Sunday, September 8, 2024

ರಂಗಕರ್ಮಿಗಳ ಒತ್ತಾಯದ ಕರೆ; ಕಲಾಕ್ಷೇತ್ರ ಕಾರ್ಯಾಚರಣೆಗೆ ತಡೆ

Most read

ಕಲಾಕ್ಷೇತ್ರ ನವೀಕರಣವಾಗಲೇ ಬಾರದೆಂದಲ್ಲ. ನವೀಕರಣದ ಹೆಸರಲ್ಲಿ ದಿನಬಾಡಿಗೆ ಹೆಚ್ಚಿಸಿ ರಂಗಚಟುವಟಿಕೆಗಳು ಕೈಗೆಟುಕದಿರುವಂತೆ ಆಗಬಹುದು ಎನ್ನುವುದೇ ಸಾಂಸ್ಕೃತಿಕ ಕ್ಷೇತ್ರದವರ ಆತಂಕವಾಗಿದೆ. ಅನಗತ್ಯ ಕಾಮಗಾರಿಗಳನ್ನು ನಿಲ್ಲಿಸಿ ಅತ್ಯಗತ್ಯವಾದ ತಾಂತ್ರಿಕ ಪರಿಕರಗಳ ಲೋಪ ಪರಿಹರಿಸಿ ಎಂಬುದೇ ರಂಗಭೂಮಿಯವರ ಒತ್ತಾಯವಾಗಿದೆ- ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಬೆಂಗಳೂರಿಗರ ಹೆಮ್ಮೆಯ ರವೀಂದ್ರ ಕಲಾಕ್ಷೇತ್ರವನ್ನು ಅತ್ಯಾಧುನೀಕರಣ ಮಾಡುತ್ತೇವೆ ಎಂದು ಸ್ವತಃ ಸಂಸ್ಕೃತಿ ಇಲಾಖೆಯ ಸಚಿವರು ಆಸಕ್ತಿ ವಹಿಸಿದ್ದರು. ಇಲಾಖೆಯ ಅಧಿಕಾರಿಗಳು ಕ್ಷೇತ್ರ ಸರ್ವೆ ಮಾಡಿಸಿ ಅಂದಾಜು ವೆಚ್ಚವನ್ನೂ ಲೆಕ್ಕಹಾಕಿಸಿ ಪ್ರಸ್ತಾವನೆ ಸಿದ್ಧಗೊಳಿಸಿ ಅನುಮೋದನೆಗಾಗಿ ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಇದಕ್ಕೆ ವಿರೋಧ ರಂಗಭೂಮಿಯವರಿಂದಲೇ ವ್ಯಕ್ತವಾಗಿತ್ತು.

ಯಾಕೆಂದರೆ ಪ್ರಸ್ತಾವಿತ ಕಲಾಕ್ಷೇತ್ರದ ಆಧುನೀಕರಣ ಯೋಜನೆಗೆ ಸಾಂಸ್ಕೃತಿಕ ಕ್ಷೇತ್ರದ ಯಾರೂ ಬೇಡಿಕೆ ಇಟ್ಟಿರಲಿಲ್ಲ. ಡಿಸೆಂಬರ್ 15 ರಂದು ಬಾಕಿ ಪ್ರಶಸ್ತಿ ಪ್ರದಾನ ಮಾಡುವ ಕುರಿತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕರೆದ  ರಂಗಕರ್ಮಿಗಳ ಸಮಾಲೋಚನಾ ಸಭೆಯಲ್ಲಿ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸುವ ಸಂಗೀತ ಕಾರ್ಯಕ್ರಮಗಳ ಸದ್ದು ಕಲಾಕ್ಷೇತ್ರದೊಳಗಿನ ಕಾರ್ಯಕ್ರಮಗಳಿಗೆ ತೊಂದರೆ ಮಾಡುತ್ತದೆ. ಆದ್ದರಿಂದ ಕಲಾಕ್ಷೇತ್ರಕ್ಕೂ ಹಾಗೂ ಸಂಸ ದ ನಡುವೆ ಇರುವ ಶೆಟರ್ ತೆಗೆದು ಗೋಡೆ ಕಟ್ಟಿ ಆಕಡೆ ಸದ್ದು ಈಕಡೆ ಬರದಂತೆ ತಡೆಯಬೇಕು ಹಾಗೂ ಸಂಸ ದಲ್ಲಿ ಸೈಡ್ ವಿಂಗ್ ನಿರ್ಮಿಸಿ  ಲೈಟಿಂಗ್ ಬಾರ್ ಅಳವಡಿಸಬೇಕು ಎಂದಷ್ಟೇ ಚರ್ಚೆ ಆಗಿತ್ತು. ಹಾಗೂ ರವೀಂದ್ರ ಕಲಾಕ್ಷೇತ್ರದ ಅಗತ್ಯಗಳ ಬಗ್ಗೆ ರಂಗಕರ್ಮಿಗಳ ಸಭೆ ಕರೆದು ಸಲಹೆಗಳನ್ನೂ ಅಧಿಕಾರಿಗಳು ಪಡೆದಿರಲಿಲ್ಲ. ಕರೆತಂದ ಗುತ್ತಿಗೆದಾರರು ಹಾಗೂ ಇಂಜನೀಯರುಗಳಿಗೆ ಕಲಾಕ್ಷೇತ್ರದ ವಿನ್ಯಾಸ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನವೂ ಇರಲಿಲ್ಲ. ಆದರೂ 24 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ತರಾತುರಿಯಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು.

ಈ ಸಂಗತಿ ಕುರಿತ ವಿವರ ಹಾಗೂ ವಿರೋಧಗಳು ಪ್ರಜಾವಾಣಿ, ವಾರ್ತಾಭಾರತಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾದವು. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧ ವ್ಯಕ್ತವಾಯಿತು. ಜ.31 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರ ಪರವಾಗಿ ಮಾತಾಡಿದ ಡಾ.ಕೆ.ಎಂ. ಮರುಳಸಿದ್ದಪ್ಪನವರು ಅನಗತ್ಯವಾಗಿ 24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರ ನವೀಕರಣಕ್ಕೆ ಇಲಾಖೆ ನೀಡಿರುವ ಪ್ರಸ್ತಾವನೆ ಬಗ್ಗೆ ಪ್ರಸ್ತಾಪಿಸಿ ಅಲ್ಲಿಯೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದರು. ಈ ರೀತಿಯ ಅನಿರೀಕ್ಷಿತ ಪ್ರತಿರೋಧದಿಂದ ವಿಚಲಿತರಾದ ಮುಖ್ಯಮಂತ್ರಿಗಳು “ಸಲಹೆ ಬಂದಿದೆ 24 ಕೋಟಿ ಇನ್ನೂ ನಿರ್ಧಾರ ಆಗಿಲ್ಲ” ಎಂದು ಹೇಳಿದರು. ಆ ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರನ್ನು ಕರೆಸಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರೆಂಬ ಮಾಹಿತಿಯೂ ಇದೆ.

ಬಹುಷಃ ಈ ರೀತಿಯಲ್ಲಿ ವಿರೋಧ ವ್ಯಕ್ತವಾಗಬಹುದು ಎನ್ನುವ ಅಂದಾಜು ಈ ನವೀಕರಣ ಯೋಜನೆಯ ರೂವಾರಿಯಾದ ಸಂಸ್ಕೃತಿ ಇಲಾಖೆಯ ಸಚಿವರಿಗೂ ಇರಲಿಲ್ಲ. ಪ್ರಸ್ತಾವಿತ ಯೋಜನೆಯನ್ನು ಮಾಡದೇ ಹೋದರೆ ಮುಖಭಂಗ. ಮಾಡಿದರೆ ಪ್ರತಿರೋಧ. ಇಂತಹ ಸಂಧಿಗ್ಧ ಸಮಯದಲ್ಲಿ ಪಳಗಿದ ರಾಜಕಾರಣಿ ಏನು ಮಾಡಬೇಕೋ ಅದನ್ನೇ ತಂಗಡಗಿಯವರು ಮಾಡಿದರು. ‌ತಮ್ಮ ಮೇಲೆ ಬರಬಹುದಾದ ಆರೋಪದಿಂದ ಮುಕ್ತವಾಗಲು ಉಪಾಯವೊಂದನ್ನು ಮಾಡಿದರು.  ಜ.8 ರಂದು ಕಲಾಕ್ಷೇತ್ರದ ನವೀಕರಣದ ಕುರಿತು ಚರ್ಚಿಸಲು ಕನ್ನಡ ಭವನದಲ್ಲಿ ರಂಗಕರ್ಮಿಗಳ ಸಮಾಲೋಚನಾ ಸಭೆ ಕರೆದರು.

ಸಭೆಯಲ್ಲಿ ಭಾಗವಹಿಸಿದ ಅನುಭವಿ ರಂಗಕರ್ಮಿಗಳು ” ಕಲಾಕ್ಷೇತ್ರಕ್ಕೆ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅಗತ್ಯವಿಲ್ಲ. ಅಳವಡಿಸಿದರೂ ಅದು ಸೂಕ್ತವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಸಿ ಬೇಕೇಬೇಕೆಂದೇನಿಲ್ಲ. ತಿಂಗಳಿಗೆ ಎರಡು ಮೂರು ದಿನ ನಡೆಯಬಹುದಾದ ಸರಕಾರಿ ಕಾರ್ಯಕ್ರಮಗಳಿಗೋಸ್ಕರ ಅಷ್ಟೊಂದು ಹಣ ಖರ್ಚು ಮಾಡಿ ಹವಾನಿಯಂತ್ರಣ ವ್ಯವಸ್ಥೆ ಮಾಡಿಸುವುದು ಸೂಕ್ತವಲ್ಲ” ಎಂದು ಸಚಿವರಿಗೆ ತಿಳಿಸಿದರು. “ಅಗತ್ಯವಿದ್ದರೆ ಮುಂದಿನ ಮೂರು ಸಾಲಿನ ಖುರ್ಚಿಗಳನ್ನು ಬದಲಾಯಿಸಿದರೆ ಸಾಕು. ಎಲ್ಲವನ್ನು ಬದಲಾಯಿಸುವ ಅಗತ್ಯವಿಲ್ಲ ಹಾಗೂ ಅಗತ್ಯವಾಗಿ ಬೇಕಾಗಿರುವ ಬೆಳಕು ಹಾಗೂ ಧ್ವನಿವರ್ಧಕ ಪರಿಕರಗಳನ್ನು ಸರಿಪಡಿಸಿ ಮತ್ತು ಬದಲಾಯಿಸಿ ಕೊಡಿ” ಎಂದು ಸಚಿವರಿಗೆ ಮನವಿ ಮಾಡಲಾಯ್ತು. ” 24 ಕೋಟಿ ವೆಚ್ಚ ಬೇಕಾಗಿಲ್ಲ, ಸಂಪೂರ್ಣ ಆಧುನೀಕರಣ ಅಗತ್ಯವಿಲ್ಲ. ಬೇಕಾಗಿರುವಷ್ಟು ಮಾತ್ರ ಸರಿಪಡಿಸಿ ಬದಲಾಯಿಸಿಕೊಟ್ಟರೆ ಸಾಕು” ಎನ್ನುವುದೇ ಸಭೆಯಲ್ಲಿರುವ ಬಹುತೇಕ ರಂಗಕರ್ಮಿಗಳ ಅಭಿಪ್ರಾಯವಾಗಿತ್ತು.

ಆಧುನಿಕೀಕರಣ ಮಾಡಿದ ನಂತರ ಮುಂದೆ ಬರುವ ಸರಕಾರ ಅದಕ್ಕೆ ತಕ್ಕಂತೆ ಬಾಡಿಗೆ ಹೆಚ್ಚಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ದಿನಕ್ಕೆ 2500ರೂ. ಬಾಡಿಗೆಗೆ ಸಿಗುತ್ತಿದ್ದ ಕಲಾಕ್ಷೇತ್ರದ ಪಕ್ಕದ ಪುರಭವನ ನವೀಕರಣದ ನಂತರ 50 ಸಾವಿರ ಬಾಡಿಗೆ ಹೆಚ್ಚಳವಾಗಿ ರಂಗಭೂಮಿಯವರ ಕೈಗೆಟುಕದಂತಾದಂತೆ ಆಧುನಿಕೀಕರಣಗೊಂಡ ಕಲಾಕ್ಷೇತ್ರವೂ ಆಗುವುದಿಲ್ಲವೆನ್ನುವುದಕ್ಕೆ ಏನು ಖಾತರಿ? ಎನ್ನುವುದು ಸಭೆಯಲ್ಲಿದ್ದ ರಂಗಕರ್ಮಿಗಳ ಸಂದೇಹವಾಗಿತ್ತು. ಅದಕ್ಕೆ ಸಚಿವರಿಂದ ಯಾವುದೇ ಖಾತರಿ ಸಿಗದೇ ಹೋಯಿತು.

ಎಲ್ಲರ ಅಭಿಪ್ರಾಯ ತಿಳಿದ ಸಚಿವರು ಕೊನೆಗೆ ತಮ್ಮ ಅಭಿಪ್ರಾಯ ಹೇಳಿದರು. “ಸಚಿವನಾಗಿ ಎಲ್ಲರೂ ಗುರುತಿಸುವಂತಹ ಕೆಲಸ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ನೀವೆಲ್ಲಾ ಒಪ್ಪಿದ್ದರೆ ಕಲಾಕ್ಷೇತ್ರ ನವೀಕರಣ ಮಾಡಬಹುದಾಗಿತ್ತು. ಆದರೆ ವಿರೋಧ ಬಂದಿರುವುದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತಿದ್ದೇನೆ. ಕಲಾಕ್ಷೇತ್ರ ಈಗಿರುವಂತೆ ಯಥಾಸ್ಥಿತಿಯಲ್ಲಿ ಇರಲಿ” ಎಂದರು. ಕೊನೆಗೆ ರಂಗಕರ್ಮಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಅಗತ್ಯವಾದ ಲೈಟಿಂಗ್ಸ್ ಮತ್ತು ಸೌಂಡ್ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವರು ಎಲ್ಲರಿಗೂ ಕೈಮುಗಿದು ನಿರ್ಗಮಿಸಿದರು.

ಸಭೆಗೆ ಬರುವ ಮುಂಚೆಯೇ ಸಚಿವರು ನಿರ್ಧರಿಸಿಯೇ ಬಂದಿದ್ದರು. ಸಭೆಯಲ್ಲಿ ಬಹುಮತದ ತೀರ್ಮಾನ ಯಾವುದೇ ರೀತಿ ಬಂದರೂ ಅದು ಅವರಿಗೆ ಒಪ್ಪಿಗೆಯಾಗಿತ್ತು. ಎಲ್ಲರೂ ಸಚಿವರ ಯೋಜನೆಯನ್ನು ಬೆಂಬಲಿಸಿ 24 ಕೋಟಿಯ ಯೋಜನೆ ಬೇಕೆ ಬೇಕೆಂದಿದ್ದರೆ ಸಚಿವರ ಬಾಯಿಗೆ ಲಡ್ಡು ಬಿದ್ದಂತಾಗುತ್ತಿತ್ತು. ರಂಗಕರ್ಮಿಗಳ ಒಕ್ಕೊರಲಿನ ಒತ್ತಾಯದ ಮೇರೆಗೆ ಕಲಾಕ್ಷೇತ್ರವನ್ನು  ಆಧುನೀಕರಣ ಮಾಡಲಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದರು ಹಾಗೂ ಮುಖ್ಯ ಮಂತ್ರಿಗಳ ಬಳಿ ಹೋಗಿ ಈ ಯೋಜನೆಗೆ ಸಾಂಸ್ಕೃತಿಕ ಲೋಕದವರ ಸಂಪೂರ್ಣ ಬೆಂಬಲವಿದೆ ಅನುಮೋದನೆ ಕೊಡಿ ಎಂದು ಆಗ್ರಹಿಸುತ್ತಿದ್ದರು. ಆ ಮೂಲಕ ಯಾವುದ್ಯಾವುದೋ ಹಿಡನ್ ಅಜೆಂಡಾಗಳನ್ನು ಈಡೇರಿಸಿಕೊಳ್ಳುವ ಜೊತೆಗೆ ಕನಸಿನ ಯೋಜನೆಯನ್ನು ನನಸಾಗಿಸಿದ ಕೀರ್ತಿಯೂ ತಂಗಡಿಯವರ ಕಿರೀಟಕ್ಕೆ ಸೇರುತ್ತಿತ್ತು.

ಕಲಾಕ್ಷೇತ್ರದ ಆಧುನೀಕರಣಕ್ಕೆ ಸಭೆಯಲ್ಲಿ ವಿರೋಧ ಬಂದಿದ್ದೂ ಸಚಿವರ ಕಳಂಕ ನಿವಾರಣೆಗೆ ಹಾದಿ ಸುಗಮವಾದಂತಾಯಿತು. “ಅಯ್ಯೋ ನಾನೇನು ಮಾಡಲಿ ಹೇಳಿ. 24 ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರವನ್ನು ಅತ್ಯಾಧುನಿಕ ರಂಗಮಂದಿರವಾಗಿ ಪರಿವರ್ತಿಸಬೇಕೆಂಬುದು ನನ್ನ ಉದ್ದೇಶವಾಗಿತ್ತು. ಆದರೆ ರಂಗಕರ್ಮಿಗಳೇ ಅದಕ್ಕೆ ಅಡ್ಡಗಾಲು ಹಾಕಿದರು. ನನ್ನ ಕನಸನ್ನು ನುಚ್ಚುನೂರು ಮಾಡಿದರು. ಅದಕ್ಕಾಗಿ ಈ ಮಹತ್ತರವಾದ ಯೋಜನೆಯನ್ನು ನಿಲ್ಲಿಸುತ್ತಿರುವೆ” ಎಂದು ಸಚಿವರು ತಮಗಾದ ಮುಖಭಂಗಕ್ಕೆ ಸಮರ್ಥನೆ ಕೊಡಲು ರಂಗಕರ್ಮಿಗಳ ನಿರಾಕರಣೆಯನ್ನೆ ಬಳಸಿಕೊಳ್ಳಲು ಅನುಕೂಲವಾಯ್ತು.

ರಾಜಕಾರಣಿಗಳೇ ಹೀಗೆ. ಬೆಟ್ಟಕ್ಕೆ ಕೂದಲು ಕಟ್ಟಿ ಎಳೆಯುವ ಯೋಜನೆ ರೂಪಿಸುವುದು. ಬಂದರೆ ಬೆಟ್ಟ ಹೋದರೆ ಕೂದಲು ಎನ್ನುವಂತವರು. ಮಾನ್ಯ ಸಚಿವರಿಗೆ ತಮ್ಮ ಹೆಸರು ರಂಗಭೂಮಿಯ ಚರಿತ್ರೆಯಲ್ಲಿ ಉಳಿಯಲೇಬೇಕೆಂಬ ಉದ್ದೇಶವಿದ್ದರೆ ತಾಲೂಕಿಗೊಂದು ಇಲ್ಲವೇ ಜಿಲ್ಲೆಗೊಂದು ಸುಸಜ್ಜಿತ ಕಿರುರಂಗಮಂದಿರ ಕಟ್ಟಿಸಿ ಕೊಡಲಿ. ಅಲ್ಲಿಯ ಜನತೆ ನೆನಪಿಸಿಕೊಳ್ಳುತ್ತಾರೆ. ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿಯಾದರೂ ಕಿರುರಂಗಮಂದಿರ ಕಟ್ಟಿಸಿ ಕೊಡಲಿ ಬೆಂಗಳೂರಿಗರು ಸ್ಮರಿಸಿಕೊಳ್ಳುತ್ತಾರೆ. ಇಲ್ಲವೇ ಹಿಂದಿನ ಸರಕಾರ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಂಗಮಂದಿರ ಕಟ್ಟಲು ಯೋಜನೆ ರೂಪಿಸಿ ಜಾಗವನ್ನೂ ಗುರಿತಿಸಿದೆ. ಅದಕ್ಕೆ ತಲಾ  20 ಕೋಟಿಯಂತೆ ಒಟ್ಟು 80 ಕೋಟಿ ಹಣವನ್ನು ಬಜೆಟ್ಟಿನಲ್ಲಿ ಮೀಸಲಾಗಿರಿಸಿದ್ದಾರೆ. ಘೋಷಿತ ಜಾಗ, ಹಣ ಎರಡನ್ನೂ ಬಳಸಿಕೊಂಡು ನಾಲ್ಕೂ ರಂಗಮಂದಿರಗಳನ್ನು ನಿರ್ಮಿಸಿಕೊಟ್ಟು ಬೆಂಗಳೂರಿನ ಸಾಂಸ್ಕೃತಿಕ ಲೋಕದ ಚರಿತ್ರೆಯಲ್ಲಿ ತಮ್ಮ ಹೆಸರನ್ನು ದಾಖಲಿಸಲಿ. ಅದು ಬಿಟ್ಟು ಈಗಾಗಲೇ ಪ್ರಸಿದ್ಧವಾಗಿರುವ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡಿದರೆ ಯಾರು ತಾನೇ ಭವಿಷ್ಯದಲ್ಲಿ ಈ ಸಚಿವರ ಹೆಸರನ್ನು ನೆನಪಿಸಿಕೊಳ್ಳಲು ಸಾಧ್ಯ? ಈಗಾಗಲೇ ಮೂರು ಸಲ ಕಲಾಕ್ಷೇತ್ರ ನವೀಕರಣವಾಗಿದೆ. ಅಷ್ಟೂ ಸಲ ದೀರ್ಘಕಾಲ ನವೀಕರಣಕ್ಕೆ ರಂಗಮಂದಿರ ಮುಚ್ಚಿದ್ದರಿಂದಾಗಿ ಹಾಗೂ ತಾಂತ್ರಿಕ ದೋಷಗಳಿಂದಾಗಿ ಸರಕಾರಕ್ಕೆ ಅಪಕೀರ್ತಿಯೇ ಬಂದಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article