ಕೋಡಿ ಉಣ್ಣದಕ್ಕ ಪರಿಣಾ ಒಡಿದಿತ್ತು!

Most read

ಇದ್ದೂರು ಬಿಟ್ಟು ಬೆಂಗಳೂರಿಗೆ ಕಲಿಕೆಗೆ ಅಂತ ಬಂದು ಕಲತು ಕೆಲಸ ಮಾಡಲಿಕ್ ಶುರು ಮಾಡಿ ಎರಡು ವರ್ಷ ಮ್ಯಾಲ ಆಯಿತು. ಯಾವಾಗಾನು ಬೆಂಗಳೂರು ದಿಂದ ಗುಲ್ಬರ್ಗ ಹೋಗಲಿ ಗುಲ್ಬರ್ಗ ದಿಂದ ಬೆಂಗಳೂರಿಗೆ ಬರಲಿ ಟ್ರೈನ್ ರಿಸರ್ವೇಶನ ಮಾಡಕೊಂಡು ಬರಮು ಅಂದ್ರ ಆಗಲ್ಲ, ಯಾಕ ಅಂದ್ರ ಹಿಂತಾ ದಿನ ಹೋಗಬೇಕು ಅಂತ ಅಡ್ವಾನ್ಸ್ ಪ್ಲಾನ್ ಮಾಡಕೊಂಡು ಊರಿಗಿ  ಹೋಗಲಕ ಆಗಲಾರದ ಮಾತ ಆದ್ರ ಹಿಂತಾ ದಿನನೇ ಹೊಳ್ಳಿ ಬರ್ಬೇಕು ಅನ್ನೋದರೆ ಫಿಕ್ಸ್ ಆಗಿರ್ತದ. ಅಂದ್ರ ನಾ  ಕೆಲಸ ಮಾಡ ಸಂಸ್ಥೆ ಪತ್ರಿಕಾ ಮಾಧ್ಯಮ ಅದಕ್ಕೆ ತಿಂಗಳನುಗಟ್ಟಲೆ ಆಸರಕಿ, ಬ್ಯಾಸರಕಿ ಏನು ಇಲ್ದೆ ಸುಮ್ಮ ತಲಿ ಬಗ್ಗಸಕೊಂಡು ಕೆಲಸಕ್ಕ ಹೋದ್ರ ಸುಟ್ಟಿ ಉಳಸಕೊಂಡರ ನಾಲ್ಕ ರಿಂದ ಐದು ದಿನ ಸುಟ್ಟಿ ಸಿಗತವ.

ಹಿಂತಾ ಪರಿಸ್ಥಿತಿನ್ಯಾಗ ಅಡ್ವಾನ್ಸ್ ಟ್ರೈನ್ ರಿಸರ್ವವೇಶನ ಮಾಡಸಲಕ ಆಗಲಾರದಕ್ಕ ಒಂದ ವೇಳೆ 15 ದಿನ ಮೊದಲ ಟ್ರೈನ್ ರೀಸರ್ವವೇಷನ ಮಾಡಿಸದ್ರುನೂ  ‘ಅದೇನೋ ಅಂತಾರಲ್ಲ ಕೋಡಿ ಉಣ್ಣದಕ್ಕ ಪರಿಣಾ ಒಡಿದಿತ್ತು’ ಅಂತ ಪರಿಣಾ ಅಂದ್ರ ಮಣ್ಣಿನ ತಾಟ-ಗಂಗಳ ಅಂತ ಅರ್ಥ. ಸೀಟ್ ಕನ್ಫರ್ಮ್ ಆಗಲ್ಲ ಅದಕ್ಕ ಈ ಆಡು ನುಡಿ ಹೊಂದತದ.

ಈ ಸಲ ಆಗಿದ್ದು ಹಂಗೆ. ಫ್ರೆಂಡ್ಸ್ ಎಲ್ಲಾ ಬೈಯೋರು. ಯಾಕ ಅಂದ್ರ ಏನವ್ವ ನಿಮ್ಗ ಹಬ್ಬಕ್ಕಾ, ಹುಣ್ಣಿಗಿ ಸುಟ್ಟಿ ಸಿಗಲ್ಲ ಬರಲಕ ಹೋಗಬ್ಯಾಡ ನಿ, ನಿ ನಡಬರಕ್ ಬರಬೇಕು ಒಟ್ಟಾ ಭೆಟ್ಟಿ ಆಗದು ಆಗಲ್ಲ ಏನಿಲ್ಲ ಅಂತ ಅಪರೂಪಕ್ಕ ಈ ಸಲ ಸಂಕ್ರಾಂತಿ ಹಬ್ಬಕ್ಕಂತ ಕಾಡಿ, ಬೇಡಿ 5 ದಿನ ಸುಟ್ಟಿ ತಗೊಂಡು ಊರಿಗಿ ಹೋಗಾಮು ಅಂತ ಅನ್ನೋದು ಆಯಿತು ಅನ್ಕೊಂಡು ಶನಿವಾರ,  ಐತಾರ ಅಂದ್ರ ಸೀಟ್ ಬುಕ್ ಮಾಡಿದ್ರು  ಹೆಂಗು ಕನ್ಫರ್ಮ್ ಆಗಲ್ಲ ಅಂತ ಗೊತ್ತಿತ್ತು ಅದ್ಕ ಬೆಂಗಳೂರು ಇಂದ ಬರಾಗ ಬಸ್ಸಿಗಿ ಬಂದು ಹೋಗಾಗ ಟ್ರೈನ್ ಟಿಕೆಟ್ ಬುಕ್ ಮಾಡದೇವು ತಮ್ಮ ಕಾಶಿ ನಾನು, ಆದ್ರ ಅವಗೆ ಹೇಳದಲ್ಲ ಕೋಡಿ ಉಣ್ಣದಕ್ಕ ಪರಿಣಾ ಒಡಿದಿತ್ತು ಹಂಗೆ ಆಯಿತು. ಟಿಕೆಟ್ ಕನ್ಫರ್ಮ್ ಆಗತವ, ಆಗತವ  ಅಂತ ಸಂಜೀತನಕ ಕಾಯ್ದರು ಕನ್ಫರ್ಮ್ ಆಗಲಿಲ್ಲ ಆದ್ರ ಇವತ್ತ ಶುಕ್ರವಾರ ಆದ ಸವಲ್ಪ ಸಡಲ ಇರಬಹುದು ಅಂತ  ಜನರಲ್ ಬೋಗಿಗೆ ಹೋಗಾಮು ಅಂತ  ಬಂದು ಸ್ಟೇಷನನ್ಯಾಗ್ ಕುಂತು ರಶ್ ಇದ್ದಿದ್ದಕ್ಕ ಹಾಸನ ಸೋಲಾಪುರ್  ಬಿಟ್ಟೇವು ಬಸವ ಎಕ್ಸ್ಪ್ರೆಸನೂ ಹಂಗೆ ನುಗ್ಯಡಕೋತ ಲೇಡಿಸ್ ಭೋಗಿ ಏರಿದ. ನಿಂತ ಜಾಗರಣೆ ಮಾಡ ಪಾಳಿ ಆದ ಅನ್ಕೋತ ನಿಂದ್ರದಕ್ಕ ಸೀಟ್ ಸಿಕ್ಕತು.ಇಲ್ಲಿಂದ ಚಾಲು ನೋಡ್ರಿ ಅಸಲಿ ಕಥಿ.

ಟ್ರೈನ್ ಎರದಕ್ಕ ಹೋಗಿ ಬಿದ್ದು  ಕಾಲು ಮುರಿದು, ತಲಿಗಿ ಪೆಟ್ಟ ಆಗಿ ರಕ್ತ ಹೆಪ್ಪಗಟ್ಟಿ ಕೋಮದಾಗ ಹೋಗಿದ್ದವ್ವ ದಿಡಾ ಲಾಕ್ (ಒಂದುವರೆ ಲಕ್ಷ) ಖರ್ಚ್ ಆಗ್ಯಾದ ಅಂತ ಅನ್ನೋರು ಯಾರೇ ಜರ ಸರ್ದು ನಿಂತರುನು ಒಬ್ಬಕ್ಕಿ ಅವ್ವಾ ಮಾತಿಗೊಮ್ಮ.

ನಿನ್ನ ಸತ್ಯನ್ಯಾಸ ಆಗಲಿ ಅಂತ ಹುಡುಗಗ ಒಬ್ಬಕ್ಕಿ ಅಕ್ಕಾ ಬೈದದಕ್ಕ, ಆ ಹುಡುಗನ ಅವ್ವ ನಿ ನನ್ನ ಮಗನಿಗಿ ಸತ್ಯನ್ಯಾಸ ಆಗಲಿ ಅಂತ ಹೆಂಗ ಅಂದಿಯವ್ವ ನಾ ಲಾಕ್ ರೂಪಾಯಿ ಹಾಕಿನಿ ಆರಾಮ ಇಲದಕ್ಕ ನಿ ಏನಯವ್ವ  ಹಿಂಗ ಅಂತಿ ಬ್ಯಾರೆ ಏನರೆ ಬೈಯದಿತ್ತು ಅಂತ ಅಂದಳು.

ರಾಯಚರ್ ಬರದಕ್ಕ ಸ್ವಲ್ಪ ಸಡಲ ಆಯಿತು ಅಂತ ಎರಡು, ಮೂರು ವರ್ಷಿನ ಹುಡುಗ ಮತ್ತ ತಾಯಿ ಬಂದ್ರು ಇದ್ದಷ್ಟ್ರಗ ಅಡ್ಜಸ್ಟ್ ಆಗಿ ಮಗನ ಹೋತಕೊಂಡು ಕುಂತ್ರು. ಆದ್ರ ಆ ಜಾಗ ಅವ್ವ ಮಗನ್ನ ಹೋತಕೊಂಡು ಕೂಡೋಷ್ಟು ಆರಾಮ ಇದ್ದಿರಲಿಲ್ಲ ಅದಕ ಮಗನಿಗೆ ಕೆಳಗ ಕುಡಪ್ಪ ಅಂದ್ರ್ ಆ ಪಾರ (ಹುಡುಗ) ಕೂಡಲಿಲ್ಲ ಅದಕ ತಾಯಿನೇ ನಾನೆ ಕೆಳಗ ಕೂಡತೀನಿ ಅಂತ ಕುಂತ್ರು ಮಗಾ ಗಪ್ಪ ಆಗಿ ಸೀಟಿನ ಮ್ಯಾಲ ಕುಂತ. ಕೆಳಗ ಮಕ್ಕೊಂದರ ನಡಬರಕ ಜಾಗ ಅಡ್ಜಸ್ಟ್ ಮಾಡಕೊಂಡ ಕೂಡಲಕ ಒದ್ದಾಡಿದಳು ತಾಯಿ.  ಆ ಮಗನಿಗೆ ನಿದ್ದಿ ಆಗದಿರೋಕ್ಕೋ ಏನೋ ಗೊತ್ತಿಲ್ಲ ಮಲಗತಿಲ್ಲ ಅಳ್ಳತನ ನೀರ್, ಬೇಕು, ಉಣ್ಣತಿನಿ ಏನೇನು ಕೇಳಿದ್ರು ಹು, ಹುಂ ಗಪ್ಪಾಗಲಾರದದ ಪಾರ ಅಷ್ಟ್ರಗ ಪ್ಯಾನ್ ಹಾಕದಕ್ಕ ಗಪ್ಪ ಆದನು. ಆದ್ರ ಉಳಿದೋರು ನಮಗ ಚಳಿ ಆತದ ಅಂತ ಪ್ಯಾನ ಬಂದ ಮಾಡೋರು ಬರ, ಬರಿ  ಟ್ರೈನ್ ಏನು ಆಗಿತ್ತೋ ನಡಬಾರಕ್ ಒಂದ ತಾಸ ನಿಂತಿತ್ತು. ಬರ ಬರಿ ಮುರುವರಿ ತಾಸ ಆ ತಾಯಿ ಮಗನಿಗಿ ಹೋತಕೊಂಡು ನಿಂತು ಸಮಾಧಾನ ಮಾಡೇ ಬಿಟ್ಟಳು.

ಇಷ್ಟೂದ್ದ ಬರಿದಕ್ಕಿ ಜಾಗ ಬಿಟ್ಟಕೊಡಬೇಕು ಅಂತ ಅಚಾನಕ್ಕಾ ಒಟ್ಟ ಬ್ಯಾಸರ ಇಲ್ದೆ ಪೂರ್ತಿ ಬರಹ ಓದಿದೋರು ಪ್ರಶ್ನೆ ಕೇಳಬಹುದು.  ಆದ್ರ ಇದು ದೊಡ್ಡ ಮನಸು ಮಾಡಮಿ ಅಂತ ಸೀಟ್ ಕೊಡಲಕ ಇಲ್ಲಾಂದ್ರ, ಅಡ್ಜಸ್ಟ್ ಮಾಡಕೊಂಡು ಕೂಡಾಮು ಅಂದ್ರ್ ಗುಲ್ಬರ್ಗ ದಿಂದ ಬೆಂಗಳೂರುಕ ಎರಡು ಅಥವಾ, ನಾಲ್ಕು ತಾಸಿನ ಹಾದಿಯಲ್ಲ. 12 ತಾಸಿನ ಹಾದಿ ಅದ.  ಅದಕ್ ಅಡ್ಜಸ್ಟ್ ಮಾಡಕೊಂಡು ಕುಡಕ ಆಗಲ್ಲ. ಜಾಗ ಬಿಟ್ಟ ಕೊಟ್ಟ ತ್ಯಾಗಮಯಿ ಆಗಲಕನೂ ಆಗಲ್ಲ. ಆದ್ರ ತಾಯಿಯಂತ ತ್ಯಾಗಮಯಿ, ಸಹನಾಮಯಿ, ಪ್ರೇಮಮಯಿ ಯಾರು ಆಗಲಿಕ್ಕ ಸಾಧ್ಯ ಇಲ್ಲ. ಎಷ್ಟೇ ಸಂಬಂಧಗಳು ಬಂದು ಹೋದ್ರು ಒಬ್ಬ ಮನುಷ್ಯನ ಜೀವನದಲ್ಲಿ ತಾಯಿಗೆ ತಾಯೀನೇ ಸರಿ ಸಾಟಿ.

ಹಾ ನಾ ಹೇಳಬೇಕು ಅನ್ನೋದ ನೆನಪು ಆಯಿತ ಈಗ. ಗುಲ್ಬರ್ಗ ದಿಂದ ಬೆಂಗಳೂರಿಗಿ ಒಂದು ಹತ್ತ ಟ್ರೈನ್ ಇದ್ದೀರಬೇಕು ಕರೆಕ್ಟ್ ಆಗಿ ನಾ ಲೆಕ್ಕ ಹಾಕಿಲ್ಲ.  75% ಜನರು  ಜನರಲ್ ಡಬ್ಬಿಗಿ ಬರುವಂತಹ ಜನರ ಹಾರ ಅಂದ್ರ್ ಅವರಿಗಿ ಇರುವ ಈ ಹತ್ತ ಟ್ರೈನ್ ಒಳಗ ಎಲ್ಲೋಷ್ಟೋಕು ಜನರಲ್ ಡಬ್ಬಿ ಇರದು. ಬರಿ ಹಿಂದ ಎರಡು ಮುಂದ ಎರಡು ಅಷ್ಟೇ. ಉಳಿದಿದ್ದ ಎಲ್ಲಾ ಡಬ್ಬಿಗೋಳ ರಿಸರ್ವೇಶನ್ ಇರ್ತಾವ. ಇದ್ರಾಗ್ ಹೋಗೋರು ಶ್ರೀಮಂತರು ಅಂತ ಅನ್ಸಕೊಂಡೋರು ಮತ್ ಅಲ್ಪ, ಸ್ವಲ್ಪ ತತ್ಕಾಲ ರಿಸರ್ವೇಶನ್ ಹೆಂಗ ಮಾಡಬೇಕು ಏನು ಅಂತ ಗೊತ್ತಿದ್ದೋರು ಹೋಗತಾರ.

ಸ್ಪರ್ಧಾತ್ಮಕ ಪರೀಕ್ಷೆ ಸ್ಪರ್ಧಾತಿಗಳು , ಆರಾಮಿಲ್ಲದ್ಕ ದವಾಖಾನಿಗಿ ಹೋಗೋರ, ಹೊಟ್ಟಿ ಪಾಡಿಗಿ ಊರ-ಊರಿಗಿ ಮಾಡಿ ಉಳ್ಳಾಕ ಹೋಗೋರು  ಅಷ್ಟೇ ಜನರಲ್ ಭೂಗಿ ಒಳಗ ಇರೋರು ಆದ್ರ  ಈ ತರದ ಹೈರಾಣಗೊಳ ಎಲ್ಲಾ ಅನುಭವಿಸೋರು ಇವರ ಹೈರಾಣ ಎಲ್ಲಾ ಈ ರಾಜಕಾರಣಿಗಳಿಗೆ ಯಾವುದಕ್ಕೂ ಲೆಕ್ಕಕ್ಕ ಇಲ್ಲ. ಎಲೆಕ್ಷನ್ ಟೈಮಿಗಿ ಓಟ್ ಬ್ಯಾಂಕ ಹೊರತಾಗಿ. ಒಂದು ಒಂದೇ ಭಾರತ ರೈಲ್ವೆ ಬಿಡದರ ಪಾಲಿಂದು ಇರ ನಾಲ್ಕು ರೈಲ್ವೆಗಿ ಎರಡು, ಎರಡು ಜನರಲ್ ಭೂಗಿ ಹೆಚ್ಜಗಿ ಮಾಡಿದ್ರ್ ಇವರಗಿ ಎನ ಆತದ ನನಗ ತಿಳಿಯವಲದು ಆದ್ರ ದಶಕದ ಕೂಗು ಯಾ ದಿನ ಈ ರಾಜಕಾರಣಿಗಳ ಕಿವಿ ಕೆಳತದೋ ಗೊತ್ತಿಲ್ಲ, ಅದ್ಕ ಇನ್ನ ಸಾಮಾನ್ಯ್ ಜನ ಸಾಯಬೇಕು,  ಏನು ಮಾಡಬೇಕು  ತಿಳಿಯವಲ್ಲದು. ಜರ್ನಿ ಮಾಡಬೇಕು ಆದ್ರ ಕೂಡಲಕ್ ಜಾಗ ಸಿಕ್ಕರ ಸಾಕು ಜಂಪ್ ಹತ್ತತ್ತಿತ್ತು, ಆದ್ರ ಇವತ್ತ ಕಣ್ಣಿಗಿ ಕಣ್ಣ ಹತ್ತಲಿಲ್ಲ ನಿದ್ದಿ ಬರಲಿಲ್ಲ.

ಯಾರು, ಯಾರು ಈ ಬರಹ ಬ್ಯಾಸರ ಇಲ್ಲದೆ ಪೂರ್ತಿ ಓದತಿರೋ ಅವ್ರಿಗೆಲ್ಲ ಏನೆಲ್ಲಾ ಮಾಡಬಹುದು ಸರ್ಕಾರ, ಸಚಿವರ, ರಾಜಕಾರಣಿಗಳ ಕಿವುಡ ಆದ ಕಿವಿಗಳು ಕೇಳಲಿಕ್ಕೆ ಏನೇನು ಔಷದಿ ಇದ್ರ ದಯವಿಟ್ಟು ತಿಳಸ್ರಿ…..

ರೇಣುಕಾ ಹನ್ನುರ್, ಕಲಬುರ್ಗಿ

ಯುವ ಬರಹಗಾರ್ತಿ


ಇದನ್ನೂ ಓದಿ- http://ಕಣ್ಮನ ಸೆಳೆದ ಎನ್ ಎಸ್ ಡಿ ನಾಟಕ “ಮಾಯ್ ರಿ ಮೇ ಕಾ ಸೇ ಕಹೂ” https://kannadaplanet.com/eye-catching-nsd-drama/

More articles

Latest article