“ದೂರದೂರಿನಲ್ಲಿ ಕನ್ನಡ ಕಾಯಕ”

Most read

ನಾನು ಹೊರನಾಡ ಕನ್ನಡಿಗನಾಗಿ ಇನ್ನೇನು ಕೆಲವೇ ತಿಂಗಳುಗಳಲ್ಲಿ ಭರ್ತಿ ಒಂದೂವರೆ ದಶಕದ ಮೈಲಿಗಲ್ಲು ತಲುಪಿದಂತಾಗುತ್ತದೆ.

ಒಂದು ಕಾಲದಲ್ಲಿ ನಮ್ಮಲ್ಲೆಲ್ಲಾ ತಮ್ಮೂರು ಬಿಟ್ಟು ಬೇರೆ ಕಡೆ ನೆಲೆಸಿದ ಮಂದಿಯನ್ನು, ಅದರಲ್ಲೂ ತಮ್ಮ ಕ್ಷೇತ್ರಗಳಲ್ಲಿ ಒಂದು ಮಟ್ಟಿಗೆ ಯಶಸ್ವಿಯಾದವರನ್ನು ಮಹಾಪ್ರತಿಭಾವಂತರಂತೆ, ಶತಮಾನದ ಸಾಧಕರಂತೆ, ಅದೇನೋ ದೊಡ್ಡ ಕ್ರಾಂತಿ ಮಾಡಿದವರಂತೆ ಕಾಣುತ್ತಿದ್ದರಂತೆ. ಈ ಹಂತದ ನಂತರ ಜಾಗತೀಕರಣ ಬಂದುಬಿಟ್ಟಿತು. ದುಬೈಯಲ್ಲಿ ಸಿಗೋ ಚಾಕ್ಲೇಟು ನಮ್ಮ ಹಂಪನಕಟ್ಟೆಯ ಶಾಪಿಂಗ್ ಮಾಲಿನಲ್ಲೂ ಸಿಗುತ್ತದೆ ಎಂದಾದಾಗ ಕ್ರಮೇಣ ವಿದೇಶಗಳ ಬಗೆಗಿರುವ ಮೋಹವು ನಿಂತು ಹೋಯಿತು. ಯಾವ ದೇಶವೂ ದೂರವಲ್ಲ ಅನ್ನಿಸತೊಡಗಿತು. ಈ ಮಧ್ಯೆ ತೊಂಭತ್ತರ ದಶಕದಲ್ಲಿ ನಮ್ಮ ಪೀಳಿಗೆಯ ಮಂದಿಯೂ ಹುಟ್ಟಿಕೊಂಡೆವು. ನಂತರದ ವರ್ಷಗಳಲ್ಲಿ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದಿದೆ. ಆಟದ ನಿಯಮಗಳೂ ಅಡಿಮೇಲಾಗಿವೆ. ಈಗಂತೂ ಐಟಿಯಿಂದ ಮೇಟಿಯೆಡೆಗಿನ ಹೊರಳುವಿಕೆಯೇ ಬಹುತೇಕರಿಗೆ ದೊಡ್ಡ ಮಟ್ಟಿನ ಕ್ರಾಂತಿಯೆಂಬಂತೆ ಕಾಣುವ ಪರಿಸ್ಥಿತಿಗಳು ಬಂದುಬಿಟ್ಟಿವೆ.

ಹೊರನಾಡ ಕನ್ನಡಿಗನಾಗಿ ನನ್ನದೇ ಹಳೆಯ ದಿನಗಳನ್ನು ಈಗ ನೆನಪಿಸಿಕೊಂಡಾಗ ಅಚ್ಚರಿಯಾಗುತ್ತದೆ. ಇನ್ನೇನು ಈ ಮಹಾಸಾಗರದಲ್ಲಿ ಮುಳುಗಿಯೇಬಿಟ್ಟೆವು ಎನ್ನುವಂತಿನ ಸಂದರ್ಭದಲ್ಲಿ ಅದ್ಹೇಗೋ ಕೈಕಾಲು ಬಡಿದು, ತಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಿಕೊಂಡ ಬಾಲಂಗೋಚಿಗಳು ನಾವೆಲ್ಲ. ನನ್ನದಂತಲ್ಲ, ಬಹುತೇಕ ಎಲ್ಲರದ್ದು ಕೂಡ ಇದೇ ಕತೆ. ಇಪ್ಪತ್ತೊಂದನೆಯ ವಯಸ್ಸಿಗೆ ನಾನು ಪದವಿಯೊಂದಿಗೆ ದೆಹಲಿಗೆ ಬಂದಾಗ ಜೊತೆಗಿದ್ದ ಹಿರಿಯ ಸಹೋದ್ಯೋಗಿಗಳು ನನ್ನನ್ನು “ಬಚ್ಚಾ” ಎಂದು ಕರೆಯುತ್ತಿದ್ದರೆ, ಅದು ಪೂರ್ಣ ಸತ್ಯವೇನಲ್ಲ ಎಂಬುದನ್ನು ನಾನು ಅರಿತಿದ್ದೆ. ಏಕೆಂದರೆ ಈ ಹಾದಿಯಲ್ಲಿ ನಡೆಯುತ್ತಿದ್ದ ನಾನು ಮೊದಲಿಗನೂ ಆಗಿರಲಿಲ್ಲ, ಕೊನೆಯವನೂ ಆಗುವ ಸಾಧ್ಯತೆಗಳಿರಲಿಲ್ಲ. ನಾನು ಓದುತ್ತಿದ್ದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್.ಐ.ಟಿ.ಕೆ) ವಿದ್ಯಾಸಂಸ್ಥೆಯಲ್ಲಿ ಆಗಲೇ ದೊಡ್ಡ ಸಂಖ್ಯೆಯ ದೇಶ-ವಿದೇಶಗಳ ವಿವಿಧ ಮೂಲೆಗಳಿಂದ ಬಂದ ವಿದ್ಯಾರ್ಥಿಗಳು ನನ್ನ ಸಹಪಾಠಿಗಳಾಗಿ ಜೊತೆಗಿದ್ದರು. ಹದಿನೇಳನೆಯ ವಯಸ್ಸಿಗೆ ತಮ್ಮೂರು, ಕುಟುಂಬ, ಗೆಳೆಯರ ಬಳಗ… ಹೀಗೆ ಎಲ್ಲವನ್ನೂ ತೊರೆದು ಗುಣಮಟ್ಟದ ಉನ್ನತ ಶಿಕ್ಷಣಕ್ಕಾಗಿ ನಮ್ಮ ಸುರತ್ಕಲ್ ವರೆಗೆ ಬಂದ ಪ್ರತಿಭಾವಂತ ಮತ್ತು ಉತ್ಸಾಹಿ ವಿದ್ಯಾರ್ಥಿಗಳ ಗುಂಪಾಗಿತ್ತದು. ಅವರೆಲ್ಲರಿಗೆ ಹೋಲಿಸಿದರೆ ನಾನು ಊರು ಬಿಟ್ಟು ಬದುಕು ಕಟ್ಟಿಕೊಳ್ಳಲು ಹೊರಟಿದ್ದು ತಡವೇ ಆಗಿತ್ತು. 

ಸಾಸ್ವೆಹಳ್ಳಿ ಸತೀಶ್ ತಂಡದವರ “ಎಸೂರು ಕೊಟ್ಟರೂ ಈಸೂರು ಬಿಡೆವು” ರಂಗಪ್ರಯೋಗ ದೆಹಲಿಯಲ್ಲಿ

ಆದರೆ ತಮ್ಮ ಬೇರುಗಳನ್ನು ಬಿಟ್ಟು ಬಂದ ಈ ಮಂದಿಯ ತಲ್ಲಣಗಳು ಏನೆಂಬುದು ಕಾಲೇಜು ದಿನಗಳಲ್ಲೇ ನನಗೆ ಒಂದಿಷ್ಟು ಮಟ್ಟಿಗೆ ಅರ್ಥವಾಗತೊಡಗಿದ್ದವು. ಸೆಮಿಸ್ಟರ್ ಮುಗಿದಾಕ್ಷಣ ರಜಾದಿನಗಳೆಂದು ಗಂಟುಮೂಟೆ ಕಟ್ಟಿಕೊಂಡು ಊರಿಗೆ ಮರಳುವ ಉತ್ಸಾಹ, ಇರುವ ಅಲ್ಪ ಸಮಯದಲ್ಲೇ ಕರ್ನಾಟಕ ಕರಾವಳಿಯ ಉದ್ದಗಲ ಅಳೆಯುವ ತವಕ, ಎಲ್ಲವೂ ಇರುವ ಹೊರತಾಗಿಯೂ ಥಟ್ಟನೆ ಬಂದೆರಗುತ್ತಿದ್ದ ತಮ್ಮವರ ನೆನಪುಗಳು, ತಲೆಯ ಮೇಲಿನ ತೂಗುಕತ್ತಿಯಂತಿದ್ದ ಪ್ರವೇಶ ಪರೀಕ್ಷೆಗಳು-ಸಂದರ್ಶನ-ಉದ್ಯೋಗ ಗಿಟ್ಟಿಸುವಿಕೆಯ ಜವಾಬ್ದಾರಿಗಳು… ಹೀಗೆ ಎಲ್ಲವನ್ನೂ ಸುತ್ತಲಿದ್ದ ಈ ಗೆಳೆಯರ ಬಳಗದಲ್ಲಿ ನನ್ನಂತಹ ಸ್ಥಳೀಯರು ನೋಡಬಹುದಿತ್ತು. ಮುಂದಿನ ದಿನಗಳು ನಮ್ಮ ಪಾಲಿಗೂ ಹೀಗಿರಲಿವೆ ಎಂಬ ಕಲ್ಪನೆ ಮಾತ್ರ ಆ ದಿನಗಳಲ್ಲಿ ಇರಲೇ ಇಲ್ಲ. ಅದು ಬೇರೆ ಮಾತು. ಹೆಚ್ಚೆಂದರೆ ನಾವೆಲ್ಲ ಬೆಂಗಳೂರಿನವರೆಗೆ ಹೋಗಬಹುದು ಎಂಬ ಆ ದಿನಗಳ ಲೆಕ್ಕಾಚಾರದ ಲಾಜಿಕ್ಕೇ ನನಗೀಗ ಅರ್ಥವಾಗದ ಸೋಜಿಗ.

ಓದು, ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗ… ಕಾರಣಗಳು ಅದ್ಯಾವುದೇ ಆಗಿರಲಿ. ಆದರೆ ಹೀಗೆ ಏಕಾಏಕಿ ಹೊಸದೊಂದು ಊರಿನಲ್ಲಿ ಬದುಕು ಕಟ್ಟಿಕೊಳ್ಳುವ ಸವಾಲುಗಳು ಹುಟ್ಟಿಸುವ ಗಾಬರಿ-ಗೊಂದಲಗಳು ಕಮ್ಮಿಯೇನಲ್ಲ. ಕರ್ನಾಟಕದಿಂದ ದೂರದ ದಿಲ್ಲಿಗೆ ಬಂದ ನಾನು ಇನ್ನು ಕನ್ನಡದ ಕಂಪು ಕಳೆದೇಹೋಯಿತೆಂಬ ಹತಾಶೆಯಲ್ಲಿದ್ದರೆ, ದಿಲ್ಲಿಯಲ್ಲಿದ್ದ ಕೆಲ ಯುವ ಕನ್ನಡಿಗರು ಒಗ್ಗೂಡಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ಕಂಡು ಎಲ್ಲಿಲ್ಲದ ಹುಮ್ಮಸ್ಸು ಬಂದಿತ್ತು. ಮಹಾನಗರಗಳಲ್ಲಿ ಹೀಗೆ ಆಯಾ ಪ್ರದೇಶಗಳಿಂದ ಬಂದವರು, ಸಮಾನ ಮನಸ್ಕರೆಲ್ಲ ಸೇರಿಕೊಂಡು ಏನಾದರೊಂದು ಅರ್ಥಪೂರ್ಣ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಮಹಾನಗರಕ್ಕೆ ಹೊಸದಾಗಿ ಬರುವವರಿಗೆ ಒಂದು ಭರವಸೆ ಸಿಕ್ಕಿದಂತಾಗುತ್ತದೆ. ಈ ಹೊಸ ಪ್ರದೇಶದಲ್ಲಿ ಸೊನ್ನೆಯಿಂದ ಬದುಕು ಕಟ್ಟಿಕೊಳ್ಳುವುದು ನಾವಂದುಕೊಂಡಷ್ಟು ಕಷ್ಟವಾಗಲಿಕ್ಕಿಲ್ಲ ಎಂಬ ನಿರಾಳತೆ ಅದು. ನಿಸ್ಸಂದೇಹವಾಗಿ ಇದೂ ಒಂದು ಬಗೆಯ sense of belonging!  

ಸೃಜನಾ ಸಾಹಿತ್ಯ ಬಳಗ, ಲೇಖಕರೊಂದಿಗೆ ಸಂವಾದ, ಮುಂಬೈ

ಇನ್ನು ನನ್ನ ಮಟ್ಟಿಗೆ ಊರು ಬಿಟ್ಟಾಕ್ಷಣ ನೆಲ ಮತ್ತು ಭಾಷೆಯ ನಂಟೇನೂ ಅಷ್ಟಾಗಿ ಬದಲಾಗಲಿಲ್ಲ. ಬದಲಾಗಿ ಅದೃಷ್ಟವಶಾತ್ ಹೆಚ್ಚೇ ಆಯಿತು. ನಾನಿರುವ ಪ್ರದೇಶಗಳಿಂದಲೇ ಕನ್ನಡದ ಹಲವು ಪತ್ರಿಕೆಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದೆ. ಒಂದೆರಡು ಪುಸ್ತಕಗಳೂ ಬಂದವು. ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಕೆಲವು ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾಯಿತು. “ನೀವ್ಯಾಕೆ ಹಿಂದಿ ಅಥವಾ ಇಂಗ್ಲಿಷಿನಲ್ಲಿ ಬರೆಯುವುದಿಲ್ಲ? ನಿಮ್ಮ ಕನ್ನಡದ ಬರಹಗಳು ನಮಗೆ ಓದಲಿಕ್ಕಾಗುವುದಿಲ್ಲವಲ್ಲ!”, ಎಂದು ನನ್ನ ಉತ್ತರ ಭಾರತದ ಗೆಳೆಯರು ಕೇಳುವುದುಂಟು. ಆದರೆ ವರ್ಷಗಳು ಕಳೆದಂತೆ ಕನ್ನಡ ನನ್ನ ಭಾವಾಭಿವ್ಯಕ್ತಿಯ ಭಾಷೆ ಎಂಬ ಅರಿವು ಅವರಿಗಾಗಿದೆ. ಹೀಗೆ ಹೇಳಿಕೊಳ್ಳಲು ಹೊರನಾಡ ಕನ್ನಡಿಗ ಎಂಬ ಕ್ಲೀಷೆಯ ಹಣೆಪಟ್ಟಿಯೊಂದಿದ್ದರೂ ನನ್ನ ಮತ್ತು ಕನ್ನಡದ ನಂಟು ಇಂದಿಗೂ ನಿತ್ಯ ನಿರಂತರ.

ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ಹೊರನಾಡ ಕನ್ನಡಿಗರನ್ನೂ ಸೇರಿದಂತೆ ಎಲ್ಲರನ್ನು ಪರಿಣಾಮಕಾರಿಯಾಗಿ ಬೆಸೆದಿವೆ. ಹೀಗಾಗಿ ಹೊರನಾಡಿನಲ್ಲಿರುವ ಕನ್ನಡಿಗರಿಗೆ ತಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಯಾವ್ಯಾವ ಪ್ರದೇಶಗಳಲ್ಲಿ ಏನೇನು ನಡೆಯುತ್ತಿವೆ ಎಂಬ ಮಾಹಿತಿಯೂ ತಕ್ಕಮಟ್ಟಿಗಿರುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು-ಮೈಸೂರಿನಂತಹ ನಗರಗಳಲ್ಲಿ ಕಮ್ಮಟ, ತರಬೇತಿ, ವಿಚಾರ ಸಂಕಿರಣ, ಗೋಷ್ಠಿಗಳನ್ನು ನಡೆಸುವ ಆಯೋಜಕರಿಗೆ “ಹೊರನಾಡ ಕನ್ನಡಿಗರೂ ನಿಮ್ಮ ಚಟುವಟಿಕೆಗಳಲ್ಲಿ ಒಳಗೊಳ್ಳುವಂತಹ ಅವಕಾಶ-ವ್ಯವಸ್ಥೆಗಳನ್ನು ನೀವು ಸೃಷ್ಟಿಸಬೇಕು” ಎಂದು ನಾನು ಸಾಮಾನ್ಯವಾಗಿ ಹೇಳುತ್ತಿರುತ್ತೇನೆ. ಸಂವಹನ ಮತ್ತು ಸಂಪರ್ಕದ ದಾರಿಗಳು ಗಣನೀಯವಾಗಿ ವಿಕಸಿತಗೊಂಡಿರುವ ಇಂದಿನ ದಿನಗಳಲ್ಲಿ ಇದು ಬಹಳ ದೊಡ್ಡ ಸವಾಲೇನಲ್ಲ. ಇಂತಹ ಎಲ್ಲರನ್ನೂ ಒಳಗೊಳ್ಳುವಿಕೆಯ ನಡೆಯು ಹೊರನಾಡ ಕನ್ನಡಿಗರಲ್ಲಿ ಸಾಮಾನ್ಯವಾಗಿ ಕಂಡುಬರುವ FOMO (Fear of Missing Out) ಭಾವವನ್ನು ತಕ್ಕಮಟ್ಟಿಗೆ ನಿವಾರಿಸಬಹುದೇನೋ! 

ನಾನು ಕಳೆದ ಎರಡೂವರೆ ದಶಕಗಳಲ್ಲಿ ಗಮನಿಸಿರುವಂತೆ ಹೊರನಾಡ ಕನ್ನಡಿಗರು ತಮ್ಮದೇ ಆದ ಬಗೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ, ವೆಬ್ ಪುರವಣಿಗಳಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಬರೆಯುವ ಹೊರನಾಡ ಕನ್ನಡಿಗರ ಲೇಖನಗಳನ್ನು ಕಾದು ಓದುವವರಿದ್ದಾರೆ. ಈ ಬಗೆಯ ವಿದ್ವತ್ಪೂರ್ಣ ಕಂಟೆಂಟುಗಳನ್ನು ಬಯಸುವ ಖಾಯಂ ಓದುಗರ ಸಂಖ್ಯೆ ದೊಡ್ಡದಿದೆ. ಇವುಗಳಲ್ಲದೆ ಅಡುಗೆ, ಜೀವನಶೈಲಿ, ಪ್ರವಾಸದಂತಹ ವಿಚಾರಗಳ ಬಗ್ಗೆ ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರು ನಡೆಸಿಕೊಡುವ ಯೂ-ಟ್ಯೂಬ್ ಚಾನೆಲ್ಲುಗಳು, ಪಾಡ್-ಕಾಸ್ಟ್ ಪ್ರಯೋಗಗಳು ಒಳ್ಳೆಯ ಜನಪ್ರಿಯತೆಯನ್ನೂ ಗಳಿಸಿಕೊಂಡಿವೆ. ಹೀಗಿರುವಾಗ ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸುತ್ತಿರುವ ಸರಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಇಂತಹ ಹೊರನಾಡ ಕನ್ನಡಿಗರನ್ನು ಗುರುತಿಸುವುದರ ಜೊತೆಗೆ, ಇವರೆಲ್ಲರನ್ನು ಮುಖ್ಯವಾಹಿನಿಯ ಧಾರೆಯೊಂದಿಗೆ ಸೇರಿಸಿಕೊಳ್ಳುವುದು ಇಂದಿನ ಅವಶ್ಯಕತೆಗಳಲ್ಲೊಂದು.

ದಿಲ್ಲಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ಅಪರೂಪಕ್ಕೊಮ್ಮೆ ಕನ್ನಡ ಚಿತ್ರವೊಂದು ತೆರೆ ಕಂಡರೆ ಕೆಲವು ಕನ್ನಡಿಗರಾದರೂ ಬಂದು ಸೇರುತ್ತಾರೆ. ನಮ್ಮ ಸ್ಥಳೀಯ ತಂಡಗಳ ಯಕ್ಷಗಾನ, ರಂಗಪ್ರಯೋಗ, ಜಾನಪದ ನೃತ್ಯಗಳಂಥಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಷ್ಟ್ರರಾಜಧಾನಿಯಲ್ಲಿರುವ ಕನ್ನಡಿಗರು ಯಶಸ್ವಿ ಗೊಳಿಸಿಯೇ ಸಿದ್ಧ. ಹೀಗೆ ಭಾರತದ ವಿವಿಧ ಮೂಲೆಗಳನ್ನು ಸೇರಿದಂತೆ ಹಲವು ದೇಶಗಳಲ್ಲಿ ಸಕ್ರಿಯವಾಗಿರುವ ಕನ್ನಡದ ಸಂಸ್ಥೆಗಳನ್ನು, ಉತ್ಸಾಹಿ ಕನ್ನಡಿಗರನ್ನು ನೋಡಿ ಖುಷಿಪಟ್ಟವನು ನಾನು. ಇವರೆಲ್ಲ ತಾವು ಸ್ವತಃ ಮಾತಾಡುವುದರ ಬದಲಾಗಿ ತಮ್ಮ ಕೆಲಸಗಳೇ ಸದ್ದು ಮಾಡಬೇಕು ಎಂಬ ಸದುದ್ದೇಶವಿಟ್ಟುಕೊಂಡು ಎಲೆಮರೆಕಾಯಿಗಳಂತೆ ದುಡಿಯುತ್ತಿರುವವರು. ಕನ್ನಡದ ಬೀಜಗಳನ್ನು ದೂರದ ದೇಶಗಳಲ್ಲೂ ಬಿತ್ತಿ ಭಾಷೆಯ ಸೊಗಡನ್ನು ತಮ್ಮ ಮುಂದಿನ ಪೀಳಿಗೆಗಳಿಗೂ ಯಶಸ್ವಿಯಾಗಿ ದಾಟಿಸುತ್ತಿರುವವರು.

ಇದು ಹೊರನಾಡ ಕನ್ನಡಿಗರೆಂಬ ಅನಾಮಿಕ ಕನ್ನಡದ ಕಟ್ಟಾಳುಗಳ ಕತೆ.

ಪ್ರಸಾದ್‌ ನಾಯ್ಕ್‌, ದೆಹಲಿ 

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- ಕರ್ನಾಟಕ  ಎಂದರೇನು?

More articles

Latest article