ಇನ್ನು‌ ಮುಂದೆ ಕಲರ್ ಕಲರ್ ಕಬಾಬ್ ಮಾರುವಂತಿಲ್ಲ: ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು ಗೊತ್ತೆ?

Most read

ಬೆಂಗಳೂರು: ಇನ್ನು‌ ಮುಂದೆ ಕಲರ್‌ ಕಲರ್ ಕಬಾಬ್ ಯಾವ ಹೋಟೆಲ್ ನಲ್ಲೂ ಮಾಡುವಂತಿಲ್ಲ. ಕಬಾಬ್ ಗೆ ಬಣ್ಣ ಬೆರೆಸಿದರೆ ಏಳು ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲಾಗಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಕಬಾಬ್ ತಯಾರಿಕೆಗೆ ಅಪಾಯಕಾರಿ ಕೃತಕ ಬಣ್ಣ ಬಳಸುವವರ ವಿರುದ್ಧ ಕಠಿಣ‌ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಿಷೇಧದ ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಅನ್ವಯ 7 ವರ್ಷಗಳಿಂದ ಜೀವಾವಧಿ ವರೆಗೆ ಜೈಲುಶಿಕ್ಷೆ ಹಾಗು 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ರಾಜ್ಯದ ಎಲ್ಲಾ ಕಬಾಬ್ ತಯಾರಿಸುವ ಮತ್ತು ಮಾರಾಟ ಮಾಡುವ ಆಹಾರ ಉದ್ದಿಮೆದಾರರು ಈ ಆದೇಶವನ್ನು ತತಕ್ಷಣದಿಂದಲೇ ಪಾಲಿಸಲು ಸೂಚಿಸಲಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರ ಅಭ್ಯಾಸಗಳಲ್ಲಿದೆ. ಉತ್ತಮ ಆರೋಗ್ಯಕ್ಕಾಗಿ ಇಂತಹ ಅಪಾಯಕಾರಿ ವಸ್ತುಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರೋಣ. ನಮ್ಮ ಆರೋಗ್ಯದ ರಕ್ಷಣೆ ಮಾಡೋಣ‌ ಎಂದು ಅವರು ಸಾರ್ವಜನಿಕರನ್ನು ವಿನಂತಿಸಿದ್ದಾರೆ.

More articles

Latest article