ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈಗ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಪೆಟ್ರೋಲ್, ಮುದ್ರಾಂಕ, ನೋಂದಣಿ ಶುಲ್ಕ ಸೇರಿದಂತೆ ಹಲವು ಏರಿಕೆ ಬಳಿಕ ಬೇರೆ ದಾರಿ ಕಾಣದ ಸರ್ಕಾರ ಇದೀಗ ಖಾಸಗಿ ಕಂಪನಿಗೆ 10 ಕೋಟಿ ರೂಪಾಯಿಗೆ ಗುತ್ತಿಗೆ ನೀಡಿದೆ. ಈ ಕಂಪನಿ ಇದೀಗ ಆದಾಯ ಕ್ರೋಢೀಕರಿಸಲು ಸಿದ್ದರಾಮಯ್ಯ ಸರ್ಕಾರಕ್ಕೆ ಮಾರ್ಗಗಳನ್ನು ಸೂಚಿಸಲಿದೆ. ರಾಹುಲ್ ಗಾಂಧಿ ಆಪ್ತ ಸಲಹೆಗಾರ ಪ್ರವೀಣ್ ಚಕ್ರವರ್ತಿ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೇರಲು ಕರ್ನಾಟಕದಲ್ಲಿ 5 ಗ್ಯಾರೆಂಟಿ ಭರವಸೆ ನೀಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ 5 ಗ್ಯಾರೆಂಟಿ ಜಾರಿಗೊಳಿಸಿದ್ದು ಮುಂದಿನ ನಾಲ್ಕು ವರ್ಷ ಯೋಜನೆ ಮುಂದುವರೆಸಲು ಆದಾಯ ಕ್ರೋಢೀಕರಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು ನಡೆಸಿದೆ.
5 ಗ್ಯಾರೆಂಟಿಗಾಗಿ ವಾರ್ಷಿಕ 50 ರಿಂದ 60 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸರ್ಕಾರದ ಇತರ ವೆಚ್ಚ, ವೇತನ ಸೇರಿದಂತೆ ಇತರ ಖರ್ಚು ವೆಚ್ಚಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಕ್ರೋಢಿಕರಿಸಬೇಕಾಗಿದೆ. ಆದರೆ ರಾಜ್ಯದ ಆದಾಯ ಈ ಮಟ್ಟಕ್ಕಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಖಾಸಗಿ ಬೋಸ್ಟನ್ ಕನ್ಸಲ್ಟೆಂಗ್ ಗ್ರೂಪ್ ಕಂಪನಿಯ ಮೊರೆ ಹೋಗಿದೆ.
ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಗ್ಯಾರೆಂಟಿ ವಿತರಣೆಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿದೆ. ಪೆಟ್ರೋಲ್ ಡೀಸೆಲ್ ಬೆಲೆ 3 ರೂಪಾಯಿ. ಮುದ್ರಾಂಕ ಶುಲ್ಕಾ ಶೇಕಡಾ 500ರಷ್ಟು ಏರಿಕೆ, ಹೊಸ ವಾಹನ ಖರೀದಿಗೆ ಹೆಚ್ಚುವರಿ ತೆರಿಗೆ ಮಾಡಲಾಗಿದೆ. ಇನ್ನು ನೀರಿನ ದರ ಏರಿಕೆ ಹಾಗೂ ಆಸ್ತಿ ತೆರಿಗೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಯತ್ನದ ಹೊರತಾಗಿಯೂ ಸಿದ್ದರಾಮಯ್ಯ ಸರ್ಕಾರ ಹಣದ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್(BCG) ಕಂಪನಿಗೆ ಗುತ್ತಿಗೆ ನೀಡಿದೆ ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.
ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಕಂಪನಿ ಸಿದ್ದರಾಮಯ್ಯ ಸರ್ಕಾರ ಆದಾಯ ಕ್ರೋಢಿಕರಣಕ್ಕೆ ಮಾರ್ಗಗಳನ್ನು ಪತ್ತೆಯಚ್ಚುವುದು. ಇದೇ ವೇಳೆ ರಾಜ್ಯದ ಖರ್ಚು ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚಿಸಲು ಮೂಲಗಳನ್ನು ಹುಡುಕಿಕೊಡುವುದು. ಪಬ್ಲಿಕ್-ಪ್ರವೈಟ್ ಪಾರ್ಟ್ನರ್ಶಿಪಿ(ಪಿಪಿಪಿ ಮಾಡೆಲ್), ಸೋರಿಕೆ ತಡೆಗಟ್ಟುವಿಕೆ, ಆಸ್ತಿಗಳಿಂದ ಆದಾಯ ಕ್ರೋಢಿಕರಣ, ವಿವಿಧ ಇಲಾಖೆಗಳಲ್ಲಿ ಆದಾಯ ಹೆಚ್ಚಳಕ್ಕೆ ಮಾರ್ಗ, ಮೈನಿಂಗ್, ಅರಣ್ಯ ಸೇರಿದಂತೆ ಹಲವು ಮೂಲಗಳಿಂದ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಬಿಸಿಜಿ ಹೊತ್ತುಕೊಂಡಿದೆ. ಹಾಗಾಂತ ಈ ಕಂಪನಿ ಸುಮ್ಮನೆ ಈ ಹೊಣೆ ಹೊತ್ತುಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕಳೆದ 6 ತಿಂಗಳಲ್ಲಿ ಬೋಸ್ಟನ್ ಗ್ರೂಪ್ ಕಂಪನಿಗೆ ಬರೋಬ್ಬರಿ 9.5 ಕೋಟಿ ರೂಪಾಯಿ ಪಾವತಿಸಿದೆ ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ. .