ಕನ್ನಡ ರಾಜ್ಯೋತ್ಸವ ವಿರೋಧಿಸಿ ಬೆಳಗಾವಿಯಲ್ಲಿ ನವೆಂಬರ್ 1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ MES ಕರಾಳ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ಈ ಪ್ರತಿಭಟನೆಗೆ ಅವಕಾಶ ನೀಡದಂತೆ ಪ್ರತಿಬಂಧಿಸಲು ಆದೇಶಿಸಬೇಕು ಎಂಬ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ MESಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಎಂ.ವಡಗಾಂವ್ನ ಮಲ್ಲಪ್ಪ ಛಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕನ್ನಡ ರಾಜ್ಯೋತ್ಸವಕ್ಕೆ ಸಾಂಸ್ಕೃತಿಕ ಮಹತ್ವವಿದ್ದರೂ, ಮಹಾರಾಷ್ಟ್ರ ಮೂಲದ ಮರಾಠಿ ಪರ ಸಂಘಟನೆಯಾದ ಎಂಇಎಸ್ ಎರಡು ದಶಕಗಳಿಂದ ಬೆಳಗಾವಿಯಲ್ಲಿ ನವೆಂಬರ್ 1ರಂದು ಕರಾಳ ದಿನಾಚರಣೆ ಮಾಡುತ್ತಿದೆ. ಸರ್ಕಾರ ಅನುಮತಿಸದಿದ್ದರೂ ಪ್ರತಿಭಟನೆ ನಡೆಸುವ ಉದ್ಧಟತನವನ್ನು ಎಂಇಎಸ್ ಪ್ರದರ್ಶಿಸುತ್ತಾ ಬಂದಿದೆ. ಈ ವೇಳೆ ಪ್ರಚೋದನೆ ಹೇಳಿಕೆ , ಮಾರಕಾಸ್ತ್ರಗಳನ್ನು ಕೂಡ ಬಳಸಲಾಗುತ್ತದೆ ಆದರೆ ಪೊಲೀಸರು ಕ್ಷುಲ್ಲಕ ಕೇಸ್ ದಾಖಲಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಈ ಪ್ರತಿಭಟನೆಗೆ ಅನುಮತಿ ಕೊಡಬಾರದು ಹಾಗೂ ನಡೆಯದಂತೆ ನೋಡಿಕೊಳ್ಳುವಂತೆ ನೋಟಿಸ್ ಜಾರಿ ಮಾಡಬೇಕು. ರಾಜ್ಯೋತ್ಸವ ನಂತರ ದಾಖಲಾತಿಯನ್ನು ಕೋರ್ಟ್ಗೆ ನೀಡಲಾಗುವುದು ಎಂದು ವಾದಿಸಿದ್ದಾರೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, ಹೈಕೋರ್ಟ್ನ ಸಮನ್ವಯ ಪೀಠವು ಕನ್ನಡ ರಾಜ್ಯೋತ್ಸವನ್ನು ನಿರಾತಂಕವಾಗಿ ನಡೆಸಲು ಸರ್ಕಾರ ಮತ್ತು ಪೊಲೀಸರು ಕ್ರಮಕೈಗೊಳ್ಳಬೇಕು. ಕಾನೂನು ಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಈಗಾಗಲೇ ಅಲ್ಲಿ ಈತರದ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಡಲು ಸಂಪೂರ್ಣ ನಿರಾಕರಿಸಿದ್ದು, ಕೋರ್ಟ್ಗೆ PIL ಸಲ್ಲಿಸುವ ಅಗತ್ಯವೇ ಬರುವುದಿಲ್ಲ ಹಾಗಾಗಿ ಈ ಅರ್ಜಿಯನ್ನು ವಜಾಗೊಳಿಸಲು ಕೋರಿದ್ದಾರೆ.
ವಾದ-ಪ್ರತಿವಾದ ಆಲಿಸಿದ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಹಾಗೂ ಎಂಇಎಸ್ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.