ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ನೇತೃತ್ವದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ಐದು ಎಕರೆ ನಾಗರಿಕ ಬಳಕೆ (ಸಿ.ಎ) ನಿವೇಶನ ಹಂಚಿಕೆ ವಿಚಾರಕ್ಕೆ ವಿವಾದ ಸೃಷ್ಟಿಯಾಗಿದ್ದ ಬೆನ್ನಲ್ಲೇ ಸಿ.ಎ. ನಿವೇಶನವನ್ನು ಹಿಂದಿರುಗಿಸಿದೆ.
ಕೆಐಎಡಿಬಿ ಸಿಇಒಗೆ 2 ಪುಟಗಳ ಪತ್ರ ಬರೆದಿರುವ ಟ್ರಸ್ಟ್‌ನ ಅಧ್ಯಕ್ಷ ರಾಹುಲ್ ಖರ್ಗೆ, ಕೌಶಲ ಅಭಿವೃದ್ಧಿ ತರಬೇತಿಗಾಗಿ ನಿವೇಶನ ಪಡೆಯಲಾಗಿತ್ತು. ಆದರೆ, ಅನಗತ್ಯ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿಮೂಲ ಉದ್ದೇಶಕ್ಕೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸ್ವಯಂಪ್ರೇರಣೆಯಿಂದ ನಿವೇಶನವನ್ನು ಮಂಡಳಿಯ ಮಂಜೂರಾತಿ ಪತ್ರದ ಕಲಂ 8ರಡಿ ವಾಪಸ್ ನೀಡುತ್ತಿದ್ದು, ಮುಂದಿನ ಪ್ರಕ್ರಿಯೆ ಕುರಿತು ಸಲಹೆ ನೀಡುವಂತೆ ಕೋರಿದ್ದಾರೆ.
ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿ.ಎ ನಿವೇಶನ ಹಂಚಿಕೆ ಪ್ರಕ್ರಿಯೆ ಈ ಹಿಂದೆ ನಡೆದಿತ್ತು. ಸಿ.ಎ ನಿವೇಶನಕ್ಕಾಗಿ ಕೆಐಎಡಿಬಿಗೆ ಒಟ್ಟು 193 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ 43 ಸಂಸ್ಥೆಗಳು ಆಯ್ಕೆಯಾಗಿದ್ದವು. ಆ ಪೈಕಿ ಅಂತಿಮವಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿ.ಎ ನಿವೇಶನ ಹಂಚಿಕೆಯಾಗಿತ್ತು. ಇದರಿಂದಾಗಿ ವಿವಾದ ಸೃಷ್ಟಿಯಾಗಿತ್ತು.
ಈ ಕುರಿತು ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ ನಿಯಮ ಉಲ್ಲಂಘಿಸಿ ಸಿ.ಎ ನಿವೇಶನ ಹಂಚಿಕೆ ಮಾಡಿರುವ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಡೆಸುತ್ತಿರುವ ಸಿದ್ಧಾರ್ಥ್ ಟ್ರಸ್ಟ್‌ನಿಂದ ಒಂದೇ ಕಾರಣಕ್ಕೆ, ಒಂದೇ ಸಂಸ್ಥೆಯಿಂದ ಎರಡು ಬಾರಿ ಸರ್ಕಾರಿ ಭೂಮಿಯನ್ನು ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕ ಹಾಗೂ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು ಲೋಕಯುಕ್ತ ಇಲಾಖೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರು, ಇಬ್ಬರು ಸಚಿವರು ಹಾಗೂ ಹಿರಿಯ IAS ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.