ನ್ನಡದ ಖ್ಯಾತ ಲೇಖಕಿ ಕಮಲಾ ಹಂಪನ ವಿಧಿವಶರಾಗಿದ್ಧಾರೆ. ಇಂದು ಬೆಳಗ್ಗೆ ಹೃದಯಾಘಾತದಿಂದ ಕಮಲಾ ಹಂಪನಾ ನಿಧನರಾಗಿದ್ದಾರೆ. ಕಮಲಾ ಹಂಪನಾ ಅವರ ನಿಧನಕ್ಕೆ ವಿವಿಧ ರಾಜಕೀಯ ಗಣ್ಯರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಕೋರುವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದು, ನಾಡಿನ ಖ್ಯಾತ ಸಾಹಿತಿಗಳು ಹಾಗೂ ನಾಡೋಜ ಕಮಲಾ ಹಂಪನಾ ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ಅವರ ಅಗಲಿಕೆಗೆ ನನ್ನ ಸಂತಾಪಗಳು. ತಮ್ಮ ಲೇಖನಗಳು, ಸಂಶೋಧನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾಗಿದ್ದರು. ಮೂಡಬಿದಿರೆಯಲ್ಲಿ ನಡೆದ 71 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಹೆಮ್ಮೆ ತಂದಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಸಾಹಿತ್ಯ ಲೋಕ ಬಡವಾದಂತಾಗಿದೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ ನಿಧನರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿ ಎನಿಸಿದ್ದ ನಾಡೋಜ ಕಮಲ ಹಂಪನಾ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಹಿರಿಯ ಲೇಖಕಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತೇನೆ, ಅವರ ಕುಟುಂಬದವರು, ಅಭಿಮಾನಿಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿವ ಸಂತೋಷ್ ಲಾಡ್ ಟ್ವೀಟ್ ಮಾಡಿದ್ದು, ಕನ್ನಡದ ಖ್ಯಾತ ಲೇಖಕಿ, ವಿಮರ್ಶಕಿ, ನಾಡೋಜ ಶ್ರೀಮತಿ ಕಮಲಾ ಹಂಪನಾ ಅವರು ವಿಧಿವಶರಾದ ವಿಷಯ ತಿಳಿದು ದುಃಖವಾಯಿತು. ಹಲವಾರು ಅನನ್ಯ ಕೃತಿಗಳನ್ನು ರಚಿಸಿರುವ ಕಮಲಾ ಹಂಪನಾ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಯಾವತ್ತಿಗೂ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಕೋರುತ್ತ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸೋಣ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಂಸದ ಡಿಕೆ ಸುರೇಶ್ ಅವರು ಟ್ವೀಟ್ ಮಾಡಿದ್ದು, ಕನ್ನಡದ ಖ್ಯಾತ ಸಾಹಿತಿಗಳು, ವಿಚಾರವಾದಿಗಳಾದ ನಾಡೋಜೆ ಶ್ರೀಮತಿ ಕಮಲಾ ಹಂಪನಾ ಅವರ ನಿಧನದ ಸುದ್ಧಿ ತೀವ್ರ ದುಃಖ ತಂದಿದೆ. ಸಾಹಿತ್ಯ ಮಾತ್ರವಲ್ಲದೇ ಸಮ ಸಮಾಜ ಕಟ್ಟಲು ಅವರು ಸಲ್ಲಿಸಿದ ಸೇವೆ, ಅವರ ಅಪಾರ ಜ್ಞಾನ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ. ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತಿ ಕರವೇ ಅಧ್ಯಕ್ಷರಾದ ನಾರಾಯಣಗೌಡ ಅವರು ಟ್ವೀಟ್ ಮಾಡಿದ್ದು, ಡಾ.ಕಮಲಾ ಹಂಪನಾ ಅವರ ಅಗಲಿಕೆಯ ಸುದ್ದಿ ಕೇಳಿ ದಿಗ್ಭ್ರಾಂತನಾಗಿದ್ದೇನೆ. ಅವರು ಕರ್ನಾಟಕ ರಕ್ಷಣಾ ವೇದಿಕೆಯ ಭಾಗವೇ ಆಗಿದ್ದರು. ಡಾ.ಹಂಪನಾ ಅವರೊಂದಿಗೆ ಡಾ.ಕಮಲಾ ಅವರು ನಮ್ಮ ಬೌದ್ಧಿಕ ಶಕ್ತಿಯೇ ಆಗಿದ್ದರು. ಅವರು ತೋರಿದ ಮಾರ್ಗದರ್ಶನ, ಪ್ರೀತಿ-ಮಮತೆಗೆ ಸದಾ ಚಿರ ಋಣಿಯಾಗಿರುತ್ತೇನೆ. ಅವರಿಗೆ ಭೌತಿಕವಾಗಿಯಷ್ಟೇ ಸಾವು. ಅವರ ಚೇತನ ಸದಾ ಜೀವಂತ ಎಂದು ಕಂಬನಿ ಮಿಡಿದಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕಮಲಾ ಹಂಪನಾ ತಮ್ಮ ಮಗಳ ಮನೆಯಲ್ಲಿದ್ದರು. ಪತಿ ಪ್ರೊ ಹಂಪ ನಾಗರಾಜಯ್ಯ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಕಮಲಾ ಹಂಪನ ಅಗಲಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಮಲಾ ಹಂಪನಾ ಅವರು ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಕಮಲಾ ಹಂಪನಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.