ಹಿಂದಿ ಹೇರುವ ಮೂಲಕ ಕನ್ನಡ ಭಾಷೆಯ ಕತ್ತು ಹಿಸುಕಲಾಗುತ್ತಿದೆ, ಸಂವಿಧಾನದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ; ಸಿಎಂ ಸಿದ್ದರಾಮಯ್ಯ ಆತಂಕ

Most read

ಮಂಡ್ಯ: ರಾಷ್ಟ್ರ ಭಾಷೆಯ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರುವ ಮೂಲಕ ಕನ್ನಡ ಮುಂತಾದ ದೇಶಭಾಷೆಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ. ಇದನ್ನು ನಾವುಗಳೆಲ್ಲರೂ ಪ್ರತಿಭಟಿಸದೆ ಹೋದರೆ ನಮ್ಮ ಭಾಷೆಗಳು ಗಂಡಾಂತರಕ್ಕೆ ಸಿಲುಕಿಕೊಳ್ಳುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಅವರು ಮಂಡ್ಯದಲ್ಲಿ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಎರಡನೆಯದಾಗಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯದಿಂದ ೪.೫ ಲಕ್ಷ ಕೋಟಿ ರೂ. ಗೂ ಹೆಚ್ಚು ತೆರಿಗೆಯನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಆದರೆ ನಮಗೆ ೫೫-೫೯ ಸಾವಿರ ಕೋಟಿ ರೂ. ಮಾತ್ರ ನಮಗೆ ವಾಪಸ್ಸು ಬರುತ್ತಿದೆ. ಇದರಿಂದ ನಾಡಿನ ಸಮಗ್ರ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ದುಡಿಯುವ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸಿ ಶ್ರೀಮಂತ ಕಾರ್ಪೊರೇಟ್ ಕಂಪೆನಿಗಳ ಮೇಲಿನ ತೆರಿಗೆಯನ್ನು ಇಳಿಸಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲದೆ ಜನರ ಕೊಳ್ಳುವ ಶಕ್ತಿ ಕಡಿಮೆಯಾಯಿತು. ಆದ್ದರಿಂದಲೆ ನಾವು ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮೂರನೆಯದಾಗಿ ಬಹುತ್ವವನ್ನು ಸಾರುವ ನಮ್ಮ ಸಂವಿಧಾನದ ಮೇಲೆ ಕಳೆದ ಕೆಲವು ವರ್ಷಗಳಿಂದ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಈ ಆಕ್ರಮಣದ ವಿರುದ್ಧ ಹೋರಾಡಬೇಕಾದುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಓದು-ಬರಹ ಭಾಷೆ, ಬರವಣಿಗೆ ಎಲ್ಲವೂ ಪರಕೀಯವಾದರೆ ನಮ್ಮ ಮಾತೃಭಾಷೆಗಳಿಗೆ ಅಪಾಯ ತಪ್ಪಿದ್ದಲ್ಲ. ಯಾವುದೇ ಭಾಷೆಯ ಅಳಿವು ಆ ಭಾಷೆಯ ಸಮುದಾಯದ ಅಳಿವೂ ಆಗಿರುತ್ತದೆ. ಭಾಷೆ ಬೆಳೆಯುವುದು ಉಳಿಯುವುದು ಅದನ್ನು ಬಳಸಿದಾಗ ಮಾತ್ರ. ಬಳಸದೇ ಹೋದರೆ ಭಾಷೆ ಅಸ್ತಿತ್ವ ಹಾಗೂ ಬೆಳವಣಿಗೆ ಎರಡಕ್ಕೂ ಅಪಾಯ ತಪ್ಪಿದ್ದಲ್ಲ ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ಸ್ಮರಸಿಕೊಂಡರು.

ಕನ್ನಡದ ಕಲೆ, ಜಾನಪದ, ಭಾಷೆ ಉದ್ಯೋಗದ ಜೊತೆಗೆ ಕನ್ನಡದ ಅಸ್ಮಿತೆಗೆ ಉಂಟಾಗಿರುವ ಸಮಸ್ಯೆಗಳನ್ನು ಗುರುತಿಸಿ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಸಮ್ಮೇಳನವೂ ಆ ದಿಕ್ಕಿನಲ್ಲಿ ಕೆಲಸ ಮಾಡಲಿ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ. ಅವರಿಗೆ ಕನ್ನಡ ಕಲಿಸಿ. ಕನ್ನಡ ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.

ನಾಡದೇವಿ ಭುವನೇಶ್ವರಿಯ ೨೫ ಅಡಿ ಎತ್ರದ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸುತ್ತಿದ್ದೇವೆ. ರಾಜ್ಯ ಸರ್ಕಾರ ಕನ್ನಡದ ಕೆಲಸ ಕಾರ್ಯಗಳಿಗೆ ಹೆಚ್ಚಿನ ವ್ಯಾಪ್ತಿಯನ್ನು ದೊರಕಿಸುವ ಸಲುವಾಗಿ, “ಸಮಗ್ರ ಕನ್ನಡ ಭಾಷಾ ಬಳಕೆ ಕಾಯಿದೆಯನ್ನು ಜಾರಿಗೆ ತಂದಿದ್ದೇವೆ. ಇಂದಿನ ಕಾಲಘಟ್ಟದಲ್ಲಿ ಕನ್ನಡದ ಸವಾಲುಗಳು ಬಹುಮುಖಿಯಾಗಿದ್ದು, ಇವೆಲ್ಲವನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದು ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

೨೦೧೩-೧೮ ರ ವರೆಗಿನ ನಮ್ಮ ಈ ಹಿಂದಿನ ಅಧಿಕಾರವಧಿಯಲ್ಲಿ ೧೧೬೧ ಕೋಟಿ ರೂಪಾಯಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ್ದೆವು. ೨೦೨೩-೨೪ ಮತ್ತು ೨೦೨೪-೨೫ ಎರಡೂ ವರ್ಷಗಳಲ್ಲಿ ೫೦೬ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಿದ್ದೇವೆ. ಮೊನ್ನೆ ತಾನೆ ಮುಗಿದ ಕನ್ನಡ ರಾಜ್ಯೋತ್ಸವದಂದು ಘೋಷಿಸಿರುವಂತೆ, ರಾಜ್ಯದ ಖಾಸಗಿ ಮತ್ತು ಸರಕಾರಿ ವಲಯದಲ್ಲಿ ಉತ್ಪಾದನೆಯಾಗುತ್ತಿರುವ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸುವ ಬಗ್ಗೆ ಹಾಗೂ ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದಲ್ಲಿ ‘ನಾಡಿನ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿ ಇತಿಹಾಸಗಳನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯ’ವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಬಗ್ಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನಸಭೆಯ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲಿ ಇದ್ದರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ. ಈ ಕುರಿತು ನಮ್ಮ ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಡಳಿತ ಮೊದಲ್ಗೊಂಡು ಪ್ರತಿ ಹಂತದಲ್ಲೂ ಕನ್ನಡದ ಅಸ್ಮಿತೆಯನ್ನು ಪಸರಿಸಬೇಕಾಗಿದೆ. ಈ ಸಮ್ಮೇಳನದಲ್ಲಿ ನಾನು ಮುಖ್ಯವಾಗಿ ಮತ್ತೊಂದು ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಸರಿಯಾಗಿ ೫೦ ವರ್ಷಗಳ ಹಿಂದೆ ೨೦-೪- ೧೯೭೪ ರಂದು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕುವೆಂಪು ಅವರು ಬರಹಗಾರರ ಹಾಗೂ ಕಲಾವಿದರ ಒಕ್ಕೂಟದವರು ಏರ್ಪಡಿಸಿದ್ದ ಸಭೆಯಲ್ಲಿ ಮಾಡಿದ್ದ ಭಾಷಣ “ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ” ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿದೆ. ಅದರಲ್ಲಿ ನಾಡಿನ ಬೌದ್ಧಿಕ ದಾಸ್ಯಕ್ಕೆ ಕಾರಣಗಳೇನು? ಅದನ್ನು ಮೀರುವ ಬಗೆ ಹೇಗೆ? ಎಂಬುದನ್ನು ವಿವರಿಸಿದ್ದಾರೆ. ಕುವೆಂಪು ಅವರ ಆ ಭಾಷಣದಲ್ಲಿ ದುಡಿಯುವ ವರ್ಗವಾದ ಶೂದ್ರ ವರ್ಗವು ಜ್ಞಾನಸೃಷ್ಟಿಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ವರ್ಗಗಳಿಗೆ ಬಿಡುಗಡೆಯೇ ಇಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಸಾವಿರಗಟ್ಟಲೆ ಪುರೋಹಿತಶಾಹಿ ವರ್ಗವೊಂದೇ ಹೇಗೆ ನಮ್ಮನ್ನು ದಾಸ್ಯದಲ್ಲಿ ಮುಳುಗಿಸಿದೆ ಎಂಬುದನ್ನು ಕುವೆಂಪು ಅವರು ಪ್ರಸ್ತಾಪಿಸಿದ್ದಾರೆ ಎಂದರು.

ಮಂಡ್ಯದಲ್ಲಿ ಕೆಲವು ಕೋಮುವಾದಿ, ಹಿಂಸಾವಾದಿ ಶಕ್ತಿಗಳು ಸೇರಿಕೊಂಡು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ನಿರಂತರವಾಗಿ ಪ್ರಯತ್ನಿಸಿದವು. ಆದರೆ ಸಕ್ಕರೆ ಮತ್ತು ಸಿಹಿ ಬೆಳೆಯುವ ಮಂಡ್ಯದ ಜನರು ವಿಷ ಹಾಕಲು ಬಂದವರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಇತಿಹಾಸದಲ್ಲಿ ಮತ್ತೊಮ್ಮೆ ತಾವು ಸಿಹಿ ನೀಡುವವರೆ ಹೊರತು, ವಿಷ ನೀಡುವವರಲ್ಲ ಎಂದು ಸಾಬೀತು ಮಾಡಿದ್ದಾರೆ. ಮಂಡ್ಯದ ಜನರನ್ನು ನಾಡಿನ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.

More articles

Latest article