ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಕುರಿತಂತೆ ಅವರ ಬಹುಕಾಲದ ಗೆಳೆಯ ನಾಗೇಶ್ ಕಾಳೇನಹಳ್ಳಿ ಅವರು ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದು, ನಿನ್ನೆ ಸಂಜೆ ನನ್ನ ಅನುಗಾಲದ ಗೆಳೆಯ ಅರದೇಶಹಳ್ಳಿ ವೆಂಕಟೇಶ್ ಕೆ. ಶಿವರಾಂ ಅವರು ಸೀರಿಯಸ್ಸಾಗಿದ್ದಾರೆ. ಹೆ಼ಚ್. ಸಿ. ಜಿ ಆಸ್ಪತ್ರೆಯಲ್ಲಿದ್ದಾರೆ ಎಂದರು. ಕೂಡಲೇ ನನ್ನ ಹಿರಿಯಣ್ಣ ಡಾ. ಸ್ವಾಮಿ ಅವರಿಗೆ ಫೋನ್ ಮಾಡಿದೆ. ಅವರ ವೈಧ್ಯಕೀಯ ಭಾಷೆ ನನಗೆ ಅರ್ಥವಾಯಿತು. ವೆಂಕಟೇಶ್ ಅವರಿಗೆ ಹೋಪ್ಸ್ ಇಲ್ಲವೆಂದು ಹೇಳಿದೆ. ಇಂದು ಬೆಳಿಗ್ಗೆ ಅವರು ಇನ್ನಿಲ್ಲವೆಂಬ ಸುದ್ಧಿ ಹೊರಬಿದ್ದಿದೆ. ಕೇವಲ ಹತ್ತನ್ನೆರಡು ಗಂಟೆಗಳ ಹಿಂದಿನ ಸೀರಿಯಸ್ ಎಂಬ ಸುದ್ದಿ ಮಲಗಿ ಏಳುವಷ್ಟರಲ್ಲಿ ‘ಇನ್ನಿಲ್ಲ’ ಎಂದಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ
ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಐಎಎಸ್ ಬರೆದು ಭಾರತೀಯ ಆಡಳಿತಾ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದ ಹಾಗೂ ‘ಬಾ ನಲ್ಲೆ ಮಧು ಚಂದ್ರಕೆ’ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾಗಿದ್ದ ಕೆ. ಶಿವರಾಮ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಎಚ್ ಸಿಜಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂತಹ ಅವರು ಇಂದು ಚಿಕಿತ್ಸೆ ಫಲಿಸದೇ ಇನ್ನಿಲ್ಲವಾಗಿದ್ದಾರೆ.