ಕನ್ನಡ ಸಾಹಿತ್ಯ ಪರಿಷತ್ ನಿದ್ರಾವಸ್ಥೆಯಲ್ಲಿದೆ:ವಾಟಾಳ್ ನಾಗರಾಜ್

Most read

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ನಿದ್ರಾವಸ್ಥೆಯಲ್ಲಿದೆ ಎಂದು ಕನ್ನಡಪರ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷ ಮೂರು ದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ತಿಂದು ತೇಗುತ್ತಾರೆ. ಮೂರು ದಿನ ಬಗೆ ಬಗೆಯ ಭಕ್ಷ್ಯ ಭೋಜನದ ಊಟ ಮಾಡುತ್ತಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡುತ್ತಾರೆ. ನಾಲ್ಕನೇ ದಿನ ಸಮ್ಮೇಳನಾಧ್ಯಕ್ಷರನ್ನು ಕೇಳುವವರು ಯಾರು ಇರುವುದಿಲ್ಲ ಎಂದರು.


ಈ ವರ್ಷದ ಸಾಹಿತ್ಯ ಸಮ್ಮೇಳನ ಮುಗಿದ ನಂತರ ಮುಂದಿನ ವರ್ಷದ ಸಾಹಿತ್ಯ ಸಮ್ಮೇಳನದವರೆಗೂ ಕನ್ನಡ ಸಾಹಿತ್ಯ ಪರಿಷತ್ ಕುಂಭಕರ್ಣನಂತೆ ನಿದ್ರಾವಸ್ಥೆಯಲ್ಲಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸರ್ಕಾರದ ಗುಲಾಮನಂತಾಗಿದೆ ಎಂದೂ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಅವರು ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವನ್ನು ಮುಂದುವರೆಸಬೇಕು ಎಂದು ಮೈಸೂರಿನ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಂಡೀಪುರದಲ್ಲಿ ರಾತ್ರಿ ವೇಳೆ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬಾರದು. ಇದರಿಂದ ಪ್ರಾಣಿಪಕ್ಷಿಗಳಿಗೆ ತೊಂದರೆಯಾಗುತ್ತದೆ. ರಾತ್ರಿ ವೇಳೆ ರಸ್ತೆಗಳನ್ನು ಸಹ ಕಾಡು ಪ್ರದೇಶ ಎಂದು ಭಾವಿಸಿ ಪ್ರಾಣಿಗಳು ವಿಶ್ರಮಿಸುತ್ತವೆ. ಚಾಮರಾಜನಗರ ಜಿಲ್ಲೆ ಅಪಾರ ವನ್ಯಜೀವಿ ಸಂಪತ್ತು ಹೊಂದಿದೆ. ವಿವಿಧ ಬಗೆಯ ಅತಿ ಹೆಚ್ಚು ಪ್ರಾಣಿ ಸಂಕುಲವಿದೆ. ರಾತ್ರಿ ಸಂಚಾರ ಆರಂಭದಿಂದ ಪ್ರಾಣಿಗಳ ನೆಮ್ಮದಿ ಹಾಳು ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ತಂಡದಿಂದ ಬೆಂಗಳೂರಿನ ಅರಣ್ಯ ಇಲಾಖೆ ಪ್ರದೇಶದಲ್ಲಿ ಮರಗಳನ್ನು ಕಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ವಾಟಾಳ್, ಸಿನಿಮಾದವರಿಗೆ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಅವಕಾಶ ನೀಡಬಾರದು. ಶೂಟಿಂಗ್ ಹೆಸರಿನಲ್ಲಿ ಮರಗಳನ್ನು ನಾಶ ಮಾಡಿದ್ದಾರೆ. ಅವರ ಮೇಲೆ ಎಫ್ ಐ ಆರ್ ಆದರೆ ಸಾಲದು, ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಎಂದರು.

More articles

Latest article