ಕಿತ್ತೂರು ಕಥನ | ಭಾಗ 3

Most read

ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ನೋಡಬಾರದು ಅಂತ ಏಕೆ ಹೇಳಿದರು? ನನ್ನದು ಅನ್ನುವ ಏನನ್ನೂ ಗುರುತಿಸಿಕೊಳ್ಳಲಾಗದ, ಇಟ್ಟುಕೊಳ್ಳಲಾಗದ, ಇರಲಾಗದ ತಾವನ್ನು ಮತ್ತೆಮತ್ತೆ ಲೋಕ ಕೆದಕದೆ ಇರಲಿ ಎಂದೇ? ನಂತರ ತಲುಪಿದ ಸ್ಥಿತಿಗೂ, ಅದರ ಮೂಲಕ್ಕೂ ಇರುವ ವ್ಯತ್ಯಾಸವನ್ನು ಗಮನಿಸದಿರಲೆಂದೇ? ಇಂಥ ವಿನೀತ ಆರಂಭದಿಂದ ಎಲ್ಲವೂ ಹೊರಡುವುದು ಎಂಬ ವಾಸ್ತವ ಸತ್ಯವನ್ನು ನಿರಾಕರಿಸಲೆಂದೇ!?

ಚೆನ್ನಮ್ಮ ಹುಟ್ಟಿದ ಜಾಗವೀಗ ಮಣ್ಣಗುಪ್ಪೆ

ಕಿತ್ತೂರಿನ ರಾಣಿಯಾದ ಕಾಕತಿಯ ಚೆನ್ನಮ್ಮ ಹುಟ್ಟಿದ ಊರನ್ನೂ, ಮದುವೆಯಾಗಿ ಮಹಾವಲಸೆ ಹೋಗಿ ನೆಲೆಗೊಂಡ ಕಿತ್ತೂರನ್ನೂ ನಾವು ಇಟ್ಟಿರುವ ಸ್ಥಿತಿ ನೋಡಿದಾಗ ಈ ವಿಷಯ ಕೊರೆಯುತ್ತದೆ. ಕಿತ್ತೂರಿನ ಕೋಟೆ, ಅರಮನೆ, ಗುರುಮನೆ, ಅವಳ ಗಂಡನ ತಲೆಮಾರಿನ ಹಿರೀಕರ ಸಮಾಧಿ, ಮಠ, ಅವಳ ಸಮಾಧಿಯಿರುವ ತಾಣ, ಅವಳಿಂದ ಸೋಲನುಭವಿಸಿದ ಬ್ರಿಟಿಷ್ ಅಧಿಕಾರಿಗಳ ಮರಣ ಸ್ಮಾರಕಗಳು, ಲಾವಣಿ ಪದಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಅವು `ಅಭಿವೃದ್ಧಿ’ಗೊಂಡು ಅಷ್ಟಿಷ್ಟಾದರೂ ಸಂರಕ್ಷಿಸಲ್ಪಟ್ಟಿವೆ. ಆದರೆ ಚೆನ್ನಮ್ಮ ಎಂಬ ಹುಡುಗಿಯು ದಿಟ್ಟ, ಸ್ವಾತಂತ್ರ್ಯ ಪ್ರೇಮಿ ಸ್ವಾಭಿಮಾನದ ಹೆಣ್ಣಾಗಿ ಹೇಗೆ ಬೆಳೆದಳು ಎಂದು ಅವಳ ತವರನ್ನು ಶೋಧಿಸುವ, ತಿಳಿಯುವ ಆಸಕ್ತಿ ಸಮಾಜಕ್ಕಿಲ್ಲ ಎನ್ನುವುದು ಅವಳ ತವರು ಕಾಕತಿಯನ್ನು ನೋಡಿದರೆ ತಿಳಿಯುತ್ತದೆ. `ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಗಂಡರಿಮೆಯ ಸಮಾಜ ನಮ್ಮದಾಗಿರುವುದರಿಂದ ಅವಳ ತವರು ಕಾಕತಿ ನಮಗೆ ನಗಣ್ಯ. (ಕನ್ನಡದ ಯಾವುದೇ ಹಿರಿಯ ಲೇಖಕಿಯ ಮನೆ/ಊರು/ತಾವು ಸ್ಮಾರಕವಾಗಿಲ್ಲದಿರುವುದು ಇದೇ ಕಾರಣದಿಂದ ಇರಬಹುದು.)

ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೆಳಗಾವಿ ಕಳೆದು ಆರು ಕಿಲೋಮೀಟರ್ ಕ್ರಮಿಸಿ ನಂತರ ಸಿಗುವ ಕಾಕತಿಯಲ್ಲಿಳಿದರೆ ಸುಡುಬಿಸಿಲಿನ ಜೊತೆಗೆ ಇಂಥ ಹೆಣ್ಣು ವಾಸ್ತವಗಳೂ ಸುಡುತ್ತವೆ.

ವಾಡೆಯ ಜಾಗದಲ್ಲಿರುವ ಫಲಕ

ಕಾಕತಿ ಊರನ್ನು ಹೆದ್ದಾರಿಯು ಇಬ್ಭಾಗಿಸಿದೆ. ಪುಣೆಗೆ ಹೋಗುವ ದಿಸೆಯಲ್ಲಿ ಹೆದ್ದಾರಿಯಿಂದ ಎಡಬದಿಗೆ ನೆಲಕ್ಕಿಳಿದು ಹೋದರೆ ಮೊದಲಿಗೇ `ದೇಸಾಯರ ಗಲ್ಲಿ’ ಕಾಣುತ್ತದೆ. ಅಲ್ಲಿಂದ ಎಡಭಾಗದಲ್ಲಿ ಹೆಚ್ಚುಕಡಿಮೆ ಒಂದು ಕಿಲೋಮೀಟರ್ ಕ್ರಮಿಸಿದರೆ ಚೆನ್ನಮ್ಮ ಹುಟ್ಟಿದ ವಾಡೆಯಿದ್ದ ಸ್ಥಳವಿದೆ. ಬಲಬದಿಗೆ ಒಂದೆರೆಡು ಕಿಲೋಮೀಟರು ಕ್ರಮಿಸಿದರೆ ಪುಟ್ಟ ದಿಬ್ಬ. ಅದರ ಮೇಲೆ ಚೆನ್ನಮ್ಮ ಆಡಿ, ಕಲಿತು, ಬೆಳೆದ ಕೋಟೆಯಿದೆ. ಅದಷ್ಟೂ ಜಾಗ `ದೇಸಾಯರ ವಾಡೆ’ಯಾಗಿ ಅವರಿಗೇ ಸೇರಿತ್ತು. ಬರಬರುತ್ತ ಜನವಸತಿ ತಲೆಯೆತ್ತಿ ಈಗ ನೂರಾರು ಮನೆಗಳು ಕಿಕ್ಕಿರಿದಿವೆ. ಆ ಕಾಲದ ತುಣುಕೊಂದು ಇಲ್ಲಿ ಬಂದು ಬಿದ್ದಿದೆಯೋ ಎನ್ನುವಂತೆ ನಮ್ಮ ಕಡೆ ಕಾಣುವುದೇ ಅಪರೂಪವಾಗಿರುವ ಕಪ್ಪು ನಾಡಹೆಂಚಿನ ಮನೆಗಳು, ಮಣ್ಣುಗೋಡೆಗಳು, ಹಳೆಯ ವಾಸ್ತುಶೈಲಿಯ ಉಪ್ಪರಿಗೆ ಮನೆಗಳು ಕಾಣಸಿಗುತ್ತವೆ. ಬಹುತೇಕ ಮನೆಗಳ ಗೋಡೆಯ ಮೇಲೆ ಶಿವಾಜಿಯ ಚಿತ್ರ, ಶಿಲ್ಪವಿದೆ.

ಕಿತ್ತೂರು ಕಥನ ಭಾಗ ೧ ಓದಿದ್ದೀರಾ? ಕಿತ್ತೂರು ಕಥನ | ಭಾಗ 1

ನಾವು ಹೋದ ಉರಿಬಿಸಿಲಿನ ಮಧ್ಯಾಹ್ನ ಮಹಿಳೆಯರು ಇನ್ನೇನು ತಾಟಿನ ಮುಂದೆ ಬಂದು ಕೂರಲಿರುವವರಿಗಾಗಿ ಅಟ್ಟುವ ತಯಾರಿಯಲ್ಲಿ ಸರಬರ ಓಡಾಡತೊಡಗಿದ್ದರು. ಮನೆಗಳಿಂದ ಹೊರಸೂಸುವ ಗಮಲುಗಳೇ ಅದನ್ನು ತಿಳಿಸುತ್ತಿದ್ದವು. ಮನೆಗಳ ಕಾಡಿನಲ್ಲಿ ಚೆನ್ನಮ್ಮ ಹುಟ್ಟಿದ ಜಾಗ ಯಾವುದು ಎಂಬ ಮಾರ್ಗಸೂಚಿ, ಫಲಕ ಯಾವುದೂ ಕಾಣದೇ ಹೋಯಿತು. ಮಗುವನ್ನು ಚಚ್ಚಿಕೊಂಡು ವಾಟೆ ಹಿಡಿದು ಸರಸರ ಬರುತ್ತಿದ್ದ ಒಬ್ಬಾಕೆಯನ್ನು ಕೇಳಿದರೆ ಕೈಯಾಡಿಸುತ್ತ ಹೋದಳು. ಮತ್ತೊಂದಿಬ್ಬರೂ ಅವಳಂತೆಯೇ ಗೊಣಗಿದರು. ಓಹೋ, ಹೆಂಗಸರಿಗೆ ಕೆಲಸದ ಗಡಿಬಿಡಿ. ಖಾಲಿ ನಿಂತಿದಾನಲ್ಲ ಇವನನ್ನ ಕೇಳುವಾ ಎಂದು ಬೈಕ್ ಒರಗಿ ನಿಂತ ಪೋರನ ಬಳಿ ಕೇಳಿದೆ. ಊರಿನಲ್ಲಿ ಬಹುತೇಕರು ಮರಾಠಿ ಮಾತನಾಡುವವರು, ಅದಕ್ಕೇ ನೀವು ಕೇಳಿದ್ದು ಅವರಿಗೆ ಅರ್ಥ ಆಗಿಲ್ಲವೆಂದು ದೂರದಿಂದಲೇ ನನ್ನ ಗಮನಿಸಿದ್ದ ಅವನು ತಿಳಿಸಿದ.

ಕರಿ ನಾಡ ಹೆಂಚಿನ ಮಣ್ಣು ಗೋಡೆಯ ಮನೆಗಳು ಕಾಕತಿ

ಅವನೆಂದಂತೆ, `ಅಲ್ಲಿಂದ ಇಲ್ಲೀಮಟ ಜಾಗಾ ಚನ್ನಮ್ಮ ರಾಣೇರ ಅಪ್ಪಾರು ದೇಸಾಯರದಾ ಆಗಿತ್ತಂತರಿ. ಅರ‍್ಯಾರೂ ಬರವಲ್ಲಾಗ್ಯಾರ ಈಗ. ಅವ್ರ ವಾಡೇ ಸನೇಕ ಮಂದೀ ಕುರಿ ಮೇಸಾಕ್, ಕುಳ್ಳು ಒಣಗಿಸಾಕ್ ಹತ್ತಿದರ‍್ರಿ. ಬರಬರತ ಬೇಲಿ ಹಾಕೊಂದು, ಮನಿ ಕಟಗೊಂದು ನಮದೆ ಅನಲಿಕ್ ಹತ್ತಿದರ‍್ರಿ. ಅದಕ ದೇಸಾಯರ ಮಂತಾನದೋರು ಬಂದು ಕಂಪೌಂಡ್ ಬೇಲಿ ಹಾಕಿಶಿ, ಗೇಟ ಕೂಡಿಶಿ, ಬೀಗ ಹಾಕಿ ಹೋಗ್ಯಾರರಿ. ಯಾವಾಗರೆ ಒಮ್ ಬಂದು ಯಾರರೆ ಕಿತ್ತು ಒಗದಾರ ಹ್ಯಂಗಂತ ನೋಡಿ ಹೋಗತರ‍್ರಿ, ಆಟಾ. ಈಗಲ್ಲೆ ನೆಲ ಸಪಾಟೈತಿ, ಏನಿಲ್ಲ’.

ಅವ ಏನಿಲ್ಲ, ಏನಿಲ್ಲ ಅಂದರೂ ದೇಸಾಯರ ವಾಡೆಯಿರುವ ತಾವಿನ ಗುರುತು ಪಡೆದು ಮುಂದೆ ಬಂದೆವು. ಅಲ್ಲಿ ಕುಸಿದ ಬಿದ್ದ ಕಲ್ಲುಮಣ್ಣುಗಳ ಪುಟ್ಟ ದಿಬ್ಬ ಕಂಡಿತು. ಅದೇ ಧೂಳಪ್ಪ ಗೌಡ ದೇಸಾಯರ ಮಗಳಾಗಿ (ಅವಳಮ್ಮನ ಹೆಸರೇನೋ!?) ಚೆನ್ನಮ್ಮ ಹುಟ್ಟಿ ಬೆಳೆದ ಜಾಗ. ರಾಣಿ ಚೆನ್ನಮ್ಮನೇನೂ ತೀರಾ ಹಿಂದಿನವಳಲ್ಲ. 250 ವರ್ಷಗಳ ಹಿಂದೆ ಕಟ್ಟಿದ ಕಲ್ಲುಮಣ್ಣಿನ ಮನೆಗೆ ಒಳಗಿದ್ದು ರಕ್ಷಿಸುವವರ ಕಾಳಜಿಯೂ ಸಿಗದೇ; ಎದುರಾಳಿ ಮನುಷ್ಯರು-ಪ್ರಾಣಿಕ್ರಿಮಿಕೀಟಗಳು-ಗಿಡಗಂಟಿಗಳ ದಾಳಿ ಎದುರಿಸಲೂ ಸಾಧ್ಯವಾಗದೇ ಕುಸಿದು ಮಣ್ಣುಗುಪ್ಪೆಯಾಗಿ ಹೋಗಿದೆ.

ಚೆನ್ನಮ್ಮನು ಅಕ್ಷರಾಭ್ಯಾಸ, ಕುದುರೆ ಸವಾರಿ, ಯುದ್ಧ ವಿದ್ಯೆಗಳ ಕಲಿತದ್ದು ಅಲ್ಲಿಂದ ಸೀದಾ ನೇರ ಮತ್ತೊಂದು ದಿಕ್ಕಿಗೆ ಹೋದರೆ ಕಾಣುವ `ಕಿಲ್ಲಾದಾಗ’. `ಹೀಂಗ ಸೀದಾ ಹೋಗರಿ. ಡೆಡ್ ಎಂಡಿನ್ಯಾಗ ಕಿಲ್ಲಾದ ಮೆಟ್ಟಿಲು ಸಿಗತಾವ’ ಅಂದರು. ಕಿರಿದಾದ ರಸ್ತೆಯ ಎರಡೂ ಬದಿ ಇರುವ ಮನೆಗಳ ಹಾದು ಸಣ್ಣ ಗುಡ್ಡದ ಬುಡ ತಲುಪಿದೆವು. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳು. ಎಲ್ಲೆಂದರಲ್ಲಿ ಗುಪ್ಪೆ ಬಿದ್ದ ಕಸದ ರಾಶಿ.

ಕಿತ್ತೂರು ಕಥನ ಭಾಗ-೨ ಓದಿದ್ದೀರಾ? ಕಿತ್ತೂರು ಕಥನ | ಭಾಗ 2

`ಅಲ್ಲಿ ಮೇಲೆ ಏನೂ ಇಲ್ಲ, ಒಂದು ಕಡೆ ಸ್ವಲ್ಪ ಕಿಲ್ಲಾದ ಗೋಡೆ ಅದಾವ, ಒಂದು ಗುಹೆ ತರಾ ಐತಿ. ಕಲ್ಲು, ಗ್ವಾಡೆ ಬೀಳಂಗಾಗ್ಯಾವ. ಹುಶಾರಿ ಮತ್ತ’ ಅಂದರೊಬ್ಬರು. ನಾನೆಂದೂ ನೋಡಿರದ ಕಪ್ಪು, ಕಡುಗೆಂಪಿನ ಹಕ್ಕಿಯೊಂದು ಪಟಪಟನೆ ಬಂದು ಜಾಲಿ ಗಿಡದ ಮೇಲೆ ಕೂತು ಏನೋ ಕಿಲಕಿಲಕಿಲನುಲಿದು ಪಟ್ಟನೆ ಹಾರಿಯೇ ಹೋಯಿತು. ಚೆನ್ನಮ್ಮ ಹಕ್ಕಿ ರೂಪಿಯಾಗಿ ಬಂದು ಉಲಿದು ಹೋದಳು. `ಇರುವುದೆಲ್ಲ ಬಿದ್ದು ಹೋಗಿರುವಾಗ ಏನೂ ಇಲ್ಲದ ಹಾಗೆಯೇ ಕಾಣುತ್ತದೆ. ಆದರೆ ಇಲ್ಲದ ಕಡೆಯೂ ಏನೆಲ್ಲ, ಎಷ್ಟೆಲ್ಲ ಇರುತ್ತದೆ!’ ಎಂದ ಪಿಸುನುಡಿಯ ದನಿ ಕೇಳಿದಂತಾಯಿತು.

ಅಲ್ಲಿ ದಿಬ್ಬದ ಮೇಲೆ ಎರಡು ಸುತ್ತಿನ ಗೋಡೆಗಳು ಚಿಕ್ಕ ಆವಾರ ಸೃಷ್ಟಿಸಿವೆ. ಆವರಣದೊಳಗೊಂದು ಸಣ್ಣ ನೀರಿನ ಮೂಲವಿದೆ. ದೂರದೂರದವರೆಗೆ ಬಯಲು, ಗುಡ್ಡ, ಜೀವಾದಿಗಳ ಚಲನವಲನ ಕಾಣಬಹುದಾದಂತಹ ಐನಾತಿ ಜಾಗವೊಂದು ಪಶ್ಚಿಮ ದಿಕ್ಕಿನಲ್ಲಿದೆ. ಅದರ ತುದಿಗೆ ಬುರುಜು ಇದೆ. ಆ ಸ್ಥಳದಲ್ಲಿ ಎಲ್ಲ ವಿದ್ಯೆಗಳನ್ನು ಚೆನ್ನೆ ಕಲಿತಳು.

ಲೇಖಕಿ

ಅಲ್ಲಿನ ಇತಿಹಾಸದ ಬಗೆಗೆ ತಿಳಿಸುವ ಫಲಕ ನಿಲ್ಲಿಸುವುದಕ್ಕಾಗಲೀ, ಸ್ಮಾರಕವೆಂದು ಸಂರಕ್ಷಿಸುವ ಮನಸ್ಸಾಗಲೀ ಯಾರಿಗೂ ಇದ್ದಂತಿಲ್ಲ. ಕಿತ್ತೂರು ಚೆನ್ನಮ್ಮ ಅಂದದ್ದೇ ಕುದುರೆಯ ಮೇಲೆ ಕತ್ತಿ ಹಿರಿದು ಕೂತ ರಾಣಿ ನೆನಪಾಗುತ್ತಾಳೆ. ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದ ಹಾಡು ಗುಂಯ್ಗುಡುತ್ತದೆ. ಅವಳು ಹುಟ್ಟಿದ ಊರಿನಲ್ಲಿ ಅವಳದೊಂದು ಮೂರ್ತಿ ನಿಲ್ಲಿಸಿ, ಕಟ್ಟೆ ಕಟ್ಟಿ, ತನ್ನ ಹೊಣೆ ಮುಗಿಯಿತು ಎಂದು ಆಳುವವರ್ಗ ಅಂದುಕೊಂಡಿದೆ. ವರ್ಷದ ಸೂಚಿತ ದಿನಗಳಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವಳನ್ನೊಂದು ಜಾತಿಗೆ ಕಟ್ಟಿ ಹಾಕಿ..

ಚಿನ್ನ ಅಮೂಲ್ಯ. ಎಲ್ಲರಿಗೂ ಗೊತ್ತಿದೆ. ಆದರೆ ಮಣ್ಣು ಅದಿರಿನಿಂದ ಹೊನ್ನು ಹೇಗೆ ಬಂತು ಎನ್ನುವುದರ ಬಗೆಗೆ ಅಸೀಮ ಅಜ್ಞಾನ, ಅಸಡ್ಡೆ..

[ನಾಲ್ಕನೆಯ ಹಾಗೂ ಕೊನೆಯ ಭಾಗ ನಾಳೆ ( 21-02-2024) ಪ್ರಕಟವಾಗಲಿದೆ]

ವೈದ್ಯರು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಲ್ಲಿ ಸಕ್ರಿಯರು.

More articles

Latest article