ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಆಗಸ್ಟ್ 25ರಂದು ನಡೆಸಲು ನಿರ್ಧರಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆ ದಿನವೇ ಐಬಿಪಿಎಸ್‌ನ ಬ್ಯಾಂಕ್ ಕ್ಲರಿಕಲ್ ಹುದ್ದೆಗಳ ಪರೀಕ್ಷೆ ನಡೆಸುತ್ತಿರುವ ಕಾರಣ ಕೆಎಎಸ್ ಪರೀಕ್ಷೆಯನ್ನು ಮುಂದೂಡುವಂತೆ ಕೆಎಎಸ್ ಅಭ್ಯರ್ಥಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಗೆ 2,10,541 ಮಂದಿ ನೋಂದಣಿ ಮಾಡಿಕೊಂಡಿದ್ದು, ಐಬಿಪಿಎಸ್ ಕ್ಲರಿಕಲ್ ಹುದ್ದೆಗೆ 50 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಎರಡೂ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಒಂದು ಪರೀಕ್ಷೆಯು ಕೈತಪ್ಪಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಭ್ಯರ್ಥಿಗಳ ದೃಷ್ಟಿಯಿಂದ ಕೆಎಎಸ್ ಪರೀಕ್ಷೆ ಮುಂದೂಡಿದರೆ ರಾಜ್ಯದವರಿಗೇ ಲಾಭವಾಗಲಿದೆ.
ಕೆಎಎಸ್ ಪರೀಕ್ಷೆ ನಿಗದಿಗೂ ಮೊದಲೇ ಐಬಿಪಿಎಸ್ ಪರೀಕ್ಷೆ ನಿಗದಿಯಾಗಿದೆ. ಅಲ್ಲದೆ, ಕನ್ನಡ ಭಾಷೆಯಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ ಸ್ಥಳೀಯವಾಗಿ 50 ಸಾವಿರಕ್ಕೂ ಹೆಚ್ಚಿನ ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕೆಎಎಸ್, ಐಬಿಪಿಎಸ್ ಪರೀಕ್ಷೆ ಜತೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜಂಟಿ ಸಿಎಸ್‌ಐಆರ್ ಯುಜಿಸಿ ನೆಟ್ ಪರೀಕ್ಷೆ ಹಾಗೂ ನಬಾರ್ಡ್ ಸಂಸ್ಥೆ ಹಲವು ಹುದ್ದೆಗಳಿಗೆ ಕೂಡ ಅದೇ ದಿನ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರದ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳು ದೇಶಾದ್ಯಂತ ನಡೆಯಲಿದೆ. ಕೆಎಎಸ್ ಪರೀಕ್ಷೆಯು ರಾಜ್ಯದ ಮಟ್ಟಿಗೆ ಮಾತ್ರ ನಡೆಯಲಿದೆ. ರಾಜ್ಯದವರ ದೃಷ್ಟಿಯಿಂದ ಕೆಎಎಸ್ ಪರೀಕ್ಷೆ ಮುಂದೂಡುವ ಮೂಲಕ ಸಂವಿಧಾನದ ವಿಧಿ 16 ರನ್ನು ಉಲ್ಲಂಘಿಸದಂತೆ ಮನವಿ ಮಾಡಿಕೊಂಡಿದ್ದಾರೆ.