ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ” “ಕನ್ನಡ ಕಾಯಿದೆ” – 2023 ಜಾರಿ ಮಾಡುವ ಪ್ರಾಧಿಕಾರಗಳು, ಆಯೋಗಗಳು, ನಿರ್ದೇಶನಾಲಯಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಪ್ರಕ್ರಿಯೆ ಮುಗಿಸಿ ಅಧಿನಿಯಮ ಅನುಷ್ಠಾನ ಮಾಡುವಂತೆ ಕನ್ನಡ ಪರ ಚಿಂತಕ ಆದ ಜ್ಞಾನ್ ಮಧು ಕಲ್ಲಹಳ್ಳಿ ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಮಾಡಿದ್ದಾರೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಮಾರ್ಚ್ 12 , 2024 ರಿಂದ ಈ ಜಾರಿಯಲ್ಲಿದೆ ಎಂದು ರಾಜ್ಯಪತ್ರ ಹೊರಡಿಸಿತ್ತಾದರೂ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಅಧಿನಿಯಮ ಅಧಿಕೃತವಾಗಿ ಜಾರಿಯಾಗಲು ಆದಷ್ಟು ಬೇಗ ಪ್ರಾಧಿಕಾರಗಳು, ನಿರ್ದೇಶನಾಲಯ, ಭಾಷಾ ಆಯೋಗಗಳು ರಚನೆಯಾಗಬೇಕೆಂದು ಜ್ಞಾನ್ ಮಧು ಕಲ್ಲಹಳ್ಳಿ ತಿಳಿಸಿದ್ದಾರೆ.
ಅತಿ ತುರ್ತಾಗಿ ಈ ಆಡಳಿತ ವ್ಯವಸ್ಥೆ ಮುಗಿಸಲು ಮತ್ತು ಈ ಅಧಿನಿಯಮದ ಪರಿಣಾಮಕಾರಿ ಅನುಷ್ಠಾನ ಬೇಗ ಆಗಲೆಂದು ಸರ್ಕಾರಕ್ಕೆ ಖುದ್ದಾಗಿ ಒತ್ತಡ ಹೇರಿ ಕನ್ನಡ ಎಲ್ಲೆಡೆ ಬರುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಶಿಸ್ತು ಪ್ರಾಧಿಕಾರ, ಜಾರಿ ಪ್ರಾಧಿಕಾರ ಮತ್ತು ಜಾರಿ ಅಧಿಕಾರಿಯನ್ನು ತರುವ ವ್ಯವಸ್ಥೆಯನ್ನು ವಿನಾಕಾರಣ ಸರ್ಕಾರ ವಿಳಂಬ ಮಾಡುತ್ತಿದೆ ಜೊತೆಗೆ ಈ ವಿಳಂಬವು ಕನ್ನಡ ಅಭಿವೃದ್ದಿಗೆ ಈಗಾಗಲೇ ಸಾಕಷ್ಟು ಹಿನ್ನೆಡೆಯನ್ನುಂಟು ಮಾಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಕೆಲಸ ಎಲ್ಲ ಕೆಲಸಗಳಿಗಿಂತ ಮೊದಲ ಆದ್ಯತೆಯಾಗಿರಬೇಕೆಂದು ಈ ಮೂಲಕ ಮನವರಿಕೆ ಮಾಡಿಕೊಡಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ “ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ” ಮಾಡಬೇಕಾದ ತಿದ್ದುಪಡಿಯ ವಿಸ್ತೃತವಾದ ವರದಿಯನ್ನು ಜ್ಞಾನ್ ಮಧು ಸಲ್ಲಿಸಿದ್ದಾರೆ.