Saturday, July 27, 2024

ದಲಿತ ಮತ್ತು  ಹಿಂದುಳಿದ ವರ್ಗದ ಶಿಕ್ಷಕರೇ ಸಾವಿತ್ರಿ ಬಾಪುಲೆಯನ್ನು ಮರೆತರೇ?

Most read

ಇತ್ತೀಚೆಗೆ ದಲಿತ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆಯ ಮೂಲಕ ಒಂದು ಎಚ್ಚರಿಕೆಯ ಸ್ಮರಣೆಯನ್ನು ಮಾಡುತ್ತಿದ್ದಾರೆ.  ಆದರೆ ಶಿಕ್ಷಣ ಕ್ಷೇತ್ರಕ್ಕೆ ಬಂದ ದಲಿತ ಮತ್ತು ಹಿಂದುಳಿದ ವರ್ಗದ ಶಿಕ್ಷಕರು ಸಾವಿತ್ರಿ ಬಾಪುಲೆಯನ್ನು ಕನಿಷ್ಠ ಸ್ಮರಣೆಯನ್ನು ಮಾಡದೆ ಮುಂದೆ ಸಾಗುವುದು ಹತಾಶೆಯನ್ನು ಉಂಟು ಮಾಡುತ್ತಿದೆ – ಡಾ ಜ್ಯೋತಿ ಚೇಳ್ಯಾರು

ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆಯವರ ಹೆಸರನ್ನು ಮೊದಲು ಕೇಳಿದ್ದು ಯಾವಾಗ? ನೆನಪಿಸಿಕೊಂಡರೆ ಬಾಲ್ಯ ನಿರುತ್ತರವಾಗುತ್ತದೆ.  ಶಿಕ್ಷಣ ಪಡೆಯುವ ಕಾಲಕ್ಕೆ ಸಮಾಜ ವಿಜ್ಞಾನ ಪಾಠದ ಒಳಗೂ ಸಮಾಜ ಸುಧಾರಕರ ಹೆಸರಿನ ಪಟ್ಟಿಗಳನ್ನು ಓದಿರುವ ನೆನಪುಗಳು ಇಲ್ಲ.  ಸುದೀರ್ಘ ಪ್ರಯಣದ ಓದು-ಬರಹ-ಕಲಿಕೆಯ ಹಾದಿಯಲ್ಲಿ ಆಕೆ ಎದುರಾಗಲೇ ಇಲ್ಲ. ಯಾಕೆ ಹೀಗೆ?

ಬದುಕಿನಲ್ಲಿ ಸ್ವತ: ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಶಿಕ್ಷಕ ವೃತ್ತಿಯಲ್ಲಿ ‘ಶಿಕ್ಷಕರ ದಿನಾಚರಣೆ’ ಎಂದು ಸಂಭ್ರಮ ಪಡುವುದು ಡಾ. ರಾಧಾಕೃಷ್ಣನ್ ರವರ ಜನ್ಮದಿನವನ್ನು. ಶಿಕ್ಷಣ ಇಲಾಖೆ, ಸರ್ಕಾರ ಬಹಳ ಅದ್ದೂರಿಯ ಕಾರ್ಯಕ್ರಮಗಳು, ಕಾರ್ಯ ಯೋಜನೆಗಳನ್ನು ರೂಪುರೇಷೆಗೊಳಿಸಿ ಪ್ರಶಸ್ತಿ, ಪುರಸ್ಕಾರಗಳ ಸಮಾರಂಭಗಳನ್ನು ಏರ್ಪಡಿಸುತ್ತದೆ.  ಅದರ ಮಿತಿಗಳು ಏನೇ ಇರಲಿ ಶಿಕ್ಷಕ ವೃತ್ತಿಯ ಮಹತ್ವವನ್ನು ಇಲ್ಲಿ ಚರ್ಚಿಸಲಾಗುತ್ತದೆ.  ಅಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ತಪ್ಪಿಯೂ ಭಾರತದ ಮೊದಲ ಶಿಕ್ಷಕಿಯ ಹೆಸರು ಪ್ರಸ್ತಾಪಗೊಳ್ಳುವುದಿಲ್ಲ.

ಇಂದು ನಾವು ತಿಳಿಯುವ, ಹೇಳುವ, ಓದುವ, ಬರೆಸುವ ಚರಿತ್ರೆ ಅಂತಹುದು. ಈ ಪ್ರಶ್ನೆ ಕೇಳಿದರೆ ನಮಗೆ ಉತ್ತರಿಸುವ ನೈತಿಕತೆ ಇದೆಯೇ?  ನಾವು ಇಂದು ಜನ ಸಾಮಾನ್ಯರ ಚರಿತ್ರೆಯನ್ನು ಮರೆತು ನಡೆಯುವ ಹೊತ್ತಲ್ಲಿ ದೀನ-ದಲಿತರ ಉದ್ಧಾರಕ್ಕಾಗಿ ತಮ್ಮ ಜೀವಮಾನವನ್ನು ಸವೆಸಿದ, ತೋರಿದ ಪ್ರತಿರೋಧಗಳಿಗೆ ಎದೆಯೊಡ್ಡಿ ನಿಂತ ವ್ಯಕ್ತಿತ್ವವನ್ನು ಮರೆಯಲಾದೀತೆ?

Pic: Awdhesh Bajpai
ಮಹಾರಾಷ್ಟ್ರ ಸತಾರಾ ಜಿಲ್ಲೆ ನೈಗಾಮ್ ನಲ್ಲಿ ಜನಿಸಿದ ಸಾವಿತ್ರಿ ಬಾಯಿ ತಮ್ಮ ೧೨ನೇ ವಯಸ್ಸಿನಲ್ಲಿ ಜ್ಯೋತಿರಾವ್ ಪುಲೆಯವರನ್ನು ಮದುವೆಯಾದರು. ಮುಂದೆ ಜೀವನವನ್ನು ಬಹುಸಂಖ್ಯಾತ ಸಮಾಜದ ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತ ಹಕ್ಕುಗಳಿಗಾಗಿ ಮುಡಿಪಾಗಿಟ್ಟರು.  ಆದರೆ ಅವರು ಎಲ್ಲ ಶೋಷಿತ ಸಮುದಾಯಗಳಿಗೆ ನೀಡಿರುವ ಕೊಡುಗೆಯನ್ನು ಸಾರ್ವಜನಿಕ ವಲಯ ಕಡೆಗಣಿಸಿದೆ.  ತಮ್ಮ ಪತಿ ಜ್ಯೋತಿ ಬಾಪುಲೆ ಜೊತೆ ಸೇರಿ ಪ್ರಾರಂಭಿಸಿದ ಮೊದಲ ಹೆಣ್ಣು ಮಕ್ಕಳ ಶಾಲೆಗೆ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು.  ಆದ್ದರಿಂದ ಅವರನ್ನು ಭಾರತದ ಮೊದಲ ಶಿಕ್ಷಕಿ ಎಂದು ಕರೆಯುತ್ತಾರೆ. 

ಮೇಲ್ವರ್ಗದ ಜನರು ಸಾವಿತ್ರಿ ಬಾಯಿಯವರು ಒಬ್ಬರು ಮಹಿಳೆ ಮತ್ತು ಹಿಂದುಳಿದ ವರ್ಗದವರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ಕೆಸರು, ಸೆಗಣಿಗಳನ್ನು ಎಸೆದರು. ಆದರೆ ಇದ್ಯಾವುದು ಕೂಡ ಅವರನ್ನು ಸಾಮಾಜಿಕ ಸುಧಾರಣೆಯ ಪ್ರಯತ್ನದಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ.  ಸಾವಿತ್ರಿ ತಾಯಿಯವರ ಕಲಿಕೆಯ ಬೋಧನಾ ಮಾದರಿಯು ಪಾಲ್ಗೊಳ್ಳುವಿಕೆ, ಸೃಜನಶೀಲತೆಯಿಂದ ಕೂಡಿತ್ತು. ಆಗ ಅಸ್ತಿತ್ವದಲ್ಲಿದ್ದ ವೈದಿಕಶಾಹಿ ವ್ಯವಸ್ಥೆಯ ಪ್ರತಿಬಂಧಕ ಕಲಿಕೆಗಿಂತ ಭಿನ್ನವಾಗಿತ್ತು. ವಿದ್ಯಾರ್ಥಿಗಳಿಗೆ ಭಿನ್ನವಾಗಿ ಅವರು ಚಿಂತನೆಗಳನ್ನು ತುಂಬಿದರು. 

ಸಾಮಾಜಿಕ ಬದಲಾವಣೆಯು ತಳಮಟ್ಟದಿಂದಲೇ ಬದಲಾಗಬೇಕೆಂಬುದನ್ನು ಬಯಸಿದ್ದ ಅವರು ಆಗಿನ ಕಟು ಸಂಪ್ರದಾಯ ನೀತಿ ಪದ್ಧತಿಗಳನ್ನು ತಿರಸ್ಕರಿಸಿದರು. ಅವರ ಕಾರ್ಯಗಳಿಗೆ ಜ್ಯೋತಿ ಬಾಪುಲೆ ಬೆಂಬಲವಾಗಿ ನಿಂತರು.  ಸಾವಿತ್ರಿ ಬಾಯಿಯವರು ಹಳೆಯ ಸಂಪ್ರದಾಯಗಳಿಗೆ ಅಂತ್ಯ ಹಾಡಿ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿ ಅಂತಹ ದಂಪತಿಗಳಿಗೆ ಆಶ್ರಯವನ್ನು ನೀಡಿದರು. 

 ತಮ್ಮ ಸಮಾಜ ಕಾರ್ಯದ ಭಾಗವಾಗಿ ಶಾಲಾ ಸಂಸ್ಥೆ ಮಹಿಳಾ ಸೇವಾ ಮಂಡಳಿ(೧೮೫೨) ರೈತ ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆ (೧೮೫೫) ಅನಾಥಾಶ್ರಮ(೧೮೬೩) ಶಿಶು ಹತ್ಯೆ ನಿಷೇಧದ ಆಶ್ರಮ(೧೮೫೩) ಭೀಕರ ಬರಗಾಲ ನಿರ್ವಹಿಸಲು ಆಹಾರ ಕೇಂದ್ರಗಳ ಸ್ಥಾಪನೆ (೧೮೭೫-೭೭) ಈ ಮೂಲಕ ಅವರು ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಬರ ಪರಿಹಾರದಂತಹ ಸಮಾಜ ಸುಧಾರಣೆಯ ಕಾರ್ಯಗಳನ್ನು ಕೈಗೊಂಡರು. ಮಾರ್ಚ್ ೧೦ ೧೮೯೭ರಂದು ತಮ್ಮ ೬೬ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇಂತಹ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಇಂದಿಗೂ ಜನಮನದಲ್ಲಿ ನೆಲೆಯೂರಿದ್ದಾರೆ ಸಾವಿತ್ರಿ ಬಾಪುಲೆ.

ಶಿಕ್ಷಕ ವೃಂದ ಇಂತಹ ಅಸಮಾನ್ಯಳಾದ ಅವಳನ್ನು ಸ್ಮರಿಸಲು ಯಾಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಗಂಭೀರವಾದ ಪ್ರಶ್ನೆ.  ಘನತೆಯ ಶಿಕ್ಷಕ ವೃತ್ತಿಯಲ್ಲಿದ್ದು ಶಿಕ್ಷಕರ ಘನತೆಯನ್ನು ಎತ್ತಿ ಹಿಡಿದ ಹೆಣ್ಣಿನ ಬಗೆಗಿನ ಮೌನಕ್ಕೆ ಹಲವು ಕಾರಣಗಳಿವೆ.

 ಸಮಾಜ ಸುಧಾರಕಿಯಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅರಿವು ಮತ್ತು ಎಚ್ಚರ ನೀಡಿರುವುದು ‘ಸಂಸ್ಕೃತಿ’ ಯ ವಾರಿಸುದಾರರಾದ ಪುರುಷ ಸಮಾಜಕ್ಕೆ ಮಗ್ಗುಲು ಮುಳ್ಳಾಗಿರಲೂ ಬಹುದು.  ಸಾಂಪ್ರದಾಯಿಕ ಶಿಕ್ಷಣದಲ್ಲಿ ನೀತಿ ಪಾಠ, ಮೌಲ್ಯ ಶಿಕ್ಷಣಕ್ಕಾಗಿ ನೂರಾರು ಮಹಾನುಭಾವರ ಕಥೆಗಳನ್ನು ಪೂರಕವಾಗಿ ಪುರಾಣ ಪುಣ್ಯಕಥೆಗಳನ್ನು ಕೇಳಿದ ನಮಗೆ ಸಾವಿತ್ರಿ ಬಾಯಿಯವರ ವ್ಯಕ್ತಿತ್ವಗಳು ನಗಣ್ಯವಾದವು.  ಪ್ರಮುಖವಾದ ಕಾರಣ ಅಂದು ಇಂದು ಶಿಕ್ಷಕ ವೃತ್ತಿಯಲ್ಲಿ ಬಹು ಸಂಖ್ಯಾತರು ಯಾರಿದ್ದರು? ಮೇಲ್ವರ್ಗದ ಮಂದಿ ಶಿಕ್ಷಕರಾದಾಗ ಸಹಜವಾಗಿಯೇ ತಮ್ಮ ಸಮುದಾಯದ ಬಗೆಗೆ ಇರುವ ಲೋಪದೋಷಗಳನ್ನು, ಆರೋಪಗಳನ್ನು ಹಿನ್ನಲೆಗೆ ತರಲಾರರು.  ಅವರು ಹೇಳುತ್ತಿರುವ ಪುರಾಣ ಕಥೆಗಳಲ್ಲಿ  ಇಂತಹ ಪಾತ್ರಗಳು ಯಾವತ್ತು ಬರಲೇ ಇಲ್ಲ.  ನಾವು ಸಣ್ಣವರಿದ್ದಾಗ ಪ್ರಾಥಮಿಕ ಶಾಲೆಗಳಲ್ಲಿ ಹೇಳುತ್ತಿದ್ದ ಪುರಾಣದ ಕಥೆಗಳು ಚರಿತ್ರೆಯ ಕಥೆಗಳ ನಡುವೆ ವ್ಯಥೆಯ ಕಥೆಯಾಗಿಯೂ ಸಾವಿತ್ರಿ ಬಾಯಿ ದಕ್ಕಲಿಲ್ಲ.

 Pic : Google

ಇಂದು ಶಿಕ್ಷಕ ವೃತ್ತಿಯಲ್ಲಿದ್ದು ಶಿಕ್ಷಕಿಯಾಗಿ ಒಡನಾಟದ ಗೆಳತಿಯರಲ್ಲಿ, ಸಹೋದ್ಯೋಗಿಗಳಲ್ಲಿ  ಯಾರಲ್ಲಿ ಕೇಳಿದರೂ ಸಾವಿತ್ರಿ ಬಾಯಿಯನ್ನು ಇತ್ತೀಚೆಗೆ ತಿಳಿಯಿತು ಎನ್ನುತ್ತಾರೆ.  ಸ್ವತಂತ್ರ ಭಾರತದಲ್ಲಿ ಸಂವಿಧಾನ ಜಾರಿಯಾಗಿ ಕಡ್ಡಾಯ ಶಿಕ್ಷಣದಿಂದ ಎಲ್ಲರೂ ಕಲಿಯದಿದ್ದರೂ ಒಂದಷ್ಟು ಹಿಂದುಳಿದ ಮತ್ತು ದಲಿತ ವರ್ಗದ ಮಕ್ಕಳು ಸುಶಿಕ್ಷಿತರಾಗಿದ್ದಾರೆ.  ತಮ್ಮಲ್ಲಿ ಉಂಟಾದ ಜಾಗೃತಿ ಮತ್ತು ಎಚ್ಚರದಿಂದ ಮರೆವಿಗೆ ಸಂದ ಚರಿತ್ರೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಅಕ್ಷರದ ಬೆಳಕಿಗೆ ಮೊದಲು ತೆರೆದುಕೊಂಡವರು ರೋಮಾಂಚನಗೊಂಡು ಪುಳಕಿತರಾದರೆ ಎರಡನೆಯ ತಲೆಮಾರು ಅನ್ಯಾಯವನ್ನು ಅಸಮಾನತೆಯನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ತಳ ಸಮುದಾಯಗಳ ಜನರ ಆತ್ಮಸ್ಥೈರ್ಯದಂತೆ ಸಾವಿತ್ರಿ ಬಾಪುಲೆ ಕಾಣಿಸಿ ಕೊಳ್ಳುತ್ತಾರೆ. ಸಂವಿಧಾನದ ಆಧಾರದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಇದ್ದರೂ, ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಓದುವ ಪಠ್ಯಗಳು ಎಂತಹವು ಎನ್ನುವ ಪ್ರಶ್ನೆ ಹುಟ್ಟುತ್ತದೆ.  ಬಂಡಾಯದ ದನಿಯನ್ನು ಅಮುಕುತ್ತಿರುವ ಹೊತ್ತಿನಲ್ಲೂ ಅದು ಅಕ್ಷರದ ರೂಪವನ್ನು ತಾಳಿ ಅನ್ಯಾಯದ ಅಲೆಗಳ ಸಾಕ್ಷಿ ಪ್ರಜ್ಞೆಯಾಗಿ ನಮ್ಮ ಕಣ್ಣ ಮುಂದೆ ಇದೆ.  ಇದನ್ನು ಪ್ರತಿಭಟಿಸುವ, ಪ್ರತಿರೋಧಿಸುವ ತಂತ್ರಗಾರಿಕೆಗಳು ನಿತ್ಯವೂ ಹೊಸ ಹಾದಿಯನ್ನು ಹುಡುಕುತ್ತಿವೆ.  ಆ ಮೂಲಕ ತಳ ಸಮುದಾಯಗಳು ತಮ್ಮ ಅಸ್ತಿತ್ವದ ಹುಡುಕಾಟದಲ್ಲಿವೆ. 

ಇತ್ತೀಚೆಗೆ ದಲಿತ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆಯ ಮೂಲಕ ಒಂದು ಎಚ್ಚರಿಕೆಯ ಸ್ಮರಣೆಯನ್ನು ಮಾಡುತ್ತಿದ್ದಾರೆ.  ಮರೆತದನ್ನು ಮತ್ತೆ ಸ್ಮರಿಸಿಕೊಳ್ಳುವುದು, ನೆನಪುಗಳನ್ನು ಮಾಲೆಯಾಗಿ ಕಟ್ಟುವುದರಿಂದ ಕಳೆದ ಕಾಲದ ವಾಸ್ತವವನ್ನು ತಿಳಿಯುತ್ತಿದ್ದಾರೆ.   ಆದರೆ ಶಿಕ್ಷಣ ಕ್ಷೇತ್ರಕ್ಕೆ ಬಂದ ದಲಿತ ಮತ್ತು ಹಿಂದುಳಿದ ವರ್ಗದ ಶಿಕ್ಷಕರು ಸಾವಿತ್ರಿ ಬಾಪುಲೆಯನ್ನು ಕನಿಷ್ಠ ಸ್ಮರಣೆಯನ್ನು ಮಾಡದೆ ಮುಂದೆ ಸಾಗುವುದು ಹತಾಶೆಯನ್ನು ಉಂಟು ಮಾಡುತ್ತಿದೆ.  ಪ್ರಜ್ಞಾವಂತರಾದ ಶಿಕ್ಷಕ ಸಮುದಾಯ ಸಾವಿತ್ರಿ ಬಾಪುಲೆಗೆ ಕೃತಜ್ಞರಾಗಿರುವುದು ಅವಶ್ಯವಾಗಿರಬೇಕಾಗಿದೆ. 

ಇತ್ತೀಚೆಗೆ ಸಂಘಟನೆಯೊಂದು ಪುಸ್ತಕ-ಓದು-ಬರಹ ಕಾರ್ಯಕ್ರಮವನ್ನು ನಡೆಸಿದಾಗ ಸಾವಿತ್ರಿ ಬಾಪುಲೆ ವ್ಯಕ್ತಿ ಚಿತ್ರವನ್ನು ಓದಿ ಆಕೆಯ ಬದುಕಿನ ಸಂಕಷ್ಟಗಳನ್ನು ತಿಳಿದು ಒಂದು ದೃಢವಾದ ನಿರ್ಧಾರವನ್ನು ಪ್ರಕಟ ಪಡಿಸುತ್ತಾರೆ.  ತಾನು ಬರೆದ ಪ್ರಬಂಧದಲ್ಲಿ ನಿಜವಾದ ಶಿಕ್ಷಕರ ದಿನ ಜನವರಿ ೩ ಆಗಬೇಕು ಎಂದು ಆಕೆ ಸ್ಪಷ್ಟವಾಗಿ ದಾಖಲಿಸಿದ್ದಳು.  ಈ ರೀತಿಯ ಎಚ್ಚರವನ್ನು ನಾವು ಎಲ್ಲರಿಗೂ ದಾಟಿಸಬೇಕಾಗಿದೆ.

ಡಾ ಜ್ಯೋತಿ ಚೇಳ್ಯಾರು

ಕನ್ನಡ ,ತುಳು ಎರಡೂ ಭಾಷೆಗಳಲ್ಲಿ ಬರೆಯುತ್ತಿರುವವರು, ಪ್ರಾಂಶುಪಾಲರು.

More articles

Latest article