ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘KD: The Devil’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಿಂದಿಯಲ್ಲಿ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡು ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದಕ್ಕೆ ಗುರಿಯಾಗಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿರುವ ಈ ಹಾಡಿನ ಸಾಹಿತ್ಯ ಅತ್ಯಂತ ಅಶ್ಲೀಲವಾಗಿದೆ ಮತ್ತು ದೃಶ್ಯಗಳು ಸಭ್ಯತೆಯ ಮಿತಿಯನ್ನು ಮೀರಿವೆ ಎಂಬ ಕಾರಣಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಚಿತ್ರತಂಡವು ಹಾಡಿನ ಹಿಂದಿ ಆವೃತ್ತಿಯನ್ನು ಯುಟ್ಯೂಬ್ನಿಂದ ಸಂಪೂರ್ಣವಾಗಿ ತೆರವುಗೊಳಿಸಿದೆ .
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಗೆ ಸಲ್ಲಿಕೆಯಾದ ದೂರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ನೋಟಿಸ್ನಿಂದಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಹಾಡಿನ ಹಿಂದಿ ಸಾಹಿತ್ಯಕ್ಕೆ ಹೆಸರಿಸಲಾಗಿದ್ದ ಸಾಹಿತಿ ರಕೀಬ್ ಆಲಂ ಅವರು “ನಾನು ಇಂತಹ ಕೆಟ್ಟ ಸಾಹಿತ್ಯ ಬರೆಯಲು ನಿರಾಕರಿಸಿದ್ದೆ, ಇದನ್ನು ನಿರ್ದೇಶಕ ಪ್ರೇಮ್ ಅವರೇ ಬರೆದಿದ್ದಾರೆ, ನಾನು ಕೇವಲ ಅನುವಾದ ಮಾಡಿಕೊಟ್ಟೆ” ಎಂದು ಸ್ಪಷ್ಟನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ನಿರ್ದೇಶಕ ಪ್ರೇಮ್ ಮತ್ತು ನಿರ್ಮಾಪಕ ವೆಂಕಟ್ ಕೆ. ನಾರಾಯಣ ವಿರುದ್ಧ ಈಗಾಗಲೇ ವಿವಿಧೆಡೆ ಎಫ್ಐಆರ್ ದಾಖಲಾಗಿದ್ದು, ಹಾಡಿನ ಅಶ್ಲೀಲತೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಅಂದಹಾಗೆ, ಈ ಹಾಡಿನ ಕನ್ನಡ ಆವೃತ್ತಿಯನ್ನು ಐಶ್ವರ್ಯ ರಂಗರಾಜನ್ ಹಾಡಿದ್ದರೆ, ಹಿಂದಿ ಮತ್ತು ತೆಲುಗು ಆವೃತ್ತಿಗಳನ್ನು ಮಂಗ್ಲಿ ಹಾಡಿದ್ದಾರೆ.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಬರುವ ಹಾಡುಗಳಿಗೆ ಯಾವುದೇ ಅರ್ಥ ಅಥವಾ ಭಾವನೆ ಇರುವುದಿಲ್ಲ. ಸಾಹಿತ್ಯ ಎಂಬುದು ಸಂಪೂರ್ಣ ಅರ್ಥಹೀನವಾಗುತ್ತಿರುವುದು ವಿಷಾದನೀಯ. ಈಗ ವಿವಾದದಲ್ಲಿರುವ ‘KD’ ಸಿನಿಮಾದ ಈ ಹಾಡು ಮಾತ್ರವಲ್ಲ, ಇತ್ತೀಚೆಗೆ ಬಿಡುಗಡೆಯಾದ ‘ಟಾಕ್ಸಿಕ್’ (Toxic) ಸಿನಿಮಾದ ‘ತಬಾಹಿ’ (Tabaahi) ಹಾಡಿನಲ್ಲೂ ಸಹ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. ದೊಡ್ಡ ಬಜೆಟ್ ಸಿನಿಮಾಗಳೇ ಇಷ್ಟು ಕೀಳು ಮಟ್ಟದ ಸಾಹಿತ್ಯಕ್ಕೆ ಮೊರೆ ಹೋದರೆ, ಮುಂದಿನ ತಲೆಮಾರಿಗೆ ನಾವು ನೀಡುವ ಸಂದೇಶವೇನು? ಏನ್ನುವುದು ಕನ್ನಡ ಸಿನಿ ಪ್ರೇಕ್ಷಕರ ಪ್ರಶ್ನೆ. ಕಲೆ ಎಂಬುದು ಸಮಾಜವನ್ನು ಸುಧಾರಿಸಬೇಕೇ ಹೊರತು, ಕೇವಲ ಪ್ರಚಾರಕ್ಕಾಗಿ ಇಷ್ಟೊಂದು ಅಶ್ಲೀಲತೆಗೆ ಇಳಿಯಬಾರದು.

