ಕೌರವರ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆದ ದುಶ್ಯಾಸನನನ್ನು ಕೌರವರು ಕೊಂಡಾಡಿದ ರೀತಿ ಈಗ ಬಿಜೆಪಿ ನಾಯಕರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾನಹರಣ ಮಾಡಿದ ಸಿ.ಟಿ.ರವಿಯನ್ನು ಕೊಂಡಾಡುತ್ತಿದ್ದಾರೆ. ಹಾರ ತುರಾಯಿ ಹಾಕಿ ಮೆರವಣಿಗೆ ಮಾಡುತ್ತಿದ್ದಾರೆ!! – ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ಸೆಳೆದು ಕೌರವರ ಸಾಮ್ರಾಜ್ಯ ಪಥನವಾದ ಕೆಟ್ಟ ಇತಿಹಾಸ ಈ ನೆಲದಲ್ಲಿದೆ. ಆದರೆ ಈಗ history repeats ಅನ್ನುವ ಹಾಗೆ ಬಿಜೆಪಿಗರ ಪಾಲಿಗೆ ಅದು ಮರುಕಳಿಸುವ ಕಾಲ ಸನ್ನಿಹಿತವಾಗಿದೆ.!
ನಿಜ, ಬೆಳಗಾವಿ ಅಧಿವೇಶನ ಈ ಬಾರಿ ಒಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಒಬ್ಬ ಮಹಿಳಾ ಶಾಸಕಿಯ ಮಾನಹರಣವಾಗಿದೆ. ಇಷ್ಟಾದರೂ ಸಭೆಯಲ್ಲಿ ಒಬ್ಬ ಶಾಸಕಿಯ ಮಾನಹರಣ ಮಾಡಿ ಬಂದವನನ್ನು ಬಂಧಿಸಿದ್ದೇ ದೊಡ್ಡ ಅಪರಾಧ ಎನ್ನುವಂತೆ ಪೊಲೀಸರನ್ನು ಅಮಾನತು ಮಾಡಲಾಯಿತು, ಅಪರಾಧ ಎಸಗಿದವನನ್ನೇ ಮೆರವಣಿಗೆ ಮಾಡಲಾಗುತ್ತಿದೆ! ಕೌರವರ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆದ ದುಶ್ಯಾಸನನನ್ನು ಕೌರವರು ಕೊಂಡಾಡಿದ ರೀತಿ ಈಗ ಬಿಜೆಪಿ ನಾಯಕರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾನಹರಣ ಮಾಡಿದ ಸಿ.ಟಿ.ರವಿಯನ್ನು ಕೊಂಡಾಡುತ್ತಿದ್ದಾರೆ. ಹಾರ ತುರಾಯಿ ಹಾಕಿ ಮೆರವಣಿಗೆ ಮಾಡುತ್ತಿದ್ದಾರೆ!!
ವಾಹ್, ಬಿಜೆಪಿಯ ನಾಯಕರ ನಿಜ ಬಣ್ಣ ಬಯಲಾಗಲು ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಬಿಜೆಪಿ ನಾಯಕರು ತಾವು ಕೌರವರು ಎಂಬುದನ್ನು ತಮ್ಮ ಕಾಯಕದ ಮೂಲಕ ಎದೆ ತಟ್ಟಿ ಹೇಳಿಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬದುಕು ಏನೇ ಆಗಿರಲಿ, ಆದರೆ ಬಹಿರಂಗವಾಗಿ ಅದರಲ್ಲೂ ಸದನದ ಒಳಗೆ ಒಬ್ಬ ಮಹಿಳೆ ಮೇಲೆ ಪ್ರಾ…ಟ್ಯೂಟ್ ಎಂಬ ಪದ ಬಳಸ್ತಾನೆ ಎಂದರೆ, ಜೊತೆಗೆ ಅದನ್ನು ಉಳಿದ ನಾಯಕರು ಬೆಂಬಲಿಸ್ತಾರೆ ಎಂದರೆ ಸಮಾಜಕ್ಕೆ ಈ ಮನೆಹಾಳು ನಾಯಕರು ಯಾವ ಸಂದೇಶ ಕೊಡಲು ಹೊರಟಿದ್ದಾರೆ?
ಇದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ತಾವೊಬ್ಬ ಸಭಾಪತಿ ಎಂಬುದನ್ನು ಮರೆತು “ಇದು ಮುಗಿದು ಹೋದ ಅಧ್ಯಾಯ” ಎಂದು ಹೇಳಿಕೆ ನೀಡುತ್ತಾರೆ! ಅಂದರೆ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಒಬ್ಬ ಸಭಾಪತಿಯ ಮೇಲೂ ಒತ್ತಡ ಹೇರುವ ಕೆಲಸ ಮಾಡಿದ್ದಾರೆ ಎಂದರ್ಥ. ಸಭಾಪತಿಗಳಾದವರು ಎಲ್ಲ ಶಾಸಕರನ್ನೂ ಸಮಾನವಾಗಿ ನೋಡಬೇಕು, ಅವರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಆದರೆ ಇಡೀ ಸಭೆಯಲ್ಲಿ ಒಬ್ಬ ಶಾಸಕಿಯ ಮಾನಹರಣ ಮಾಡಿದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಮೇಲ್ನೋಟಕ್ಕೆ ತೇಪೆ ಸಾರಿಸಿ ಬಿಡುವ ಇರಾದೆ ಇದೆಯಲ್ಲ ಅದಕ್ಕಿಂತ ಹೀನಾಯಕ ಕೆಲಸ ಬೇರೊಂದಿಲ್ಲ ಎನಿಸಿಬಿಡುತ್ತದೆ. ವಯಸ್ಸಿನಲ್ಲಿ ಹಿರಿಯರೂ, ಅನುಭವಿಗಳೂ ಆಗಿರುವ ಹೊರಟ್ಟಿಯವರು ಒಂದು ಘನ ಪೀಠದ ಮೇಲೆ ಕುಳಿತಾಗ ಹೆಣ್ಣಿಗೆ ನ್ಯಾಯ ಕೊಡಿಸಬೇಕಾದ ಅವಶ್ಯಕತೆ ಇರುತ್ತದೆ. ಆದರೆ ಸದನದ ಒಳಗಡೆಯೇ ನಡೆದ ಒಂದು ಪ್ರಕರಣದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥ ಶಾಸಕನಿಗೆ ಶಿಕ್ಷೆ ವಿಧಿಸುವುದನ್ನು ಬಿಟ್ಟು ಆತನ ಪರ ನಿಲ್ಲುವುದು ಇದೆಯಲ್ಲ ಇಂತಹ ನಡೆಯಿಂದ ನಿಜಕ್ಕೂ ಸಮಾಜಕ್ಕೆ ಇವರು ಕೊಡುವ ಸಂದೇಶ ಏನು?
ಅಂಬೇಡ್ಕರ್ ವಿಚಾರ ಬಂದಾಗ ಕೇಂದ್ರ ಸಚಿವ ಅಮಿತ್ ಷಾ ಅವರ ನಡೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕಿತ್ತು. ಆದರೆ ಅದನ್ನು ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್ ಎಂಬ ಹಂತಕ್ಕೆ ತಂದದ್ದು ಇದೇ ಬಿಜೆಪಿ ಶಾಸಕರು. ಆನಂತರ ಸಹಜವಾಗಿ ಸಿ.ಟಿ.ರವಿ ಕಾರು ನಡೆಸಿದ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿದ ಪ್ರಕರಣ ಪ್ರಸ್ತಾಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ನೀವು ಒಬ್ಬ ಕೊಲೆಗಾರನಾ? ಎಂದಿದ್ದಾರೆ. ಆಗ ಸಿ.ಟಿ.ರವಿ ಒಬ್ಬ ಶಾಸಕಿಗೆ ಪ್ರಾ….ಟ್ಯೂಟ್ ಎಂಬ ಪದ ಬಳಸಿದ್ದಾರೆ. ಅದಕ್ಕೆ ಸಾಕಷ್ಟು ಸಾಕ್ಷಿಗಳೂ ಇವೆ. ಆದರೆ ಆನಂತರ ನಾನು ಹಾಗೆ ಹೇಳೇ ಇಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.
ಇದು ಸರಿಯಾದ ಕ್ರಮವಲ್ಲ. ಒಬ್ಬ ಸೋತ ಶಾಸಕ ಮತ್ತೆ ವಿಧಾನ ಪರಿಷತ್ ಗೆ ಆಯ್ಕೆಯಾದ ಸಂದರ್ಭದಲ್ಲಿ ರವಿಯ ಬುದ್ಧಿವಂತಿಕೆ ಉತ್ತಮ ವಿಚಾರದಲ್ಲಿ ಹೆಚ್ಚಾಗಬೇಕಿತ್ತು. ಆದರೆ ಅಡ್ಡದಾರಿಯ ನಡೆಯಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಲು ಹೊರಟಿದ್ದು ನೇರವಾಗಿ ಸಿ.ಟಿ.ರವಿ ರಾಜಕೀಯ ಅಧ:ಪತನದ ಹಾದಿ ಹಿಡಿದಾಗಿದೆ ಎಂಬುದಕ್ಕೆ ನೇರ ಸಾಕ್ಷಿ.
ಆದರೆ ಇಲ್ಲೊಂದು ವಿಚಾರ ಗಮನಿಸಲೇಬೇಕು. ಸಿ.ಟಿ.ರವಿ ಹೇಳಿಕೇಳಿ ಆಂಜನೇಯನ ಭಕ್ತ. ಅಪ್ಪಟ ಭಕ್ತ ಮಹಾಶಯ. ಹೀಗಿರುವಾಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಚಾರದಲ್ಲಿ ದೇವರ ಮೇಲೆ ಆಣೆ ಮಾಡಿ “ನಾನು ಆ ಪದ ಬಳಸಿಲ್ಲ” ಎಂದು ಹೇಳಲು ಸಿದ್ಧನಿಲ್ಲ. ಬದಲಿಗೆ ಮಾತು ಬದಲಿಸುವ ಅಥವಾ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ.
ನಿಜಕ್ಕೂ ರಾಜಕಾರಣದಲ್ಲಿ ಧೀರತನ, ದಿಟ್ಟತನ ಇರಬೇಕು. ಆದರೆ ಅದು ಜನರಪರವಾದ ಕೆಲಸಗಳ ವಿಚಾರದಲ್ಲಿ ಇರಬೇಕು. ಅದು ಬಿಟ್ಟು ಸಮಾಜವನ್ನು ಒಡೆಯುವ, ದಿಕ್ಕು ತಪ್ಪಿಸುವ ಕುತಂತ್ರದಲ್ಲಿ ತಮ್ಮ ಜಾಣತನ ಮೆರೆಯುವುದಲ್ಲ….
ಕೊನೆ ಮಾತು: ಸಿ.ಟಿ.ರವಿ ಒಬ್ಬ ಸಚಿವೆಯನ್ನು ಕೆಣಕಿ ಅಪ್ಪಟ ದುಶ್ಯಾಸನ ಆಗಿದ್ದಾರೆ. ಆದರೆ ಅವರ ಧೈರ್ಯ ಮುಂದೊಮ್ಮೆ ಇಡೀ ಬಿಜೆಪಿಯನ್ನೇ ಬಲಿ ಪಡೆದರೂ ಆಶ್ಚರ್ಯ ಇಲ್ಲ. ಅದರೆ ಇದರಲ್ಲಿ ಕಾಂಗ್ರೆಸ್ ನಾಯಕರ ನೀರಸ ಹೋರಾಟ ಕೂಡ ನಾಚಿಕೆಗೇಡಿನ ಸಂಗತಿಯೇ ಸರಿ…
ರಮೇಶ್ ಹಿರೇಜಂಬೂರು
ಹಿರಿಯ ಪತ್ರಕರ್ತರು
ಇದನ್ನೂ ಓದಿ- ಸಚಿವೆಯ ಚಾರಿತ್ರ್ಯಹರಣ; ನಿಂದಕನ ಬಂಧನಕ್ಕೆ ಸಂವಿಧಾನ ಕಾರಣ