ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನೇ : ಸಚಿವ ಕೆಎನ್​ ರಾಜಣ್ಣ

Most read

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಸಚಿವರಿರುವ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಆದರೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಅಚ್ಚರಿಯ ಗೆಲುವು ದಾಖಲಿಸಿದರೆ, ಗೃಹಸಚಿವ ಪರಮೇಶ್ವರ್​ ತವರು ಕ್ಷೇತ್ರವಾದ ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್​ ರಾಜಣ್ಣ, ನಾನು ಹಾಸನದ ಜಿಲ್ಲಾ ಉಸ್ತುವಾರಿ ಸಚಿವ, ಹಾಗಾಗಿ ಇಲ್ಲಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ನನ್ನದಾಗಿತ್ತು. ಆದರೆ ತುಮಕೂರಲ್ಲಿ ನನ್ನ ಪಾತ್ರ ಹೆಚ್ಚಿರಲಿಲ್ಲ ಎಂದು ಆ ಸೋಲಿಗೆ ತಮ್ಮ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

ಹಾಸನದ ಸಕಲೇಶಪುರದಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ನಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವ, ನನಗೆ ಹಾಸನದ ಚುನಾವಣೆ ಜವಾಬ್ದಾರಿ ಕೊಟ್ಟಿದ್ರು. ತುಮಕೂರಿಗೆ ನಾನು, ಪರಮೇಶ್ವರ್ ಮಂತ್ರಿಗಳಾಗಿದ್ದೇವೆ. ಆದರೆ ನಾನು ಹಾಸನ ಜಿಲ್ಲೆಯ ಚುನಾವಣೆ ಬಗ್ಗೆ ಹೆಚ್ಚು ಒತ್ತು ಕೊಟ್ಟೆ. ತುಮಕೂರು ಚುನಾವಣೆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ನನ್ನದೊಂದು ಮಧುಗಿರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸದಿದ್ದರೆ ಹಾಸನಕ್ಕೆ ಬರಲ್ಲ ಅಂತ ಹೇಳಿದ್ದೆ, ಈಗ ಗೆಲ್ಲಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ, ಎಲ್ಲಾ ಪಕ್ಷ, ಜಾತಿಯವರು ಮತ ಹಾಕಿದ್ದಾರೆ. ಪುಟ್ಟಸ್ವಾಮಿಗೌಡರ ಹೆಸರಿನ ಆಧಾರದ ಮೇಲೆ ಹೆಚ್ಚಿನ ಬಹುಮತ ಬರಲು ಸಾಧ್ಯವಾಗಿದೆ. ಈ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ ಎಂದು ಅವರಿಗೆ ಅಭಿನಂದನೆ ಸಲ್ಲಿಸಬೇಕು. ನಾನೇ ಗೆಲ್ಲಿಸಿದ್ದೀನಿ ಅಂತಾ ಹೇಳಿದ್ರೆ, ಅದು ದುರಂಹಕಾರದ ಮಾತಾಗುತ್ತೆ ಎಂದರು.

ಕಳೆದ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನೇ, ಅದರಲ್ಲಿ ಅನುಮಾನ ಏನು ಇಲ್ಲ. ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಎರಡು ಸಾವಿರ ಓಟು ಇರಲಿಲ್ಲ, ನಾನು ಅವರಿಗೆ ಎಂಭತ್ತು ಸಾವಿರ ಓಟು ಕೊಡಿಸಿದ್ದೆ. ಅದಕ್ಕೆ ಅವರು ಸೋತರು. ದೇವೇಗೌಡರು ಸೋಲಲು ನಾನೇ ಕಾರಣ, ನಾನೇ ಸೋಲಿಸಿದ್ದು ಅದರಲ್ಲಿ ಅನುಮಾನ ಏನಿಲ್ಲ. ತುಮಕೂರಿನಲ್ಲಿ ನಡೆದ ಅನೇಕ ಸಭೆಗಳಲ್ಲಿ ನಾನು ಹೇಳಿದ್ದೀನಿ. ದೇವೇಗೌಡರು ತುಮಕೂರಿಗೆ ಬಂದು ನನ್ನನ್ನು ಸೋಲಿಸಿದೆ ಎಂದು ಎದೆ ಬಡಿದುಕೊಂಡು ಕಣ್ಣೀರಿಟ್ಟರು. ಮುಚ್ಚು ಮರೆ ಮಾಡುವ ಅವಶ್ಯಕತೆ ನನಗೇನಿಲ್ಲ ಎಂದು ಹೇಳಿದ್ದಾರೆ.

More articles

Latest article