ರಂಗನಮನ
ಸದಾ ಪ್ರಯೋಗಶೀಲತೆಗೆ ಹಾತೊರೆಯುತ್ತಿದ್ದ, ಕ್ರಿಯಾಶೀಲತೆಯನ್ನೇ ಬದುಕಾಗಿಸಿ ಕೊಂಡಿದ್ದ ರಂಗಸಾಧಕ, ರಂಗ ನೇಪಥ್ಯದಲ್ಲೇ ಹೆಚ್ಚೆಚ್ಚು ತೊಡಗಿ ಕೊಂಡಿದ್ದ ಸದಾನಂದ ಸುವರ್ಣರವರು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಅವರಿಗೆ ರಂಗಕರ್ಮಿ ಶಶಿಕಾಂತ ಯಡಹಳ್ಳಿಯವರು ಬರೆದ ರಂಗನಮನ ಇಲ್ಲಿದೆ
ಕನ್ನಡ ಸಾಂಸ್ಕೃತಿಕ ಲೋಕದ ಕಲಾವಿದೆ ಅಪರ್ಣಾರವರ ಅಕಾಲಿಕ ಅಗಲಿಕೆಯನ್ನೇ ಇನ್ನೂ ಅರಗಿಸಿಕೊಳ್ಳಲು ಆಗಿರಲಿಲ್ಲ, ಅಷ್ಟರಲ್ಲಿ ಹಿರಿಯ ರಂಗಕರ್ಮಿ ಸುವರ್ಣರವರೂ ಅಪರ್ಣಾರವರ ಹಿಂದೆಯೇ ನಿರ್ಗಮಿಸಿದ್ದು (16-07-2024) ಕರಾವಳಿ ಕರ್ನಾಟಕದ ರಂಗಭೂಮಿಗೆ ಆದ ನಷ್ಟವಾಗಿದೆ. ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲವಾಗಿದ್ದ ಪ್ರತಿಭಾನ್ವಿತ ರಂಗನಿರ್ದೇಶಕರ ಸಾವನ್ನೂ ಸಹ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ವಯೋಸಹಜ ಅನಾರೋಗ್ಯದಿಂದಾಗಿ 93ನೇ ವಯಸ್ಸಿನಲ್ಲಿ ಕಾಲವಶರಾದರಾದರೂ ಅವರಿನ್ನೂ ಇರಬೇಕಾಗಿತ್ತು. ಹೊಸ ತಲೆಮಾರಿನ ರಂಗಾಸಕ್ತ ಯುವಕರಿಗೆ ಅವರ ಮಾರ್ಗದರ್ಶನ ಬೇಕಾಗಿತ್ತು. ನಟ, ನಿರ್ದೇಶಕ, ರಂಗತಜ್ಞ, ಲೇಖಕ, ಪ್ರಕಾಶಕ, ಸಂಘಟಕ, ನಾಟಕಕಾರ, ಕಥೆಗಾರ, ಕಾದಂಬರಿಕಾರ, ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರಾದ ಸದಾನಂದ ಸುವರ್ಣರವರ ಹೆಸರು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹುದಾಗಿದೆ.
ಸದಾನಂದ ಸುವರ್ಣರ ಹೆಸರು ಕರ್ನಾಟಕದಾದ್ಯಂತ ಗೊತ್ತಿರದೇ ಇದ್ದರೂ ಅವರ ರಂಗಕಾರ್ಯ ಕರ್ನಾಟಕವನ್ನು ದಾಟಿ ಬಾಂಬೆಗೆ ವಿಸ್ತರಿಸಿತ್ತು. ರಂಗ ನೇಪಥ್ಯದಲ್ಲೇ ಹೆಚ್ಚೆಚ್ಚು ತೊಡಗಿಕೊಂಡಿದ್ದ ಸುವರ್ಣರವರು ಪ್ರಚಾರಗಳಿಂದ ದೂರವೇ ಉಳಿದು ತಮ್ಮ ಪಾಡಿಗೆ ತಾವು ರಂಗಕಾಯಕದಲ್ಲಿ ನಿರತರಾಗಿದ್ದರು. ಮುಲ್ಕಿಯ ಬೋರ್ಡ್ ಹೈಸ್ಕೂಲಿನಲ್ಲಿ 5ನೇ ಕ್ಲಾಸ್ ಓದಿದ್ದ ಸುವರ್ಣರವರು ಬದುಕು ಹುಡುಕಿಕೊಂಡು ಮುಂಬೈಗೆ ಹೋಗಿ ಸಂಜೆ ಶಾಲೆಗಳಲ್ಲಿ ಓದು ಮುಂದುವರೆಸಿದರು. ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಾ ರಂಗಾಸಕ್ತಿಯಿಂದಾಗಿ ಥಿಯೇಟರ್ ಟ್ರೈನಿಂಗ್ ಡಿಪ್ಲೋಮಾ ಕೋರ್ಸ್ ಸೇರಿ ರಂಗಶಿಕ್ಷಣವನ್ನೂ ಪಡೆದರು. ಮುಂದೆ ಪೇಂಟ್ ಸರಬರಾಜು ಉದ್ಯಮ ಆರಂಭಿಸುವ ಮೂಲಕ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಜೊತೆಗೆ ಅನ್ಯ ಭಾಷೆಯ ನೆಲದಲ್ಲಿ ಬೇರೂರಿ ಕನ್ನಡ ಹಾಗೂ ತುಳು ರಂಗಭೂಮಿಯನ್ನು ಬೆಳೆಸಲು ಶ್ರಮಿಸಿದ್ದು ವಿಸ್ಮಯಕಾರಿಯಾಗಿದೆ. ಗೋರೆಗಾಂವ್ ಕರ್ನಾಟಕ ಸಂಘವನ್ನು ಬಹುಕಾಲ ಮುನ್ನಡೆಸಿಕೊಂಡು ಬಂದಿದ್ದ ಸುವರ್ಣರವರು ಕನ್ನಡದ ಸಾಂಸ್ಕೃತಿಕ ಘಮಲನ್ನು ಮುಂಬೈನಲ್ಲಿ ಪಸರಿಸಿದರು. ಮುಂಬಯಿಯ ಕರ್ನಾಟಕ ಸಂಘವು 2010 ರಲ್ಲಿ ಸಾಂಸ್ಕೃತಿಕ ಸಾಧನೆಗಾಗಿ ಅವರನ್ನು ಸನ್ಮಾನಿಸಿ ಗೌರವಿಸಿತ್ತು.
ನೂರಾರು ನಾಟಕಗಳ ನಿರ್ದೇಶನದ ಜೊತೆಗೆ ಧಾರಾವಾಹಿ ಹಾಗೂ ಸಿನೆಮಾಗಳನ್ನೂ ನಿರ್ದೇಶಿಸಿ ನಿರ್ಮಿಸಿದ್ದ ಸುವರ್ಣರವರು ನಾಟಕಗಳ ರಚನೆಯ ಜೊತೆಗೆ ಕತೆ ಕಾದಂಬರಿಗಳನ್ನೂ ಬರೆದು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅನೇಕ ಕಲಾವಿದರು ಸುವರ್ಣರವರ ರಂಗಗರಡಿಯಿಂದಾಗಿ ಬೆಳಕಿಗೆ ಬಂದಿದ್ದಾರೆ. ಹೆಸರಾಂತ ಬಹುಭಾಷಾ ನಟ ಪ್ರಕಾಶ್ ರೈರವರನ್ನು ಜನರು ಗುರುತಿಸಿದ್ದೇ ಸುವರ್ಣರವರು ನಿರ್ದೇಶಿಸಿದ್ದ ‘ಗುಡ್ಡದ ಭೂತ’ ಧಾರಾವಾಹಿಗಳ ಮೂಲಕ. ಶಿವರಾಮ ಕಾರಂತರ ಸಂದರ್ಶನವನ್ನಾಧರಿಸಿದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ದೂರದರ್ಶನದಲ್ಲಿ ಹತ್ತು ಕಂತುಗಳಲ್ಲಿ ಪ್ರಸಾರವಾಗಿತ್ತು.
ಸಿನೆಮಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ ಸದಾನಂದರವರು ಪೂರ್ಣಚಂದ್ರ ತೇಜಸ್ವಿಯವರ ‘ಕುಬಿ ಮತ್ತು ಇಯಾಲ’ ಕಥೆಯನ್ನು ಚಲನಚಿತ್ರವಾಗಿಸಿ ನಿರ್ದೇಶಿಸಿದ್ದರು. ಗಿರೀಶ್ ಕಾಸರವಳ್ಳಿಯವರಿಗೆ 18ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಂದುಕೊಟ್ಟ, ಶತಮಾನದ ನೂರು ಚಿತ್ರಗಳಲ್ಲಿ ಒಂದಾದ ‘ಘಟಶ್ರಾದ್ಧ’ ಚಲನಚಿತ್ರದ ನಿರ್ಮಾಪಕರಾಗಿದ್ದವರು ಸುವರ್ಣರವರು. ಜೊತೆಗೆ ಕಾಸರವಳ್ಳಿಯವರು ನಿರ್ದೇಶಿಸಿದ ‘ಮನೆ, ಕ್ರೌರ್ಯ ಹಾಗೂ ತಬರನ ಕಥೆ’ ಸಿನೆಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದವರು ಸದಾನಂದರವರು. ಗಿರೀಶ್ ಕಾಸರವಳ್ಳಿಯವರಿಗೆ ಬೆಂಬಲವಾಗಿ ಸುವರ್ಣರವರು ನಿಂತಿದ್ದರಿಂದಾಗಿ ಜಗಮೆಚ್ಚುವ ಕಲಾತ್ಮಕ ಸಿನೆಮಾಗಳು ನಿರ್ಮಾಣವಾಗಲು ಸಾಧ್ಯವಾಯಿತು. ಇದಕ್ಕಾಗಿಯಾದರೂ ಸಿನೆಮಾ ಕ್ಷೇತ್ರ ಸುವರ್ಣರವರಿಗೆ ಆಭಾರಿಯಾಗಿರಬೇಕಿದೆ.
ವೃತ್ತಿಯಿಂದ ಬಿಡುಗಡೆಗೊಂಡು ಇಳಿವಯಸ್ಸಿನಲ್ಲಿ ಮಂಗಳೂರಿಗೆ ಮರಳಿ ಬಂದು ನೆಲೆಸುವ ಸುವರ್ಣರವರು ‘ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ’ವನ್ನು ಆರಂಭಿಸಿದರು. ಈ ತಂಡದ ಮೊದಲ ನಾಟಕವಾದ ‘ಕೋರ್ಟ್ ಮಾರ್ಶಲ್’ ಕರಾವಳಿಗರ ಗಮನ ಸೆಳೆಯಿತು. ಹಿಂದಿಯಿಂದ ಅನುವಾದಿಸಿದ ‘ಉರುಳು’ ನಾಟಕವನ್ನು ಮಂಗಳೂರಿನ ಸಂಕೇತ ತಂಡಕ್ಕೆ ನಿರ್ದೇಶಿಸಿ ಮಂಗಳೂರಿಗರ ಮೆಚ್ಚುಗೆ ಗಳಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಿಗೆ ನಿರಂತರತೆಯನ್ನು ಒದಗಿಸಿ ಕೊಟ್ಟವರು. ದೊರೆ ಈಡಿಪಸ್, ಕದಡಿದ ನೀರು, ಮಳೆ ನಿಂತ ಮೇಲೆ, ಪ್ರಜಾಪ್ರಭುತ್ವ ಲೊಳಲೊಟ್ಟೆ, ಧರ್ಮಚಕ್ರ, ಸತ್ಯಂ ವದ-ಧರ್ಮಂ ಚರ, ಯಾರು ನನ್ನವರು.. ಹೀಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿದರು. ರಂಗಕ್ರಿಯೆಯ ಮೂಲಕ ನೂರಾರು ಕಲಾವಿದರನ್ನು ಗುರುತಿಸಿ ಬೆಳೆಸಿದ ಸದಾನಂದ ಸುವರ್ಣರವರ ಸಾಧನೆಯನ್ನು ಪರಿಗಣಿಸಿದ ಕರ್ನಾಟಕ ರಾಜ್ಯ ಸರಕಾರವು ಕನ್ನಡ ರಂಗಭೂಮಿಯಲ್ಲಿ ಪ್ರತಿಷ್ಠಿತವೆನಿಸಿರುವ ಬಿ.ವಿ.ಕಾರಂತ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತ್ತು.
ಸಾರ್ಥಕ ಬದುಕನ್ನು ಬಾಳಿದ ಸುವರ್ಣರವರ ಸಾಂಸ್ಕತಿಕ ಕಾಯಕ ಮುಂದಿನ ತಲೆಮಾರಿಗೆ ಮಾದರಿಯಾಗಿದೆ. ಸದಾ ಪ್ರಯೋಗಶೀಲತೆಗೆ ಹಾತೊರೆಯುತ್ತಿದ್ದ, ಕ್ರಿಯಾಶೀಲತೆಯನ್ನೇ ಬದುಕಾಗಿಸಿಕೊಂಡಿದ್ದ ರಂಗಸಾಧಕ ಸದಾನಂದ ಸುವರ್ಣರವರಿಗೆ ರಂಗನಮನಗಳು.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಸೃಜನಶೀಲ ಪ್ರತಿಭೆಯ ಸದಾನಂದ ಸುವರ್ಣರು