ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಬಳಸದೇ ಇರುವವರಿಗೆ ತಿಳುವಳಿಕೆ ಪತ್ರ ನೀಡಿ ಕೂಡಲೆ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರರಾದ ತುಷಾರ್ ಗಿರಿ ನಾಥ್ ರವರು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ನಗರದ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಅಳವಡಿಸುವ ಸಂಬಂಧ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲಾ ವಲಯದ ಉದ್ದಿಮೆಗಳನ್ನು ಜನವರಿ 15ರ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ತಿಳುವಳಿಕೆ ಪತ್ರ ನೀಡಬೇಕೆಂದು ಸೂಚಿಸಿದರು.
ಸಮೀಕ್ಷೆ ನಡೆಸುವಾಗ ನಾಮಪಲಕದಲ್ಲಿ ಕನ್ನಡ ಬಳಕೆ ಮಾಡದಿದ್ದಲ್ಲಿ ಆಯಾ ಉದ್ದಿಮೆಗಳಿಗೆ ತಿಳುವಳಿಕೆ ಪತ್ರ ನೀಡಬೇಕು. ಉದ್ದಿಮೆ ಪರವಾನಗಿ ಇದ್ದರೆ ಯಾಕೇ ನಾವು ಉದ್ದಿಮೆ ಪರವಾನಗಿ ರದ್ದು ಮಾಡಬಾರದು ಎಂದು ನೀಡಬೇಕು. ಒಂದು ವೇಳೆ ಉದ್ದಿಮೆ ಪರವಾನಗಿ ಮಾಡಿಸದ್ದಿದರೆ ಯಾಕೆ ನಾವು ನಿಮ್ಮ ಉದ್ದಿಮೆಯನ್ನು ಮುಚ್ಚಬಾರದೆಂದು ತಿಳುವಳಿಕೆ ಪತ್ರವನ್ನು ಜಾರಿಮಾಡಬೇಕೆಂದು ತಿಳಿಸಿದರು.
ನಗರದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡ ಭಾಷೆಯನ್ನು ಬಳಸದ ಉದ್ದಿಮೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.