ಕನ್ನಡಿಗರಿಗೆ ಉದ್ಯೋಗ : ದೊಡ್ಡ ಮಟ್ಟದ ಹೋರಾಟಕ್ಕೆ ಕರವೇ ಸಜ್ಜು

Most read

ಬೆಂಗಳೂರು : ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಕನ್ನಡ ಇರಬೇಕು, ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೆ ಸಿಗಬೇಕು ಹಾಗೂ ಕರ್ನಾಟಕದ ಎಲ್ಲಾ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಬೇಕು ಮತ್ತು ವ್ಯವಹಾರದಲ್ಲಿ ಕನ್ನಡದ ಬರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ತಕ್ಷಣವೇ ಈ ಮೂರು ವಿಷಯಗಳ ಕುರಿತು ಕಾಯ್ದೆ ಮಾಡಬೇಕು ಮತ್ತು ಕನ್ನಡಿಗರ ಪರವಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಲಾಗುವುದು ಎಂದರು.

ಸರ್ಕಾರ ಇದರ ಬಗ್ಗೆ ಗಮನಕೊಡದೆ ಹೋದರೆ ಮುಂದಿನ ನಿಮ್ಮ ಹೋರಾಟ ಹೇಗಿರುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “2023ರ ಡಿಸೆಂಬರ್‌ 27 ರಂದು ನಾಮಫಲಕದ ವಿಚಾರವಾಗಿ ಹೇಗೆ ಕಾನೂನನ್ನು ಕೈಗೆತ್ತಿಕೊಂಡೆವೊ, ಹಾಗೇಯೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು ಸರ್ಕಾರ ಎಚ್ಚರಗೊಳ್ಳಬೇಕು” ಎಂದು ಎಚ್ಚರಿಕೆ ಸಂದೇಶವನ್ನು ನೀಡಿದರು.

ಹೋಬಳಿ ಮಟ್ಟದಲ್ಲಿಯೂ ಉತ್ತರ ಭಾರತದ ರಾಜಸ್ಥಾನಿಗಳು, ಮಾರವಾಡಿಗಳು ವ್ಯಾಪರ ಮಾಡುತ್ತಿದ್ದಾರೆ. ಇದರ ವಿರುದ್ಧ ಎಲ್ಲಾ ಕನ್ನಡಿಗರು ಎಚ್ಚರಗೊಳ್ಳಬೇಕು. ಕೇವಲ ಸರ್ಕಾರಿ ಉದ್ಯೋಗಕ್ಕೆ ಜೋತು ಬೀಳದೆ ವ್ಯಾಪಾರ ವ್ಯವಹಾರದಲ್ಲೂ ಕನ್ನಡಿಗರು ಮುಂದೆ ಬರಬೇಕು ಎಂದು ಸಂದೇಶ ಕೊಟ್ಟರು.

ನಮ್ಮ ರಾಜ್ಯದಲ್ಲಿ ತಯಾರಾಗುವ ನಂದಿನ ಪ್ರಾಡಕ್ಟ್‌ಗಳ ಏಜೆನ್ಸಿಯನ್ನು ಉತ್ತರ ಭಾರತದ ಮಹೇಂದ್ರ ಜೈನ್‌ ಎಂಬಾತ ನಿರ್ವಹಿಸುತ್ತಿದ್ದು, ನಂದಿನಿಯಲ್ಲಿ ತಯಾರಾಗುವ ಎಲ್ಲಾ ಪ್ರಾಡಕ್ಟ್‌ಗಳನ್ನು ರೈಲಿನ ಮೂಲಕ ರಾಜಸ್ಥಾನಕ್ಕೆ ಕಳಿಸಿ, ನಂತರ ಉಳಿದ ಪ್ರಾಡಕ್ಟ್‌ಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು.

ರಾಜ್ಯಕ್ಕೆ ಬರುವ ಎಲ್ಲಾ ವಸ್ತುಗಳ ಮೇಲೆಯೂ ಕೇವಲ ಇಂಗ್ಲಿಷ್‌ ಅಥವಾ ಹಿಂದಿ ಇರುತ್ತದೆ. ನಮ್ಮ ರಾಜ್ಯದಲ್ಲಿ ಮಾರಾಟವಾಗುವ ಎಲ್ಲಾ ವಸ್ತುಗಳ(ನೀರು, ಬಿಸ್ಕೆಟ್‌, ಸೋಪು, ತಿನ್ನುವ ಪದಾರ್ಥಗಳು….) ಮೇಲೆ ಕಡ್ಡಾಯವಾಗಿ ಕನ್ನಡ ಇರಬೇಕು. ಸರ್ಕಾರ ಇದರ ಕುರಿತು ಕೂಡಲೇ ಕಾಯ್ದೆ ಮಾಡಬೇಕು ಎಂದರು.

“ಒಂದು ಕಾಲಕ್ಕೆ ಶೇ 80% ರಷ್ಟು ಕನ್ನಡಿಗರಿದ್ದಂತಹ ಬ್ಯಾಂಕ್‌ಗಳಲ್ಲಿ ಈಗ ಹೊರಗಿನವರು ಕೆಲಸ ಮಾಡುತ್ತಿದ್ದಾರೆ ಮತ್ತು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಒಬ್ಬ ರೈತನ ಬಳಿ ಬ್ಯಾಂಕ್‌ ಮ್ಯಾನೆಜರ್ ಹಿಂದಿಯನ್ನು ಕಲಿತು ಮಾತನಾಡು ಅಂತ ಹೇಳಿರುವುದನ್ನು ಕರವೇ ಖಂಡಿಸುತ್ತದೆ. ಕೇಂದ್ರ ಸರ್ಕಾರ ತಕ್ಷಣವೇ ಕರ್ನಾಟಕದ ಬ್ಯಾಂಕ್ ನಲ್ಲಿರುವ ಬೇರೆ ಭಾಷಿಕರನ್ನು ವಾಪಸ್ಸು ಕರೆಸಿಕೊಳ್ಳಬೇಕು. ಕನ್ನಡಿಗರಿಗೆ ಉದ್ಯೋಗ ‌ಬ್ಯಾಂಕಿಂಗ್‌ ಉದ್ಯೋಗ ಸಿಗಬೇಕು ಎಂದು ಒತ್ತಾಯ ಮಾಡಿದರು.

ಮೇಲಿನ ಮೂರು ವಿಷಯಗಳ ಕುರಿತು ಕಾಯ್ದೆ ಮಾಡಲು ಸರ್ಕಾರಕ್ಕೆ ಒಂದು ವರ್ಷದ ಅವಕಾಶವನ್ನು ಕರವೇ ನೀಡಲಾಗುವುದು ಎಂದರು. ಸರ್ಕಾರ ಇದರ ಬಗ್ಗೆ ಗಮನಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಕರವೇ ಕಾರ್ಯಕರ್ತರು ರಾಜ್ಯಾದ್ಯಂತ ದೊಡ್ಡ ಹೋರಾಟವನ್ನು ಮಾಡುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.

ಮೇಲಿನ ಮೂರು ವಿಷಯಗಳ ಕುರಿತು, ಇದೇ ಫೆಬ್ರವರಿ 2 ನೇ ತಾರೀಕು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ದೊಡ್ಡ ಮಟ್ಟದ ಮೊದಲ ಹೋರಾಟ ನಡೆಯಲಿದೆ ಎಂದರು.

More articles

Latest article