Thursday, May 23, 2024

ಸೆರೆವಾಸ ನನಗೆ ಹೊಸತಲ್ಲ, ಸುಗ್ರೀವಾಜ್ಞೆ ಜಾರಿಯಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ: ನಾರಾಯಣಗೌಡ

Most read

ಹದಿನೈದು ದಿನಗಳ ಸೆರೆವಾಸದಿಂದ ಹೊರಗೆ ಬಂದಿದ್ದೇನೆ. ಇದು ನನಗೆ ಹೊಸದಲ್ಲ. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡತನಕ್ಕಾಗಿ ಎಷ್ಟೋ ಬಾರಿ ಜೈಲಿಗೆ ಹೋಗಿದ್ದೇನೆ. ಮೊಕದ್ದಮೆಗಳು, ಸೆರೆವಾಸ ಇದೆಲ್ಲವೂ ಒಬ್ಬ ಚಳವಳಿಗಾರನ ಬದುಕಲ್ಲಿ ಅನಿವಾರ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಎಕ್ಸ್ (ಟ್ವಿಟರ್) ನಲ್ಲಿ ಸರಣಿ ಪೋಸ್ಟ್ ಗಳನ್ನು ಬರೆದಿರುವ ಅವರು ಕನ್ನಡಕ್ಕಾಗಿ ಕಾನೂನುಬದ್ಧ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ‌.

ಡಿಸೆಂಬರ್ 27ರಂದು ನಡೆದ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸಾವಿರಾರು ಇಂಗ್ಲಿಷ್ ನಾಮಫಲಕಗಳನ್ನು ಕರವೇ ಕಾರ್ಯಕರ್ತರು ಕಿತ್ತೆಸೆದು ಪ್ರತಿಭಟಿಸಿದ್ದರು.

ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರೊಂದರ ಹಿನ್ನೆಲೆಯಲ್ಲಿ ನಾರಾಯಣಗೌಡರೂ ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ನಿನ್ನೆಯಷ್ಟೆ ಜೈಲಿನಿಂದ ಹೊರ ಬಂದ ನಾರಾಯಣಗೌಡರು, ನನ್ನ ಸೆರೆವಾಸದ ಸಂದರ್ಭದಲ್ಲಿ ನನ್ನ ಬಿಡುಗಡೆಗಾಗಿ ಧ್ವನಿ ಎತ್ತಿದ ಎಲ್ಲರಿಗೂ ಕೋಟಿ ನಮನಗಳು. ವಿಶೇಷವಾಗಿ ನನ್ನ ಕರವೇ ಕಾರ್ಯಕರ್ತರು, ವಿವಿಧ ಕನ್ನಡ ಚಳವಳಿಗಳ ಮುಖಂಡರು, ರಾಜಕೀಯ ನಾಯಕರು, ಸಾಹಿತಿ-ಕಲಾವಿದರು, ಮಾಧ್ಯಮದ ಬಂಧುಗಳು ಹಾಗು ಎಲ್ಲ ಕನ್ನಡಿಗರಿಗೂ ನನ್ನ ಕೃತಜ್ಞತೆಗಳು ಎಂದು ಅಭಿಮಾನ ತೋರಿದ್ದಾರೆ.

ಒಂದಾದ ಮೇಲೊಂದರಂತೆ ಪೊಲೀಸ್ ಕೇಸ್ ಗಳು, ಜೈಲುವಾಸ ಎಲ್ಲದರ ನಡುವೆಯೂ ನನಗೆ ಅತ್ಯಂತ ಸಮಾಧಾನ ತಂದಿರುವುದು ನಮ್ಮ ಹೋರಾಟ ತಾರ್ಕಿಕ ಗುರಿಯತ್ತ ಸಾಗಿರುವ ಬೆಳವಣಿಗೆ. ರಾಜ್ಯ ಸರ್ಕಾರ ಈಗಾಗಲೇ ಕನ್ನಡ ನಾಮಫಲಕ ಕಡ್ಡಾಯದ ಸುಗ್ರೀವಾಜ್ಞೆ ಹೊರಡಿಸಿದೆ. ನಮ್ಮ ಚಳವಳಿ ಯಶಸ್ವಿಯಾಗಿರುವುದಕ್ಕೆ ಇದು ಸಾಕ್ಷಿ ಎಂದಿರುವ ಅವರು, ಫೆಬ್ರವರಿ 28ರೊಳಗೆ ರಾಜ್ಯದ ಎಲ್ಲ ಭಾಗಗಳಲ್ಲೂ ನಾಮಫಲಕಗಳು, ಜಾಹೀರಾತು ಫಲಕಗಳು ಕನ್ನಡೀಕರಣಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ, ನಮ್ಮೆಲ್ಲರ ಜವಾಬ್ದಾರಿ. ನೀವು ಇರುವ ಪ್ರದೇಶಗಳಲ್ಲಿ ನಾಮಫಲಕಗಳು ಕನ್ನಡೀಕರಣಗೊಳ್ಳದಿದ್ದರೆ ನೀವೇ ಪ್ರಶ್ನಿಸಿ. ಎಲ್ಲದಕ್ಕೂ ಹೋರಾಟಗಾರರಿಗೆ ಕಾಯಬೇಡಿ ಎಂದು ಹೇಳಿದ್ದಾರೆ.

ಡಿಸೆಂಬರ್ 27ರಂದು ಕನ್ನಡ ನಾಮಫಲಕ ಚಳವಳಿಯ ಸಂದರ್ಭದಲ್ಲಿ ಒಂದಷ್ಟು ಸಮಸ್ಯೆಗಳಾದವು. ದೊಡ್ಡ ಮಟ್ಟದ ಚಳವಳಿಗಳ ಸಂದರ್ಭದಲ್ಲಿ ಹೀಗಾಗುವುದು ಸಹಜ. ನಾವು ಪ್ರಜಾಪ್ರಭುತ್ವ ಮಾರ್ಗದ ಕಾನೂನು ಬದ್ಧ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರು ನುಡಿದಿದ್ದಾರೆ.

More articles

Latest article