ಬಿಡುಗಡೆಗೂ ಮುನ್ನವೇ ತೀವ್ರ ವಿವಾದ ಸೃಷ್ಟಿಸಿರುವ ಹಮಾರೆ ಬಾರಾ ಚಿತ್ರ ಬಿಡುಗಡೆಗೆ ಕರ್ನಾಟ ಸರ್ಕಾರ ನಿಷೇಧ ಹೇರಿದೆ.
ಕಮಲ್ ಚಂದ್ರ ನಿರ್ದೇಶನದ ಚಿತ್ರವು ಮುಸ್ಲಿಂ ಮಹಿಳೆಯರ ಕುರಿತಾಗಿ ಮಾಡಲಾಗಿದ್ದು ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ಚಿತ್ರ ಬಿಡುಗಡೆಯನ್ನು ನಿಷೇಧಿಸಲಾಗಿದ್ದು, ಇದೀಗ ಕರ್ನಾಟಕದಲ್ಲೂ ನಿಷೇಧ ಹೇರಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆ 1964, ಸೆಕ್ಷನ್ 15 (1) ಮತ್ತು 15(5) ರ ಅನ್ವಯ ಈ ಸಿನಿಮಾದ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ಆಗುತ್ತದೆ ಎಂಬ ಕಾರಣ ನೀಡಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಅಲ್ಲದೇ ಕೆಲವು ಅಲ್ಪಸಂಖ್ಯಾತ ಸಂಘಟನೆಗಳು ಸಿನಿಮಾವನ್ನು ಬಿಡುಗಡೆ ಮಾಡದಂತೆ ಮನವಿ ಮಾಡಿವೆ ಎಂದು ವರದಿಯಾಗಿದೆ.
ಮುಸ್ಲಿಂ ಮಹಿಳೆಯರ ಕುರಿತಾದ ಹಮಾರೆ ಬಾರಾ ಚಿತ್ರದ ಟ್ರೈಲರ್ ಕೆಲ ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅವಹೇಳನಕಾರಿ ಅಂಶಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ಅಜರ್ ಎಂಬುವರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಜೂನ್ 14 ರವರೆಗೆ ಬಿಡುಗಡೆ ನಿಷೇಧಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಸಿನಿಮಾದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಋಣಾತ್ಮಕ ಸಂಭಾಷಣೆಗಳಿವೆ, ಇಸ್ಲಾಂ ಧರ್ಮವನ್ನು ಕೆಟ್ಟ ರೀತಿಯಾಗಿ ಬಿಂಬಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಸಿಬಿಎಫ್‌ಸಿ ಈಗಾಗಲೇ ಕೆಲವು ಸಂಭಾಷಣೆಗಳಿಗೆ ಕಟ್ ಗಳನ್ನು ಸೂಚಿಸಿ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು, ಬಿಡುಗಡೆಗೆ ತಕಾರರು ಸಲ್ಲಿಸಿಲ್ಲ. ನ್ಯಾಯಾಲಯದಲ್ಲಿಯೂ ಸಹ ಈ ಬಗ್ಗೆ ಸಿಬಿಎಫ್‌ಸಿ ಹೇಳಿಕೆ ದಾಖಲಿಸಿದೆ.
ಇನ್ನು ಸಿನಿಮಾ ತಂಡವು ತಮ್ಮ ಸಿನಿಮಾದಲ್ಲಿ ಯಾವುದೇ ಧರ್ಮವನ್ನು ಕೆಟ್ಟ ರೀತಿಯಲ್ಲಿ ತೋರಿಸಿಲ್ಲ ಎನ್ನುತ್ತಿದೆ. ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅನ್ನು ಕಪೂರ್, ದಯವಿಟ್ಟು ಸಿನಿಮಾವನ್ನು ಒಮ್ಮೆ ನೋಡಿ ಆ ನಂತರ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಇದು ಎಲ್ಲರೂ ನೋಡಬೇಕಾದ ಸಿನಿಮಾ ಎಂದಿದ್ದಾರೆ. ಅಲ್ಲದೇ ಈ ಸಿನಿಮಾ ಮಾಡಿದ ಚಿತ್ರತಂಡಕ್ಕೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಚಿತ್ರತಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.