Sunday, September 8, 2024

ಕನ್ನಡ- ಹೋರಾಟ-ಜೈಲು… ಒಂದು ವಿವೇಚನೆ

Most read

ನೀವು ಒಬ್ಬ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ ಅದು ಅವನ ತಲೆಗೆ ಹೋಗುತ್ತದೆ. ನೀವು ಅವನ ಭಾಷೆಯಲ್ಲಿಯೇ ಮಾತನಾಡಿದರೆ ಅದು ಹೃದಯಕ್ಕೆ ಹೋಗುತ್ತದೆ ಎಂಬ ನೆಲ್ಸನ್‌ ಮಂಡೇಲಾ ಅವರ ಮಾತುಗಳನ್ನು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಪರಭಾಷಿಕರು ಅರ್ಥಮಾಡಿಕೊಳ್ಳಬೇಕಿದೆ – ವೀರಕಪುತ್ರ ಶ್ರೀನಿವಾಸ್, ವೀರಲೋಕ ಬುಕ್ಸ್

ಭಾಷೆ ಒಂದು ಸಂಸ್ಕೃತಿಯ ಮಾರ್ಗಸೂಚಿಯಾಗಿದೆ ಎಂಬ ಮಾತು ಭಾಷೆ ಮತ್ತು ಸಂಸ್ಕೃತಿಯ ನಡುವಿನ ಆಂತರಿಕ ಸಂಪರ್ಕವನ್ನು ಒತ್ತಿ ಹೇಳುತ್ತದೆ. ಭಾಷೆಯು ಸಮುದಾಯದ ಮೌಲ್ಯಗಳು, ನಂಬಿಕೆಗಳು, ಸಂಬಂಧಗಳು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ರಕ್ಷಿಸುತ್ತದೆ. ಆದರೆ ಅಂತಹ ಭಾಷೆಯೇ ಕಷ್ಟದಲ್ಲಿ ಸಿಕ್ಕಿಕೊಂಡಾಗ ಅದನ್ನು ರಕ್ಷಿಸುವುದು ಹೇಗೆ? ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಕಾರಣಕ್ಕಾಗಿ ನಡೆದ ಗೋಕಾಕ್‌ ಚಳವಳಿಯ ನಂತರ ಸರ್ಕಾರ ಅದನ್ನು ಮಾನ್ಯ ಮಾಡಿದ್ದು ನಿಜವೇ ತಾನೇ; ಹಾಗಾದರೆ ಈಗಲೂ ಕನ್ನಡಕ್ಕಾಗಿ, ನಾಮಫಲಕಗಳಿಗಾಗಿ ನಾವೇಕೆ ಹೋರಾಟ ಮಾಡಬೇಕು. ಅಷ್ಟಕ್ಕೂ ಇವತ್ತು ಹೋರಾಟಗಳಿಗೆ ಬೆಲೆ ಎಲ್ಲಿದೆ? ನನಗೆ ಗೊತ್ತಿರುವ ಹಾಗೆ ಇತ್ತೀಚಿನ ಬಹುತೇಕ ಹೋರಾಟಗಳು ತಾರ್ಕಿಕ ಅಂತ್ಯವನ್ನು ಕಾಣುತ್ತಿಲ್ಲ. ಅದರಲ್ಲೂ, ಸರ್ಕಾರಗಳು ಹೋರಾಟಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಮೀಸಲಾಗಿಸಿದ ಘಳಿಗೆಯಿಂದ ಹೋರಾಟಗಳು ಪರಿಣಾಮಕಾರಿಯಾಗಿ ಉಳಿದಿಲ್ಲ. 

ಆದರೆ ಇಂತಹ ಸ್ಥಿತಿಯಲ್ಲೂ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ನೇತೃತ್ವದಲ್ಲಿ ನಡೆದ ನಾಮಫಲಕ ಚಳವಳಿ ನನ್ನ ತಲೆಮಾರಿನವರು ಕಂಡಂತಹ ಅತ್ಯಂತ ಯಶಸ್ವಿ ಚಳವಳಿ ಎಂಬುದು ನನ್ನ ನಂಬಿಕೆ. ಈ ಹೋರಾಟದ ತೀವ್ರತೆ ಎಷ್ಟಿತ್ತೆಂದರೆ ಅಂತರರಾಷ್ಟ್ರೀಯ ಮಟ್ಟದ ಬಿಬಿಸಿಯಲ್ಲೂ ಈ ಹೋರಾಟದ ಕುರಿತು ಸುದ್ದಿ ಪ್ರಸಾರವಾಯಿತು. ಆ ಹೋರಾಟದ ಫಲವಾಗಿ ಸಾವಿರಾರು ಅಂಗಡಿ ಮುಂಗಟ್ಟುಗಳಲ್ಲಿ ಆಂಗ್ಲ ನಾಮಫಲಕಗಳ ಜಾಗದಲ್ಲಿ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ. ನಮ್ಮ ಸರ್ಕಾರವಂತೂ ಅತ್ಯಂತ ತ್ವರಿತಗತಿಯಲ್ಲಿ ಈ ಹೋರಾಟಕ್ಕೆ ಸ್ಪಂದಿಸಿತು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕೆಂಬ ಸುಗ್ರಿವಾಜ್ಞೆಯನ್ನೇ ಹೊರಡಿಸುವಂತಹ ದಿಟ್ಟ ನಿಲುವನ್ನು ಕೈಗೊಂಡಿತು. 

ಅದನ್ನು ಮೆಚ್ಚುತ್ತಲೇ ನಾನು ಕೇಳಬೇಕೆಂದುಕೊಂಡಿರುವ ಪ್ರಶ್ನೆ; ನಮ್ಮ ಸರ್ಕಾರಗಳಿಗೆ ಇಂತಹದ್ದೊಂದು ನಿರ್ಧಾರಕ್ಕೆ ಇಷ್ಟು ದಿನ ಬೇಕಾಗಿತ್ತೇ? ಗೋಕಾಕ್‌ ಚಳವಳಿಯ ಆಶಯವೇ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕಾಗಿತ್ತು ಎಂಬುದಲ್ಲವೇ? ಅಂದು ಆ ಆಶಯವನ್ನು ಮಾನ್ಯ ಮಾಡಿದ ಸರ್ಕಾರಗಳು ನಂತರ ಕೈಚೆಲ್ಲಿ ಕುಳಿತದ್ದು ಏಕೆ? ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಎಂಬಂತಾಗಿದ್ದೇಕೆ ನಮ್ಮ ಸರ್ಕಾರಗಳ ನೀತಿ. ಹೆಲ್ಮೆಟ್‌ ಕಾಣದಿದ್ದರೆ ತಡೆದು ನಿಲ್ಲಿಸುವ ಪೊಲೀಸ್‌,  ಪರವಾನಗಿ ಪಡೆಯದಿದ್ದರೆ ಅಂಗಡಿಯನ್ನೇ ಮುಚ್ಚಿಸುವ ಬಿಬಿಎಂಪಿಯು ಬೆಂಗಳೂರಿನಲ್ಲಿ ಶೇ.60 ರಷ್ಟು ನಾಮಫಲಕ ಕಾಣದೇ ಹೋದಾಗ ಕುರುಡಾಗಿದ್ದು ಹೇಗೆ? ಮೌನವಹಿಸಿದ್ದು ಏಕೆ?

ಅವರ ಆ ದಿವ್ಯ ನಿರ್ಲಕ್ಷ್ಯದ ಕಾರಣಕ್ಕೆ ಇಂದು ನಾಮಫಲಕ ಹೋರಾಟ ಇಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದು ಕನ್ನಡಿಗರ ಆಶಯವಾಗಿದ್ದರೂ, ಸರ್ಕಾರದ ಕಾನೂನಾಗಿದ್ದರೂ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟಿಸಬೇಕಾಯಿತು. ಇದಕ್ಕಾಗಿ ಅವರಿಗೆ ಸಂದಿದ್ದೇನು? ಬೇರೇನೂ ಅಲ್ಲ ಜೈಲುಭಾಗ್ಯ! ಹೋರಾಟಗಾರರನ್ನೆಲ್ಲಾ ಬಂಧಿಸಿ ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಲಾಯಿತು. ಆ ಹದಿನೈದು ದಿನಗಳಕಾಲ, ಹೋರಾಟಗಾರರು ಎನಿಸಿಕೊಂಡವರು ಖೈದಿಗಳಾಗಬೇಕಾಗಿದ್ದು ವಸ್ತುಸ್ಥಿತಿಗೆ ಹಿಡಿದ ಕನ್ನಡಿ.

ಜೈಲಿನಲ್ಲಿ ಹೋರಾಟಗಾರರಿಗೆ ಸರಿಯಾದ ಊಟವಿಲ್ಲ, ನಿದ್ದೆಯಿಲ್ಲ, ಶೌಚಾಲಯಗಳಿಗೆ ಬಾಗಿಲುಗಳಿಲ್ಲ, ಕುಟುಂಬದವರು, ಆಪ್ತರಿಗೆ ಭೇಟಿಯಾಗುವ ಅವಕಾಶವಿಲ್ಲ, ಇದ್ದರೂ ಹತ್ತಾರು ನಿರ್ಬಂಧಗಳು. ಜೈಲಿನಲ್ಲಿದ್ದುಕೊಂಡೇ ಜಾಮೀನು ಪ್ರಯತ್ನಗಳನ್ನು ಮಾಡಬೇಕಿತ್ತು. ಕೋರ್ಟಿನ ಖರ್ಚುಗಳಿಗೆ ಹಣ ಹೊಂದಿಸಬೇಕಿತ್ತು. ಹೋರಾಟಗಾರರ ಕುಟುಂಬದವರಂತೂ ಗಣ್ಯರೆನೆಸಿಕೊಂಡವರ ಮನೆ ಬಾಗಿಲಿಗೆ ಅಲೆದಲೆದು ಬೇಸತ್ತು ಹೋಗಿದ್ದರು. ಬೇರೆ ದಾರಿ ಇಲ್ಲದೆ ಇರುವ ಒಂದಷ್ಟು ಒಡವೆಯನ್ನು ಅಡವಿಟ್ಟೋ ಅಥವಾ ಸಾಲವಾಗಿ ಹಣಪಡೆದೋ ಜಾಮೀನಿಗೆ ಪ್ರಯತ್ನಿಸುತ್ತಿದ್ದರು. ಆದರೂ ಅದು ಸಿಗುವ ಖಾತ್ರಿ ಇರಲಿಲ್ಲ. ಅತ್ತ ಜೈಲಿನಲ್ಲಿರುವ ಹೋರಾಟಗಾರರು ಜಾಮೀನು ಇಂದಾಗಬಹುದು, ನಾಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿಯೇ ದಿನದೂಡಬೇಕಿತ್ತು. ಅವರಿಗೆ ಇಷ್ಟೆಲ್ಲಾ ನೋವು, ಹಿಂಸೆ ಯಾಕಾಗಿ?  ಅವರೇನು ಕೊಲೆಪಾತಕರೇ, ಹಗರಣಗಳ ಸೃಷ್ಠಿಕರ್ತರೇ… ಅಲ್ಲವಲ್ಲ! ನಮ್ಮ ನಿಮ್ಮಂತೆಯೇ  ಮುಂದಿನ ತಲೆಮಾರಿಗೆ ಕನ್ನಡ ಉಳಿಯಬೇಕು ಎಂದು ಹಂಬಲಿಸಿದ ನಮ್ಮದೇ ಅಣ್ಣತಮ್ಮಂದಿರು ಅವರು. 

ಹೋರಾಟದ ಸಂದರ್ಭದಲ್ಲಿ ಒಂದಷ್ಟು ನಾಮಫಲಕಗಳನ್ನು ಒಡೆದಿರುವುದು ತಪ್ಪು. ಅದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಕರ್ನಾಟಕದಲ್ಲಿ ವ್ಯಾಪಾರ ಶುರುಮಾಡುವವನಿಗೆ ಇಲ್ಲಿನ ಭಾಷೆ ಬೇಡವಾಗಿದ್ದು ಏಕೆ? ನಾಮಫಲಕದಲ್ಲಿ ಕನ್ನಡವಿರದಿದ್ದರೂ ನಡೆಯುತ್ತೆ ಎಂಬ ಹುಂಬತನ ಅವನಿಗೆ ಬಂದಿದ್ದು ಹೇಗೆ? ಕರ್ನಾಟಕದಲ್ಲಿ ಕನ್ನಡವಿಲ್ಲದಿದ್ದರೂ ಬದುಕಬಹುದು ಎಂಬ ಮನಸ್ಥಿತಿ ಸಮರ್ಥನೀಯವೇ? ಇವುಗಳನ್ನು ಸಮರ್ಥಿಸಿಕೊಳ್ಳುವುದಾದರೆ, ಕನ್ನಡಕ್ಕೆ ಮಾನ್ಯತೆ ನೀಡದ ನಾಮಫಲಕಗಳನ್ನು ಒಡೆದು ಹಾಕಿದ್ದನ್ನೂ ಸಮರ್ಥಿಸಿಕೊಳ್ಳಬಹುದು. ಆದರೆ ಇಲ್ಲಿ ಈ ಸಂಗತಿ ಚರ್ಚೆಯಾಗುತ್ತಿಲ್ಲ. ಬದಲಾಗಿ ನಮಗಾಗಿ ಹೋರಾಡಿದ ನಮ್ಮವರನ್ನೇ ಹತ್ತಿಕ್ಕಲಾಗುತ್ತಿದೆ. ಕನ್ನಡಕ್ಕಾಗಿ ಮನೆ, ಮಡದಿ, ಮಕ್ಕಳು, ಬದುಕನ್ನು ಬಿಟ್ಟು ಹೋರಾಡಿದ ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಕನ್ನಡವನ್ನು ದಿಕ್ಕರಿಸಿದವರ ಪರವಾಗಿ ನಿಂತಿದ್ದೇವೆ. ಇದರಲ್ಲಿ ನಮ್ಮ ತಪ್ಪೇನಿಲ್ಲ; ಕಾನೂನು ಕೈಗೆತ್ತಿಕೊಂಡವರನ್ನು ಬಂಧಿಸಿದ್ದೇವೆ ಎಂಬುದು ಸರ್ಕಾರದ ನಿಲುವಾದರೆ, ಶೇ.60ರಷ್ಟು ಕನ್ನಡವಿರಬೇಕು ಎಂಬ ನಾಮಫಲಕದ ಕಾನೂನನ್ನು ಉಲ್ಲಂಘಿಸಿದವರೂ ಅಪರಾಧಿಗಳೇ ಅಲ್ಲವೇ? ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಲ್ಲವೇ…

ನೀವು ಒಬ್ಬ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ ಅದು ಅವನ ತಲೆಗೆ ಹೋಗುತ್ತದೆ. ನೀವು ಅವನ ಭಾಷೆಯಲ್ಲಿಯೇ ಮಾತನಾಡಿದರೆ ಅದು ಹೃದಯಕ್ಕೆ ಹೋಗುತ್ತದೆ ಎಂಬ ನೆಲ್ಸನ್‌ ಮಂಡೇಲಾ ಅವರ ಮಾತುಗಳನ್ನು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಪರಭಾಷಿಕರು ಅರ್ಥಮಾಡಿಕೊಳ್ಳಬೇಕಿದೆ. ಕನ್ನಡ ನಾಮಫಲಕಗಳನ್ನು ಹಾಕಿ ಎಂದು ಒತ್ತಾಯಿಸುವುದರ ಬದಲು ಸ್ವಯಂಪ್ರೇರಣೆಯಿಂದ ಕನ್ನಡತನವನ್ನು ಮೈಗೂಡಿಸಿಕೊಳ್ಳಲಿ. ಆಗ ಈ ಪರಸ್ಪರ ಭಾಷಾ ವೈಷಮ್ಯ ಮರೆತು ನಮ್ಮ ನಾಡಿಗೆ ಬಂದ ಪರಭಾಷಿಕರನ್ನು ಅತಿಥಿಗಳಂತೆ ನಾವೂ ಗೌರವಿಸಬಹುದು. ಅದು ಬಿಟ್ಟು ನಮ್ಮನ್ನೇ ಧಿಕ್ಕರಿಸುವ ಉದ್ಧಟತನ ತೋರಿದರೆ ಇಂತಹ ಕಾನೂನು ಕೈಗೆತ್ತಿಕೊಳ್ಳುವ ಹೋರಾಟಗಳು ಈ ನೆಲದಲ್ಲಿ ನಿಲ್ಲುವುದೇ ಇಲ್ಲ. 

ಹಾಗಾಗದಿರಲಿ ಎಂಬುದು ಆಶಯ.

ವೀರಕಪುತ್ರ ಶ್ರೀನಿವಾಸ್

ವೀರಲೋಕ ಬುಕ್ಸ್

More articles

Latest article