿಕವಾಗಿ ಎಷ್ಟು ಹಿಂಸಿಸಿದೆ ಎಂದರೆ ಮನಶಾಸ್ತ್ರದ ಪ್ರಕಾರ ಒಂದು ಮಾನಸಿಕ ಹಿಂಸೆಯು ಯುದ್ಧ ಹಿಂಸೆಯಷ್ಟೇ ಪ್ರಖರವಾಗಿದ್ದು, ಯುದ್ಧ ಹಿಂಸೆಗೆ ಒಳಗಾದಾಗ ಆಗಬೇಕಾದ ಚಿಕಿತ್ಸಾ ವಿಧಾನವನ್ನು ನಿರ್ವಹಿಸಬೇಕಾಗಿದೆ. ಕೊರಗರು ಶತಮಾನಗಳಿಂದ ಅಷ್ಟೊಂದು ಗಾಢ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.
ಕೊರಗರನ್ನು ಸಂರಕ್ಷಿಸುವ ಜೊತೆ-ಜೊತೆಗೆ ಅಭಿವೃದ್ಧಿಯನ್ನು ಅಂದರೆ ಆರ್ಥಿಕ, ಸಾಮಾಜಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ಕೈಗೊಳ್ಳಬೇಕು. ಅವರ ಜೀವನಾಧಾರಕ್ಕೆ ಸುಸ್ಥಿರವಾದ ರಚನಾತ್ಮಕ ಕಾರ್ಯದೊಂದಿಗೆ ಉದಾಹರಣೆಗೆ ಕೇರಳ ಮಾದರಿ ಅರಲಂ ಬುಡಕಟ್ಟು ಪುನರ್ವಸತಿಯಂತೆ 5,000 ಎಕರೆ ಭೂಮಿಯನ್ನು ಕಾಯ್ದಿರಿಸಿ ಅವರ ಸಾಮಾಜಿಕ. ಆರ್ಥಿಕ, ಅಭಿವೃದ್ಧಿಯನ್ನು ಕೈಗೊಂಡು ನಶಿಸುತ್ತಿರುವ ಕೊರಗ ಸಮುದಾಯವನ್ನು ಸಂರಕ್ಷಿಸಬೇಕಾಗಿದೆ. ಶತಮಾನಗಳಿಂದ ಸಾಂವಿಧಾನಿಕವಾಗಿ ಹಕ್ಕುಗಳಿಂದ ವಂಚಿತವಾದ ಕೊರಗ ಸಮುದಾಯವನ್ನು ಈ ತರಹದ ರಚನಾತ್ಮಕ ಕಾರ್ಯ ಯೋಜನೆ ಮುಖಾಂತರ ಮುಂದಿನ 20 ವರ್ಷದ ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಕೈಗೊಂಡಲ್ಲಿ ಖಂಡಿತವಾಗಿಯೂ ಮುಖ್ಯ ಭೂಮಿಕೆಯಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯ ಮತ್ತು ಸಾಮಾಜಿಕ ನ್ಯಾಯ ದೊರೆತಂತಾಗುತ್ತದೆ.
ಡಾ. ಸಬಿತಾ ಕೊರಗ
ಸಹಾಯಕ ಪ್ರಾಧ್ಯಾಪಕರು,ಸಮಾಜ ಶಾಸ್ತ್ರ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ.
ಇದನ್ನೂ ಓದಿ- http://ಒಳಮೀಸಲು : ಸಮಬಾಳು -ಸಮಪಾಲಿಗೆ ತೆರೆದ ಬಾಗಿಲು! https://kannadaplanet.com/internal-reservation/