ಮೊದಲೇ ಸ್ಪಷ್ಟಪಡಿಸುತ್ತೇನೆ.ಒಂದು ಮಾಸ್ ಸಿನಿಮಾವಾಗಿ ಕಾಟೇರ ನನಗೆ ಇಷ್ಟವಾಯಿತು.ಕಥೆ,ಚಿತ್ರಕಥೆ,ಅದರ ಹೆಣಿಗೆ,ಸಂಕಲನ,ಸಿನಿಮಾಟೋಗ್ರಫಿ, ಸಾಹಸ ದೃಶ್ಯಗಳ ಸಂಯೋಜನೆ, ಪಂಚಿಂಗ್ ಸಂಭಾಷಣೆ, ರೆಟ್ರೊ ಫೀಲಿಂಗ್ ಕೊಡುವ ಕಲಾ ನಿರ್ದೇಶನ… ಹೀಗೆ ಹತ್ತು ಹಲವು ಮೆಚ್ಚುವಂತಹ ಸಂಗತಿಗಳು ಕಾಟೇರಾದಲ್ಲಿವೆ.
ತಾಂತ್ರಿಕವಾಗಿಯೂ ಗಟ್ಟಿಯಾಗಿರುವ,ದರ್ಶನ್ ಸೇರಿದಂತೆ ಹಲವು ಕಲಾವಿದರ ಹದವರಿತ ಅಭಿನಯ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತದೆ.
ಇಂದಿಗೂ ನಮ್ಮ ನಡುವೆ ಆಳವಾಗಿ ಬೇರೂರಿರುವ ಜಾತಿ ಎಂಬ ಪೆಡಂಭೂತ ಸೃಷ್ಟಿಸಿರುವ ಅಸಮಾನತೆ,ಶೋಷಣೆ,ದೌರ್ಜನ್ಯ ಗಳ ಬಗ್ಗೆಯೆಲ್ಲ ಸಿನಿಮಾ ಎತ್ತುವ ಧ್ವನಿ ಪರಿಣಾಮಕಾರಿಯಾಗಿಯೆ ಇದೆ.ಮರ್ಯಾದೆ ಹತ್ಯೆಯ ಮಾದರಿ ಇನ್ನೂ ಜೀವಂತವಾಗಿರುವುದಕ್ಕೆ ಸಿನಿಮಾ ಸಾಕ್ಷ್ಯ ಒದಗಿಸುತ್ತದೆ. ಹೀಗೆ ಕಾಟೇರ ಚಿತ್ರವನ್ನು ಮೆಚ್ಚಿಕೊಳ್ಳಲು ಹಲವು ಕಾರಣಗಳಿವೆ.
ಆದರೆ ಕಾಟೇರಾ ಮಲೆನಾಡಿನಲ್ಲಿ ನಡೆದ ಐತಿಹಾಸಿಕ ಕಾಗೋಡು ಸತ್ಯಾಗ್ರಹಕ್ಕೆ ಅಪಚಾರ ಎಸಗಿದ ಸಿನಿಮಾವೇ ಎಂಬ ಪ್ರಶ್ನೆ ಚಿತ್ರ ನೋಡಿದ ನಂತರ ಉದ್ಭವಿಸುತ್ತದೆ.ಚಿತ್ರದ ನಿರ್ದೇಶಕ ತರುಣ್ ಸುಧೀರ್ ಸಾಗರ ಮೂಲದವರೆ ಎಂಬುದು ಇಲ್ಲಿ ಉಲ್ಲೇಖನಾರ್ಹ.ಅವರೊಬ್ಬ ಪ್ರತಿಭಾವಂತ ನಿರ್ದೇಶಕ ಎಂಬುದರಲ್ಲಿ ಅನುಮಾನವಿಲ್ಲ.
ಕಾಟೇರ ಚಿತ್ರದ ಆರಂಭದಲ್ಲಿ ಈ ಸಿನಿಮಾದಲ್ಲಿ ಬರುವ ಪಾತ್ರಗಳು,ಸನ್ನಿವೇಶ ಕಾಲ್ಪನಿಕ,ಚಿತ್ರ ಯಾವುದೇ ಸತ್ಯ ಘಟನೆ ಆಧರಿಸಿದ್ದಲ್ಲ ಎಂಬ disclaimer ಇದ್ದಿದ್ದರೆ ನನಗೆ ತಕರಾರು ಇರಲಿಲ್ಲ.
ಜೊತೆಗೆ ಸಿನಿಮಾದಲ್ಲಿ ಉಳುವವನೆ ಹೊಲದೊಡೆಯ ಎಂಬ ಮಾತು ಆಗಾಗ ಪ್ರಸ್ತಾಪವಾಗುತ್ತದೆ.ಇಂದಿರಾಗಾಂಧಿ,ದೇವರಾಜ ಅರಸು ಹೆಸರೂ ಪ್ರಸ್ತಾಪವಾಗುತ್ತದೆ.ಗೇಣಿದಾರರಿಗೆ ಭೂಮಿಯ ಹಕ್ಕು ನೀಡುವ ಕಾನೂನು ಜಾರಿಯಾದ ವಿಷಯವೂ ಚಿತ್ರಕಥೆಯ ಪ್ರಧಾನ ಭಾಗವೇ ಆಗಿದೆ.
ಬೇಸರದ ಸಂಗತಿಯೆಂದರೆ ಭೂ ಸುಧಾರಣೆ ಕಾಯ್ದೆ ಜಾರಿಗೆ ಬರಲು ಪ್ರೇರಣೆ ನೀಡಿದ ಕಾಗೋಡು ಸತ್ಯಾಗ್ರಹ ನಡೆದ ಕಾಗೋಡು ಗ್ರಾಮದ ಹೆಸರು ಸಿನಿಮಾದಲ್ಲಿ ಬರುವುದೆ ಇಲ್ಲ.ಕಾಗೋಡು ಸತ್ಯಾಗ್ರಹ ಆರಂಭಿಸಿದ ಎಚ್.ಗಣಪತಿಯಪ್ಪ, ನಂತರ ಭೂ ಸುಧಾರಣೆ ಮಸೂದೆ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಗೋಡು ತಿಮ್ಮಪ್ಪ ಅವರ ಹೆಸರೂ ಎಲ್ಲೂ ಪ್ರಸ್ತಾಪವಾಗುವುದಿಲ್ಲ.
ಎಲ್ಲದಕ್ಕಿಂತ ಮುಖ್ಯವಾಗಿ ಕಾಗೋಡು ಸತ್ಯಾಗ್ರಹದಲ್ಲಿ ಯಾವುದೇ ಸಂದರ್ಭದಲ್ಲಿ ಹಿಂಸೆಯ ಪ್ರಯೋಗವಾಗಲಿಲ್ಲ.ಚಳವಳಿ ವಿಷಯ ತಿಳಿದು ಸಾಗರಕ್ಕೆ ಬಂದ ರಾಮಮನೋಹರ ಲೋಹಿಯಾ ಅವರು ಹಿಂಸಾ ಮತ್ ಕರೋ ಎಂದು ಹೇಳಿದ ಮಾತನ್ನು ಸತ್ಯಾಗ್ರಹಿಗಳು ಚಾಚೂ ತಪ್ಪದೆ ಪಾಲಿಸಿದ್ದರು.ಹಿಂಸೆಯ ಮೂಲಕ ಪ್ರತಿರೋಧ ತರುವಷ್ಟು ಶಕ್ತಿ ಸತ್ಯಾಗ್ರಹಿಗಳಲ್ಲಿ ಇರಲಿಲ್ಲ ಎಂಬುದು ಹಿಂಸೆಗೆ ಚಳವಳಿ ತಿರುಗದೆ ಇರಲು ಕಾರಣವಾಗಿರಲೂ ಬಹುದು.
ಆದರೆ ಕಾಟೇರದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಅದನ್ನು ವಿಫಲಗೊಳಿಸಲು ಜಮೀನ್ದಾರರು ಹಿಂಸೆಯ ಮಾರ್ಗ ಹಿಡಿಯುತ್ತಾರೆ.ಇದಕ್ಕೆ ಪ್ರತಿಯಾಗಿ ಚಿತ್ರದ ನಾಯಕ ಕಾಟೇರ ಕೂಡ ಹಿಂಸೆಯ ಮಾರ್ಗವನ್ನೆ ಹಿಡಿಯುತ್ತಾನೆ.ಈ ಮೂಲಕ ಗೇಣಿ ರೈತರಿಗೆ ಭೂಮಿಯ ಹಕ್ಕು ಸಿಕ್ಕಿರುವುದರ ಹಿಂದೆ ರಕ್ತಸಿಕ್ತ ಇತಿಹಾಸವಿದೆ ಎಂಬ ಸಂದೇಶವನ್ನು ಕಾಟೇರ ದಾಟಿಸುತ್ತದೆ.
ಕಾಗೋಡು ಸತ್ಯಾಗ್ರಹದಿಂದ ಭೂಮಿಯ ಹಕ್ಕು ಪಡೆದ ಕುಟುಂಬಕ್ಕೆ ಸೇರಿದ ಹೊಸ ತಲೆಮಾರಿನವರಿಗೆ ಚಳವಳಿ ಇತಿಹಾಸ ಮರೆತು ಹೋದಂತಿದೆ.ಹೀಗಿರುವಾಗ ಕಾಟೇರ ಹೇಳುವ ಸಂಗತಿಯೆ ಮುಂದೆ ಭೂ ಸುಧಾರಣೆ ಮಸೂದೆ ಜಾರಿಯ ಹಿಂದಿರುವ ಇತಿಹಾಸ ಎಂದು ಹೊಸ ತಲೆಮಾರು ನಂಬುವ ಅಪಾಯವಿದೆ.
ಒಂದು ಐತಿಹಾಸಿಕ ಕಥನದ ಎಳೆ ಹಿಡಿದು ಸಿನಿಮಾ ಮಾಡುವಾಗ ಇಂತಹ ಪ್ರಮಾದಗಳಾಗದಂತೆ ಎಚ್ಚರ ವಹಿಸಬೇಕಿತ್ತು ಎಂಬ ಕಳಕಳಿಯಿಂದಷ್ಟೆ ಇಷ್ಟನ್ನು ಹಂಚಿಕೊಂಡಿರುವುದು..
ಎಂ ರಾಘವೇಂದ್ರ, ಸಾಗರ,ಪತ್ರಕರ್ತರು