ಆಗಸ್ಟ್ 28ನೇ ತಾರೀಖು ನಡೆದ ಕೆಪಿಎಸ್ಸಿ ನೇತೃತ್ವದಲ್ಲಿ ನಡೆದ ಕೆಎಎಸ್ ಪರೀಕ್ಷೆಯಲ್ಲಿ ತಪ್ಪು ಅನುವಾದ, ಗೊಂದಲದ ಪ್ರಶ್ನೆಗಳಿಂದಾಗಿ ಅಭ್ಯರ್ಥಿಗಳು ಉತ್ತರಿಸದೇ ತೊಂದರೆ ಅನುಭವಿಸಿರುವುದು ಬೆಳಕಿಗೆ ಬಂದ ತಕ್ಷಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ, ಕನ್ನಡಕ್ಕೆ ಆಗಿರುವ ಅಪಮಾನ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಆಗಸ್ಟ್ 27ರಂದು ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದ್ದು, ಪರೀಕ್ಷೆಗಳನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ ಎಂದಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ತಮ್ಮ ಅಳಲನ್ನು ಹಲವು ಮಾಧ್ಯಮಗಳ ಮುಂದೆ ತೋಡಿಕೊಂಡಿರುವುದನ್ನು ನೋಡಿ ಸಂಕಟವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ತಾವು ಮಾಡಿರುವ ಅನ್ಯಾಯವನ್ನು ಒಪ್ಪಿಕೊಳ್ಳದೇ ಬೇರೆ ಬೇರೆ ರೀತಿಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಅಧಿಕಾರಿಗಳ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.
ಸುಮಾರು ಒಂದು ಲಕ್ಷದ ಮೂವತ್ತಾರು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಇವರಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಗ್ರಾಮೀಣ ಹಿನ್ನೆಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು. ಕೆಲವಾರು ವರ್ಷಗಳಿಂದಲೂ ಇವರು ಕನ್ನಡ ಮಾಧ್ಯಮದ ಮೂಲಕವೇ ಕೆಎಎಸ್ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದವರು. ಇಂತವರಿಗೆ ಸರಿಯಾಗಿ ಅರ್ಥವೂ ಆಗದ ರೀತಿಯಲ್ಲಿ ಪ್ರಶ್ನೆಗಳನ್ನು ಕೊಟ್ಟಿದ್ದರ ಹಿಂದೆ ಯಾವ ಉದ್ದೇಶವಿದೆ? ಒಂದೋ ಎರಡೋ ಪ್ರಶ್ನೆಗಳಾಗಿದ್ದರೆ ಏನೋ ಲೋಪವಾಗಿದೆ ಎಂದುಕೊಳ್ಳಬಹುದು. ಸುಮಾರು 60 ಪ್ರಶ್ನೆಗಳಲ್ಲಿ ಅಂದರೆ 120 ಅಂಕಗಳ ಪ್ರಶ್ನೆಗಳಲ್ಲಿ ಪ್ರಶ್ನೆಗಳೇ ಅರ್ಥವಾಗದ ರೀತಿಯಲ್ಲಿ ಗೊಂದಲ ಮೂಡಿಸುವ ಪ್ರಶ್ನೆಗಳಿವೆ ಎಂದರೆ ಇದು ಸಣ್ಣಪುಟ್ಟ ಲೋಪವಾಗಿರಲು ಸಾಧ್ಯವಿಲ್ಲ. ಇದರ ಹಿಂದೆ ಯಾರ ಹುನ್ನಾರವಿದೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದಿದ್ದಾರೆ.
ಭಾರತದ ನದಿ ವ್ಯವಸ್ಥೆ ಎಂದು ಕೊಡಬೇಕಾದ ಕಡೆ “ಚರಂಡಿ ವ್ಯವಸ್ಥೆ” ಎಂದೂ, ಭಾರವಾದ ಎಂಬುದರ ಬದಲಿಗೆ ಅತಿ ವೇಗವಾದ ಎಂದೂ, ಸಿಸ್ಟರ್ ಎಂಬುದಕ್ಕೆ ಸಹೋದರ ಎಂದೂ, ರಾಜ್ಯ ವಿಧಾನಸಭೆ ಎಂಬುದರ ಬದಲಿಗೆ ರಾಜ್ಯಸಭೆ ಎಂದೂ, ಕಲೆ ಎಂದು ಕೊಡುವ ಬದಲಿಗೆ ವಸ್ತು ಎಂದೂ, ಬೇರಿನಾಕಾರದ ಎಂದು ಕೊಡುವ ಬದಲಿಗೆ ಸಸ್ಯಾಂಕಿತ ಎಂದೂ, ತಪ್ಪಾದ ಇಲ್ಲವೇ ಸರಿಯಲ್ಲದ ಎಂದು ಕೊಡುವ ಕಡೆ ಸರಿಯಾದ ಎಂದೂ ವಿತ್ತೀಯ ಇಲ್ಲವೇ ಹಣಕಾಸು ಎಂದು ಕೊಡಬೇಕಾದ ಕಡೆ ಆರ್ಥಿಕ ಎಂದೂ ಕೆಎಎಸ್ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಕೊಡುವುದು ಕೇವಲ ಭಾಷಾಂತರದ ಸಮಸ್ಯೆ ಎನಿಸುವುದಿಲ್ಲ. ಒಂದು ಪ್ರಶ್ನೆ ಪತ್ರಿಕೆ ತಯಾರು ಮಾಡಲು ಬೇಕಾದ ಕನಿಷ್ಟ ಮಟ್ಟದ ತಿಳುವಳಿಕೆಯಾಗಲೀ, ಸೂಕ್ತ ತರಬೇತಿಯಾಗಲೀ, ಸೂಕ್ತ ಮಾನದಂಡವಾಗಲೀ ಕೆಪಿಎಸ್ಸಿ ಹೊಂದಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ.
ಇಷ್ಟು ಬೇಜವಾಬ್ದಾರಿ ಇರುವ ಅಧಿಕಾರಿಗಳಿಗೆ ಅಥವಾ ಸಂಸ್ಥೆಗಳಿಗೆ ಕನ್ನಡಿಗರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುವುದು ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುವ ಯಾವುದೇ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೊದಲು ಕನ್ನಡದಲ್ಲಿ ತಯಾರಾಗಬೇಕು. ಅದನ್ನು ನಂತರ ಇಂಗ್ಲಿಷಿಗೆ ತರ್ಜುಮೆ ಮಾಡಿಸಬೇಕು. ಆದರೆ ಇದನ್ನು ಕೆಪಿಎಸ್ಸಿ ಅನುಸರಿದೇ ದುಂಡಾವರ್ತನೆ ಪ್ರದರ್ಶಿಸಿದೆ. ಕರ್ನಾಟಕದಲ್ಲಿ ಪರೀಕ್ಷೆ ನಡೆಸುವಾಗ ಮೊದಲು ಇಂಗ್ಲಿಷ್ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಅದನ್ನು ಕನ್ನಡಕ್ಕೆ ಭಾಷಾಂತರ ಮಾಡಿಸುವುದು ಅವೈಜ್ಞಾನಿಕ ಮತ್ತು ಕನ್ನಡ ವಿರೋಧಿತನ. ಇದನ್ನು ಕರವೇ ತೀವ್ರವಾಗಿ ಖಂಡಿಸುವುದರ ಜೊತೆಗೆ ಈ ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಪಡಿಸುತ್ತದೆ.
ಈ ಕೂಡಲೇ ಕೆಪಿಎಸ್ಸಿ ಮೊನ್ನೆ ನಡೆಸಿದ ಪರೀಕ್ಷೆಯನ್ನು ಅಸಿಂಧು ಎಂದು ಪರಿಗಣಿಸಿ ಮರುಪರೀಕ್ಷೆಗೆ ಸೂಚನೆ ಹೊರಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ. ಇದಕ್ಕೆ ಯಾವುದೇ ಸಬೂಬು ಹೇಳಿ ತಮ್ಮ ಕನ್ನಡ ವಿರೋಧಿ ಧೋರಣೆಯನ್ನು ಮುಚ್ಚಿಕೊಳ್ಳುವುದನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇವೆ. ಒಂದು ವೇಳೆ ಕೆಪಿಎಸ್ ಸಿ ಕನ್ನಡಿಗರ ಆಗ್ರಹಕ್ಕೆ ಮಣಿಯದಿದ್ದರೆ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.