ಕೆಎಎಸ್ ಮರುಪರೀಕ್ಷೆಗೆ ಸಿಎಂ ಸೂಚನೆ: ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ಕರವೇ

Most read

ಕೆಪಿಎಸ್‌ಸಿ ನೇತೃತ್ವದಲ್ಲಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಭಾಷಾಂತರದಲ್ಲಿನ ಸಮಸ್ಯೆಯಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ, ಮರು ಪರೀಕ್ಷೆ ನಡೆಸಬೇಕು ಎಂದು ಕನ್ನಡಪರ ಸಂಘಟನೆಗಳು, ಸಾಹಿತಿಗಳೂ ಆಗ್ರಹಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಎಎಸ್ ಪರೀಕ್ಷೆಯನ್ನು ಎರಡು ತಿಂಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದೆ. ಇದನ್ನು ಕರವೇ ಸ್ವಾಗತಿಸಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರವೇ ಅಧ್ಯಕ್ಷರಾದ ನಾರಾಯಣಗೌಡ, ಆಗಸ್ಟ್ 27ರಂದು ಕೆ.ಪಿ.ಎಸ್‌.ಸಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಮನಗಂಡು ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯನವರು ಮರುಪರೀಕ್ಷೆಗೆ ಆದೇಶಿಸಿದ್ದಾರೆ. ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಿದೆ‌. ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದಿದ್ದಾರೆ.

ಕನ್ನಡ ನಾಡು ನುಡಿ, ಕನ್ನಡಿಗರ ಬದುಕಿನ ವಿಷಯದಲ್ಲಿ ಸಿದ್ಧರಾಮಯ್ಯ ಅವರು ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದಾರೆ. ಕನ್ನಡ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿದ್ದಾರೆ. ಮರುಪರೀಕ್ಷೆ ನಡೆಸದೇ ಇದ್ದಿದ್ದರೆ ಕನ್ನಡದ ಮಕ್ಕಳಿಗೆ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ‌.

ಕೆಪಿಎಸ್ ಸಿ ಇನ್ನೆರಡು ತಿಂಗಳಲ್ಲಿ ಮರುಪರೀಕ್ಷೆ ನಡೆಸಲಿದೆ. ಆದರೆ ಈ ಮರಿಪರೀಕ್ಷೆಯಲ್ಲೂ ದೋಷ ಆಗದಂತೆ ನಿಗಾ ವಹಿಸಬೇಕು. ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಪತ್ರಿಕೆ ಸಿದ್ಧಪಡಿಸಬೇಕು. ಯಾವುದೇ ಕಾರಣಕ್ಕೂ ಇಂಗ್ಲಿಷ್ ನಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಕನ್ನಡಕ್ಕೆ ಅನುವಾದಿಸಬಾರದು. ಯಾವುದೇ ದೋಷ ಇರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಬಾರಿ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾದ 106 ಅಭ್ಯರ್ಥಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಕೇವಲ 10 ಮಂದಿ ಮಾತ್ರ. ಶೇ.90 ರಷ್ಟು ಮಂದಿ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದರೂ ಆಯ್ಕೆಯಾಗುವುದು ಮಾತ್ರ ಶೇ. 10ಕ್ಕೂ ಕಡಿಮೆ. ಈ ವ್ಯತ್ಯಾಸ ಯಾಕೆ? ಇದರ ಹಿಂದಿನ ಶಕ್ತಿಗಳು ಯಾವುವು? ಎಂದು ಪ್ರಶ್ನಿಸಿದ್ದಾರೆ.

ಕೆ.ಪಿ‌‌.ಎಸ್.ಸಿಯಲ್ಲಿ ಇಂಗ್ಲಿಷ್ ಮಾಧ್ಯಮದವರ ಲಾಬಿ ನಡೆಯುತ್ತಿದೆ ಎಂಬ ಮಾತುಗಳು ನನ್ನ ಕಿವಿಗೆ ಬಿದ್ದಿವೆ. ಕೆಪಿಎಸ್ ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಈ ತಾರತಮ್ಯದ ಫಲಿತಾಂಶಗಳಿಗೂ ನೇರ ಸಂಬಂಧವಿರಬಹುದು. ಇದು ನಿಲ್ಲಬೇಕು. ಕನ್ನಡದ ಮಕ್ಕಳಿಗೆ ಆಗುತ್ತಿರುವ ಅನ್ಯಾಯ ತಪ್ಪಬೇಕು ಎಙದು ಹೇಳಿದ್ದಾರೆ.

ಕೆ.ಪಿ.ಎಸ್.ಸಿ ಭ್ರಷ್ಟಾಚಾರದ ಕೂಪವಾಗಿದೆ. ಅದಕ್ಕೆ ದೊಡ್ಡ ಸರ್ಜರಿಯಾಗಬೇಕಿದೆ. ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಬೇಕು. ಆಗಸ್ಟ್ 27ರ ಪರೀಕ್ಷೆಯಲ್ಲಿ ಆದ ಸಮಸ್ಯೆಗೆ ಕಾರಣರಾದವರನ್ನು ಕೂಡಲೇ ಅಮಾನತು ಮಾಡಿ ಅವರ ಮೇಲೆ ತನಿಖೆ ನಡೆಸಿ ಶಿಕ್ಷೆಗೊಳಪಡಿಸಬೇಕು. ಹುದ್ದೆಗಳ ಮಾರಾಟ ನಿಲ್ಲಬೇಕು‌

ಕೆ.ಪಿ.ಎಸ್.ಸಿ ಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಾಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆ ಸಂದರ್ಭದಲ್ಲೇ ಮರುಪರೀಕ್ಷೆಗೆ ಆದೇಶ ಹೊರಡಿಸಿರುವುದು ನನ್ನ ಗಮನಕ್ಕೆ ಬಂದಿತು. ನಮ್ಮ ಹೋರಾಟ ಯಶಸ್ವಿಯಾಗಿದೆ.

ಕೆ.ಪಿ.ಎಸ್.ಸಿ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಕನ್ನಡ ಮಾಧ್ಯಮದವರಿಗೆ ಆದ್ಯತೆ ಇರಬೇಕು, ಅವರಿಗೆ ಅನ್ಯಾಯ ಆಗಕೂಡದು. ಕನ್ನಡದ ಮಕ್ಕಳಿಗೆ ತೊಂದರೆ ಆದರೆ ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಅವರೊಂದಿಗೆ ನಾವು ಎಂದೆಂದಿಗೂ ಇದ್ದೇ ಇರುತ್ತೇವೆ ಎಂದಿದೆ.

‘ಭಾಷಾಂತರದಲ್ಲಿನ ಸಮಸ್ಯೆಯಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ, ಮರು ಪರೀಕ್ಷೆ ನಡೆಸಬೇಕು’ ಎಂದು ಕನ್ನಡಪರ ಸಂಘಟನೆಗಳು, ಸಾಹಿತಿಗಳೂ ಆಗ್ರಹಿಸಿದ್ದರು. ಕನ್ನಡ ರಕ್ಷಣಾ ವೇದಿಕೆಯು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಭ್ಯರ್ಥಿಗಳ ಸಹಿತ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

More articles

Latest article