ಹಲವು ಡಿಜಿಟಲ್ ಮೀಡಿಯಾಗಳು, ಯೂಟ್ಯೂಬ್ ಚಾನೆಲ್ಗಳು ತಮ್ಮ ವೇದಿಕೆಗಳಲ್ಲಿ ಬಳಕೆ ಮಾಡಿರುವ ಕರ್ನಾಟಕ ಹೈಕೋರ್ಟ್ ಲೈವ್‌ಸ್ಟ್ರೀಮ್ ವಿಡಿಯೋಗಳನ್ನು ತಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಕಾರ್ಪ್‌ಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಹೈಕೋರ್ಟ್‌ನ ಲೈವ್ ಸ್ಟ್ರೀಮ್ ವಿಡಿಯೋಗಳನ್ನು ಹಣ ಮಾಡುವ ಉದ್ದೇಶದಿಂದ ಮನಸೋಇಚ್ಛೆ ಎಡಿಟ್ ಮಾಡಿ ಪ್ರಸಾರ ಮಾಡುತ್ತಿರುವುದಕ್ಕೆ ಆಕ್ಷೇಪಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಏಕಸದಸ್ಯ ಪೀಠ ನಡೆಸಿ, ಯಾವುದೇ ಖಾಸಗಿ ವೇದಿಕೆಗಳು ಹೈಕೋರ್ಟ್‌ನ ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ಬಳಸಕೂಡದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರತಿವಾದಿಗಳಾಗಿರುವ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್ ತಮ್ಮ ವೇದಿಕೆಯಲ್ಲಿ ಬಳಸಿರುವ ಹೈಕೋರ್ಟ್ ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ತಕ್ಷಣ ತೆಗೆದು ಹಾಕಬೇಕು. ಈ ವೇದಿಕೆಗಳಲ್ಲಿನ ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಕಾರ್ಪ್‌ಗಳು ತಕ್ಷಣ ಡಿಲೀಟ್ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
2022ರ ಜನವರಿ 1ರಂದು ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು 2021 ಅನ್ನು ಕರ್ನಾಟಕ ಹೈಕೋರ್ಟ್ ಜಾರಿಗೊಳಿಸಿದೆ. ಈ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದೆ. ಅಲ್ಲದೇ ಮೇಲೆ ಹೆಸರಿಸಲಾದ ಮಾಧ್ಯಮಗಳಿಗೆ ನೋಟಿಸ್ ನೀಡಿದೆ.