Thursday, July 25, 2024

ಹಿಮಾಚಲ: ಅಡ್ಡ ಮತದಾನ ಮಾಡಿದ್ದ ಆರು ಕಾಂಗ್ರೆಸ್‌ ಶಾಸಕರಿಗೆ ಅನರ್ಹತೆಯ ಶಿಕ್ಷೆ

Most read

ಶಿಮ್ಲಾ: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಅಡ್ಡಮತದಾನ ಮಾಡಿದ್ದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್‌ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಲಾಗಿದೆ.

ಕಾಂಗ್ರೆಸ್‌ ಚಿಹ್ನೆಯಡಿ ಗೆದ್ದಿದ್ದ ಆರು ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮೀರಿದ್ದು, ಈ ಆರೂ ಮಂದಿಯನ್ನು ಈ ಕ್ಷಣದಿಂದ ಜಾರಿಗೆ ಬರುವಂತೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್‌ ಕುಲದೀಪ್‌ ಸಿಂಗ್‌ ಪಥಾನಿಯಾ ತಿಳಿಸಿದ್ದಾರೆ.

ರಾಜ್ಯಸಭಾ ಚುನಾವಣೆಯ ನಂತರ ಹಿಮಾಚಲ ಪ್ರದೇಶದ ರಾಜಕಾರಣ ದಿನಕ್ಕೊಂದು ಬಣ್ಣ ಪಡೆಯುತ್ತಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಭಿಷೇಕ್‌ ಮನು ಸಿಂಗ್ವಿ ಆರು ಕಾಂಗ್ರೆಸ್‌ ಶಾಸಕರು ಮತ್ತು ಕಾಂಗ್ರೆಸ್‌ ಸರ್ಕಾರವನ್ನು ಬೆಂಬಲಿಸುತ್ತಿದ್ದ ಮೂವರು ಪಕ್ಷೇತರ ಸದಸ್ಯರ ಅಡ್ಡಮತದಾನದಿಂದ ಸೋಲು ಅನುಭವಿಸಿದರು.

ಕಾಂಗ್ರೆಸ್‌ ಶಾಸಕರ ಅಡ್ಡಮತದಾನದಿಂದಾಗಿ ಸುಕ್ವಿಂದರ್‌ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಪಾಯಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಆರು ಶಾಸಕರ ಅನರ್ಹತೆ ಮಹತ್ವ ಪಡೆದುಕೊಂಡಿದೆ.

ಶಾಸಕರಾದ ಸುಧೀರ್‌ ಶರ್ಮ (ಧರ್ಮಶಾಲಾ), ರಾಜಿಂದರ್‌ ರಾಣಾ (ಸುಜನ್‌ ಪುರ), ಇಂದರ್‌ ದತ್‌ ಲಖಾನ್‌ ಪಾಲ್‌ (ಬಡ್ಸಾರ್)‌, ರವಿ ಠಾಕೂರ್‌ (ಲಾಹುಲ್‌ ಸ್ಪಿಟಿ), ಚೈತನ್ಯ ಶರ್ಮ )ಗಾಗ್ರೆಟ್‌ ಮತ್ತು ದೇವೇಂದರ್‌ ಭುಟ್ಟೋ (ಕುಟ್ಲೆಹಾರ್)‌ ಸ್ಪೀಕರ್‌ ಆದೇಶದಿಂದಾಗಿ ತಮ್ಮ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ.

68 ಸದಸ್ಯ ಸ್ಥಾನದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ 40 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 25 ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಶಾಸಕರು ಕಾಂಗ್ರೆಸ್‌ ಸರ್ಕಾರವನ್ನು ಬೆಂಬಲಿಸುತ್ತಿದ್ದರು. ಇದೀಗ ಆರು ಶಾಸಕರ ಅನರ್ಹತೆಯಿಂದಾಗಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 34ಕ್ಕೆ ಇಳಿದಿದೆ. ಆರು ಶಾಸಕರ ಅನರ್ಹತೆಯಿಂದಾಗಿ ವಿಧಾನಸಭೆಯ ಶಾಸಕರ ಸಂಖ್ಯೆ 62 ಕ್ಕೆ ಇಳಿದಿದ್ದು, ಬಹುಮತಕ್ಕಾಗಿ 32 ಸದಸ್ಯರು ಬೇಕಾಗುತ್ತದೆ.

More articles

Latest article