ಇದೇ ವರ್ಷದ ನವೆಂಬರ್ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ದಲ್ಲಿ ಕನ್ನಡದ ʼಕೆರೆಬೇಟೆʼ ಮತ್ತು ʼವೆಂಕ್ಯಾʼ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಜಾಗತಿಕ ಸಿನಿಮಾವನ್ನು ಪ್ರದರ್ಶಿಸುವ IFFI ನಲ್ಲಿ ಚಲನಚಿತ್ರೋತ್ಸವದ ಪ್ರಮುಖ ವಿಭಾಗವಾದ ʼದಿ ಇಂಡಿಯನ್ ಪನೋರಮಾ IFFIʼ ಯ 55 ನೇ ಆವೃತ್ತಿಯಲ್ಲಿ ಪ್ರದರ್ಶಿಸಲು ಭಾರತೀಯ 25 ಕಥಾಚಿತ್ರಗಳು ಮತ್ತು 20 ನಾನ್-ಫೀಚರ್ ಚಲನಚಿತ್ರಗಳನ್ನು ಆಯ್ಕೆ ಮಾಡಿದೆ.
ಒಟ್ಟು ಸಲ್ಲಿಕೆಯಾಗಿದ್ದ 384 ಭಾರತೀಯ ಚಲನಚಿತ್ರಳಲ್ಲಿ ಈ 25 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಅಪ್ಪಟ ಹಳ್ಳಿ ಸೊಗಡಿನ ಚಿತ್ರ ʼಕೆರೆಬೇಟೆʼ. ಈ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯದ್ಯಂತ ಬಿಡುಗಡೆ ಕಂಡಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿಬಂದಿದ್ದ ಈ ಸಿನಿಮಾಕ್ಕೆ ಗುರುರಾಜ್ ಬಿ ನಿರ್ದೇಶನ ಮಾಡಿದ್ದರು. ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸುವ ಈ ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದರು.
ʼಡೊಳ್ಳುʼ ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಹಾಗೂ ಸಾಗರ್ ಪುರಾಣಿಕ್ ಕಾಂಬಿನೇಷನ್‌ನಲ್ಲಿ ʼವೆಂಕ್ಯಾʼ ಚಿತ್ರ ಮೂಡಿಬಂದಿದೆ. ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಸಾಗರ್‌ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್ ಅಭಿನಯಿಸಿದ್ದಾರೆ.
ಆಯ್ಕೆದಾದ ಸಿನಿಮಾಗಳ ಪಟ್ಟಿಯಲ್ಲಿ ಕೆರೆಬೇಟೆ 2ನೇ ಸ್ಥಾನ ಮತ್ತು 3ನೇ ಸ್ಥಾನದಲ್ಲಿ ‘ವೆಂಕ್ಯಾ’ ಚಿತ್ರವಿದೆ. ಭಾರತದ ಜನಪ್ರಿಯ ಸಿನಿಮಾಗಳನ್ನು ಕೂಡ ಆಯ್ಕೆ ಮಾಡಲಾಗಿದೆ. ಮಲಯಾಳಂ, ತಮಿಳು, ಮರಾಠಿ, ಬೆಂಗಾಲಿ, ತೆಲುಗು ಭಾಷೆಯ ಸಿನಿಮಾಗಳು ಪ್ರದರ್ಶನ ಕಾಣಲಿವೆ.
ಇದೀಗ ಪ್ರತಿಷ್ಠಿತ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ʼಕೆರೆಬೇಟೆʼ ಮತ್ತು ʼವೆಂಕ್ಯಾʼ ಸಿನಿಮಾಗಳು ಸ್ಯಾಂಡಲ್‌ವುಡ್‌ಗೆ ಗರಿಮೆ ತಂದಿವೆ.