ಅಲ್ಪಸಂಖ್ಯಾತ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ 22 ವರ್ಷದ ಯುವಕನೊಬ್ಬ ತನ್ನ ಸಹೋದರಿಯನ್ನು ಕೆರೆಗೆ ತಳ್ಳಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ. ಮಗಳನ್ನು ರಕ್ಷಿಸಲು ಕೆರೆಗೆ ಹಾರಿದ ಆಕೆಯ ತಾಯಿಯೂ ಸಾವನ್ನಪ್ಪಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಹಿರಿಕ್ಯಾತನಹಳ್ಳಿ ಮೂಲದ ರೈತ ಸತೀಶ್ ಅವರ ಪತ್ನಿ ಅನಿತಾ (40) ಮೃತ ತಾಯಿ. ಹುಣಸೂರಿನ ಕಾಲೇಜಿನ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿ ಧನುಶ್ರೀ (19) ಮೃತ ಮಗಳು ಎಂದು ಗುರುತಿಸಲಾಗಿದೆ. ನಿತಿನ್ ಎಂಬ ಆರೋಪಿ ಮೃತ ಧನುಶ್ರೀ ಅವರ ಸಹೋದರನಾಗಿದ್ದು, ಪ್ರೌಢಶಾಲೆಯ ನಂತರ ತನ್ನ ಶಿಕ್ಷಣವನ್ನು ನಿಲ್ಲಿಸಿ ದಿನಗೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಮಾಹಿತಿಯಿಂದ ತಿಳಿದುಬಂದಿದೆ.
ತಂದೆ ಸತೀಶ್ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಆರೋಪಿಗಳು ಮಂಗಳವಾರ ಸಂಜೆ ಹೆಮ್ಮಿಗೆ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಂಬಂಧಿಕರನ್ನು ನೋಡುವ ನೆಪದಲ್ಲಿ ತಾಯಿ ಮತ್ತು ಸಹೋದರಿಯನ್ನು ಬೈಕ್‌ನಲ್ಲಿ ಕರೆದೊಯ್ದು, ನಂತರ ಕೆರೆಯ ಬಳಿ ವಾಹನ ನಿಲ್ಲಿಸಿ ತಂಗಿಯನ್ನು ಕೆರೆಯೊಳಗೆ ತಳ್ಳಿದ್ದಾನೆ. ಆಕೆಯನ್ನು ರಕ್ಷಿಸಲು ಹೋಗಿ ತಾಯಿಯು ಮೃತಪಟ್ಟಿರುತ್ತಾರೆ. ತದನಂತರ ಮನೆಗೆ ಬಂದು ನಿತಿನ್ ತಂದೆಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಆರೋಪಿಯು ತನ್ನ ತಂದೆಗೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದ ಸ್ಥಳವನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಆರೋಪಿ ತನ್ನ ತಂಗಿಯನ್ನು ಕೆರೆಗೆ ತಳ್ಳಿದ್ದು, ಮಗಳನ್ನು ರಕ್ಷಿಸಲು ತಾಯಿ ಜಿಗಿದ ಬಳಿಕ ನಿತಿನ್ ಕೂಡ ತಾಯಿ ಅನಿತಾಳನ್ನು ರಕ್ಷಿಸಲು ಮುಂದಾಗಿದ್ದಾರರೂ ಸಾಧ್ಯವಾಗಲಿಲ್ಲ. ಇಬ್ಬರೂ ಮೃತಪಟ್ಟಿರುವುದನ್ನು ಅರಿತು ಮನೆಗೆ ತೆರಳಿದ್ದಾನೆ. ಹುಣಸೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದ್ದು, ಆರೋಪಿ ನಿತಿನ್ ನನ್ನು ಬಂಧಿಸಲಾಗಿದೆ.