ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ: ಕರವೇ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ

Most read

ಕರ್ನಾಟಕ ರಕ್ಷಣಾ ವೇದಿಕೆಯಿಂದ ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 1ರಂದು ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದು, ಈ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಬಲವಿದೆ ಎಂದು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡದಲ್ಲಿಯೇ ನಾಮಫಲಕದ ವಿಷಯದಲ್ಲಿ ಹೋರಾಟ ನಡೆಸಿದಾಗಲೂ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸಿದ್ದನ್ನು ಉಲ್ಲೇಖಿಸಿ, ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗಕ್ಕೂ ನಮ್ಮ ಬೆಂಬಲ ಇರುತ್ತದೆ ಎಂದು ತಿಳಿಸಿದ್ದಾರೆ.

ಮಹೇಶ್ ಜೋಶಿ ಅವರು ಬರೆದಿರುವ ಪತ್ರದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ತಮ್ಮ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುವ ‘ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಎಂಬ ಘೋಷಣೆಯೊಂದಿಗೆ ಇದೇ ಜುಲೈ ಒಂದನೇ ತಾರೀಖಿನಂದು ನಡೆಸಲು ಉದ್ದೇಶಿಸಿರುವ ಬೃಹತ್ ಸತ್ಯಾಗ್ರಹವನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸುತ್ತದೆ. ಎಂದು ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.

ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ವಿಷಯವಾದರೂ ಕನ್ನಡ ಸಾಹಿತ್ಯ ಪರಿಷತ್ತು ಸ್ಪಂದಿಸುತ್ತದೆ. ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡದಲ್ಲಿಯೇ ನಾಮಫಲಕದ ವಿಷಯದಲ್ಲಿ ಹೋರಾಟ ನಡೆಸಿದಾಗಲೂ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸಿತ್ತು. ಎಂದು ತಾವು ನೆನಪಿಸಿಕೊಳ್ಳಬಹುದು.

ಪ್ರಸ್ತುತ ಈ ಸತ್ಯಾಗ್ರಹದಲ್ಲಿ ನಾನು ಭಾಗವಹಿಸುವುದರೊಂದಿಗೆ ಜಿಲ್ಲಾ ಕಸಾಪ ಮತ್ತು ತಾಲ್ಲೂಕು ಕಸಾಪ ಘಟಕಗಳೂ ಕೂಡ ಭಾಗವಹಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಎಲ್ಲಾ ಬಗೆಯ ಉದ್ಯೋಗದಲ್ಲಿಯೂ ಕನ್ನಡಿಗರಿಗೇ ಸಿಂಹಪಾಲು ಇರಬೇಕು ಎನ್ನುವುದು ನ್ಯಾಯಯುತ ಬೇಡಿಕೆ. ಡಾ. ಸರೋಜಿನಿ ಮಹಿಷಿ ವರದಿ ಕೂಡ ಇದನ್ನೇ ಹೇಳಿತ್ತು ಇತ್ತೀಚೆಗೆ ಜಾರಿಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ- 2022ರಲ್ಲಿಯೂ ಕನ್ನಡಿಗರಿಗೇ ಉದ್ಯೋಗವೆಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಪ್ರೆಂಟಿಸ್ ನಿಯಮ 1961ರ ವಿಧಿ 20ರ ಪ್ರಕಾರ ಕೂಡ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.

ಜಾಗತೀಕರಣದ ಹಿನ್ನೆಲೆಯಲ್ಲಿ ಉದ್ಯೋಗಾವಕಾಶಗಳ ಸ್ವರೂಪ ಬದಲಾಗುತ್ತಿದೆ. ಹೊಸ ಮಾದರಿಯ ಶ್ರೇಣಿಕೃತ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕುವಂತೆ ಮಾಡುವುದು ಅಗತ್ಯವಾಗಿದೆ ಎಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಬೆಂಬಲಿಸಿದ್ದಾರೆ.

More articles

Latest article