ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳಲ್ಲಿ, ಕಾರ್ಖಾನೆಗಳಲ್ಲಿ, ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ವರ್ಗದ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ಕರ್ನಾಟಕ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಈ ಮಸೂದೆ ಮಂಗಳವಾರ ಮಂಡನೆಗೆ ಮುಂದಾಗಿದ್ದ ಸಿದ್ದರಾಮಯ್ಯ ಸರ್ಕಾರದ ನಡೆಗೆ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಉದ್ಯಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ, ಮಸೂದೆ ಮಂಡನೆ ನಿರ್ಧಾರದಿಂದ ಹಿಂದೆ ಸರಿದಿದೆ.
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸಚಿವಾಲಯ ತಿಳಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ನಷ್ಟವಾಗಬಾರದು. ಉದ್ಯೋಗ ಸೃಷ್ಟಿಗೂ ನಷ್ಟವಾಗಬಾರದು. ಕನ್ನಡಿಗರು ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ಬೇರೆ ಬೇರೆ ಭಾಗಗಳಲ್ಲೂ ಕನ್ನಡಿಗರಿದ್ದಾರೆ. ಅದಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಬೇಕಿದೆ. ಉದ್ಯಮಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಉದ್ಯಮಿಗಳಿಂದ ಬ್ಲಾಕ್ ಮೇಲ್
‘ಈ ರೀತಿಯ ಮಸೂದೆ ಕಳವಳಕಾರಿಯಾದುದು. ಇದು ಉದ್ಯಮದ ಬೆಳವಣಿಗೆಗೆ ಧಕ್ಕೆ ತರುತ್ತದೆ. ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ಇರುವ ಜಾಗತಿಕ ಬ್ರ್ಯಾಂಡಿಂಗ್ಗೂ ಧಕ್ಕೆ ಆಗುತ್ತದೆ. ಮೀಸಲಾತಿ ಮಸೂದೆಯಿಂದ ಕಂಪನಿಗಳು ಬೇರೆಡೆಗೆ ಸ್ಥಳಾಂತರವಾಗಬಹುದು. ಈ ಮಸೂದೆಯಲ್ಲಿರುವ ಕಾನೂನುಗಳ ಬಗ್ಗೆ ನಾಸ್ಕಾಮ್ ಸದಸ್ಯರಿಗೆ ಆತಂಕ ಇದೆ. ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ,’ ಎಂದು ನಾಸ್ಕಾಮ್ ಎಕ್ಸ್ ಪೋಸ್ಟ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ಕರ್ನಾಟಕ ಸರಕಾರದಲ್ಲಿ ಮೊದಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿನ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಕಡೆಗೆ ಸರಕಾರ ಗಮನ ಕೊಡಬೇಕು. ಉಚಿತವಾಗಿ ಎಲ್ಲವನ್ನೂ ಕೊಟ್ಟು, ಈಗ ಕೆಎಸ್ಆರ್ಟಿಸಿ ಮತ್ತು ಬೆಸ್ಕಾಂ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ. ಬಸ್ಗಳ ಕೊರತೆ ಉಂಟಾಗಿದೆ. ಇನ್ನೂ ಕನ್ನಡದ ಪರೀಕ್ಷೆ ಪಾಸು ಮಾಡಿದವರಿಗೆ ಮಾತ್ರವೇ ಉದ್ಯೋಗ ಎಂದರೆ, ಇನ್ನೂ ಹೆಚ್ಚಿನ ಸೌಕರ್ಯ ಇರುವ ಹೈದರಾಬಾದ್ ಹಾಗೂ ತಮಿಳುನಾಡಿಗೆ ಕಂಪನಿಗಳು ಹೋಗುತ್ತವೆ. ಇಲ್ಲಿಗೆ ಬಂಡವಾಳ ಹರಿದು ಬರುವುದಿಲ್ಲ ಎಂದು ಇನ್ಫೊಸಿಸ್ನ ಮಾಜಿ ಸಿಎಫ್ಒ ಟಿವಿ ಮೋಹನ್ದಾಸ್ ಪೈ ಹೇಳಿದ್ದಾರೆ.