Sunday, July 14, 2024

ಅತಿಥಿ ಉಪನ್ಯಾಸಕರನ್ನು ಫ್ರೀಡಂ ಪಾರ್ಕಿಗೆ ಕರೆತರುತ್ತಿರುವ ಪೊಲೀಸರು!

Most read

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಮಂದಿ ಸೇವಾ ಭದ್ರತೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ಇದೀಗ ಬೆಂಗಳೂರು ನೆಲಮಂಗಲ ದಾಟಿ ಜಿಂದಾಲ್ ತಲುಪಿದೆ. ಸಾವಿರಾರು ಉಪನ್ಯಾಸಕರು ನಗರದಲ್ಲಿ ಪಾದಯಾತ್ರೆ ನಡೆಸದಂತೆ ತಡೆಯೊಡ್ಡಿ ಪೊಲೀಸರು ಫ್ರೀಡಂ ಪಾರ್ಕ್ ಕಡೆಗೆ ವಾಹನಗಳಲ್ಲಿ ಕರೆತರುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು ಚಲೋ ಹೊರಟಿರುವ ಅತಿಥಿ ಉಪನ್ಯಾಸಕರು ಅಧಿಕೃತವಾಗಿ ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆಯನ್ನು ಆರಂಭಿಸಿದ್ದರು. ಪಾದಯಾತ್ರೆಯ ಮೂರನೇ ದಿನವಾದ ಇಂದು (ಬುಧವಾರ) ಪೀಣ್ಯದ ಜಿಂದಾಲ್ ಸಮೀಪ ತಲುಪಿದ್ದಂತೆ ನೂರಾರು ಪೊಲೀಸರು ಜಮಾವಣೆಗೊಂಡು ಪಾದಯಾತ್ರೆಯನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಕಾರರಿಗೂ ಪೊಲೀಸರಿಗೂ ಮಾತಿನ ಚಕಮಕಿ ನಡೆದಿದೆ. ನಮಗೆ ಹೈಕೋರ್ಟ್ ಆದೇಶವಿದೆ, ಪಾದಯಾತ್ರೆಗೆ ಅವಕಾಶವಿಲ್ಲವೆಂದು ಪೊಲೀಸರು ಹೇಳಿದ್ದರೆನ್ನಲಾಗಿದೆ.

ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವು ಉಪನ್ಯಾಸಕರು ಕನ್ನಡಪ್ಲಾನೆಟ್.ಕಾಂ ಜೊತೆ ಮಾತಾಡಿದರು, ❝ನಾವು ಈ ಪಾದಯಾತ್ರೆಯಲ್ಲಿ ಸುಮಾರು 5000ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದೇವೆ. ಸರ್ಕಾರ ನಮ್ಮ ಬಳಿ ಬಂದು ನಮ್ಮ ಅಹವಾಲು ಕೇಳಿಸಿಕೊಂಡು ನಮಗೆ ನ್ಯಾಯ ಒದಗಿಸಬೇಕು’ ಎಂದು ಉಪನ್ಯಾಸಕಿ ಉಮಾ ಗ್ಯಾರಳ್ಳ ಹೇಳಿದರು.

❝ಈ ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ, ನಮ್ಮನ್ನು ಬೆಂಗಳೂರು ನಗರದ ಒಳಗೆ ಪಾದಯಾತ್ರೆ ನಡೆಸದಂತೆ ತಡೆದು ಯಶವಂತಪುರದಿಂದ ಪೊಲೀಸರು 50-60 ವಾಹನಗಳಲ್ಲಿ ಫ್ರೀಡಂ ಪಾರ್ಕಿಗೆ ಕರೆದೊಯ್ಯುತ್ತಿದ್ದಾರೆ. ನಾವು ಕಾನೂನಿಗೆ ಗೌರವ ಕೊಡುವ ಉಪನ್ಯಾಸಕರು. ನಮ್ಮ ಅಳಲನ್ನು ತೋಡಿಕೊಳ್ಳಲು ಬಂದಿದ್ದೇವೆ. ಸರ್ಕಾರ ರಾಜ್ಯದ ಅತಿಥಿ ಉಪನ್ಯಾಸಕರನ್ನು ಕೂಡಲೇ ಖಾಯಂಗೊಳಿಸಿ ಆದೇಶ ಹೊರಡಿಸಬೇಕು ಎಂದರು.❞

❝ನಮ್ಮನ್ನು ಖಾಯಂ ಮಾಡಿ, 15- 20 ವರ್ಷ ಸೇವೆ ಸೇವಾ ಭದ್ರತೆ ನೀಡಿ ಎಂಬುದೇ ನಮ್ಮ ಪ್ರಮುಖ ಬೇಡಿಕೆ. ಇಲ್ಲಿಇಡೀ ವ್ಯವಸ್ಥೆಯೇ ನಮ್ಮನ್ನು ಶೋಷಣೆ ಮಾಡುತ್ತಿದೆ. ನಮಗೆ ಯಾವುದೇ ರಜೆ ಇಲ್ಲ, ಮಾನವೀಯತೆಯಿಂದ ನೋಡಿಕೊಳ್ಳುವುದಿಲ್ಲ. ನಿವೃತ್ತಿ ನಂತರ 5 ಲಕ್ಷ ನೀಡುವ ಮಾತಾಡುತ್ತಿದ್ದಾರೆ. ಆದರೆ ಸೇವಾ ಭದ್ರತೆಯೇ ಇಲ್ಲವೆಂದ ಮೇಲೆ ಯಾವ 5 ಲಕ್ಷದಿಂದ ಏನಾಗಬೇಕು?❞ – ಬಸವರಾಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ

ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಆಗ್ರಹಿಸಿ ಪತ್ರ ಬರೆದಿದ್ದರು. ಈಗ ಅವರದೇ ಸರ್ಕಾರವಿದೆ. ಅವರು ಖಂಡಿತಾ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆ ಹೊಂದಿದ್ದೇವೆ❞ ಎಂದು ಉಪನ್ಯಾಸಕ ರಮೇಶ್ ಉಡುತಡಿ ಹೇಳಿದರು.

More articles

Latest article