ಹಿರಿಯ ಪತ್ರಕರ್ತ ವಸಂತ ನಾಡಿಗೇರ ವಿಧಿವಶ

Most read

ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಹೆಡ್ಡಿಂಗ್‌ಗಳ ಮೂಲಕವೇ ಜನಪ್ರಿಯರಾಗಿದ್ದ ಹಿರಿಯ ಪತ್ರಕರ್ತ ವಸಂತ ನಾಡಿಗೇರ (59) ಬೆಂಗಳೂರಿನಲ್ಲಿ ಸೋಮವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾದರು.

ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ. ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ. ವಸಂತ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಮಣಿಪಾಲ್ (ಹಿಂದಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ) ಯಿಂದ ಮನೆಗೆ ಕರೆದೊಯ್ಯಲಾಗಿದೆ.ಎರಡು ಗಂಟೆಯ ವೇಳೆಗೆ ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಅವರ ಸಹೋದರ ವಿನಾಯಕ ನಾಡಿಗೇರ ತಿಳಿಸಿದ್ದಾರೆ.

ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದವರು.

ರಸಾಯನ ಶಾಸ್ತ್ರ ಪದವೀಧರರಾದ ವಸಂತ ನಾಡಿಗೇರ ಅವರು ಪತ್ರಿಕೋದ್ಯಮದ ಸೆಳೆತಕ್ಕೆ ಒಳಗಾಗಿ ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟದಿಂದ ವೃತ್ತಿ ಜೀವನ ಆರಂಭಿಸಿದವರು.

ಆನಂತರ ಕನ್ನಡ ಪ್ರಭ ಸೇರಿ ಅಲ್ಲಿ ಒಂದೂವರೆ ದಶಕ ಕಾಲ ಕೆಲಸ ಮಾಡಿದರು. ಬಳಿಕ ವಿಜಯಕರ್ನಾಟಕ ಪತ್ರಿಕೆಯ ಆರಂಭದಿಂದಲೂ ಮುಖ್ಯ ಉಪಸಂಪಾದಕರಾಗಿ ಸೇರಿ ಅಲ್ಲಿಯೇ ಬಹುಕಾಲ ಸುದ್ದಿಸಂಪಾದಕರಾಗಿದ್ದರು. ಬಳಿಕ ಸಂಪಾದಕರೂ ಆದರು. ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿ ಸದ್ಯ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.

ವಸಂತ ನಾಡಿಗೇರ ಅವರು ಭಾಷೆಯ ಮೇಲೆ ಹಿಡಿತವಿತ್ತು. ಎಂತಹ ವರದಿಗೂ ಜನ ಮೆಚ್ಚುವಂತ ಶೀರ್ಷಿಕೆ ನೀಡುತ್ತಿದ್ದರು. ವಿಜಯಕರ್ನಾಟಕ ಪತ್ರಿಕೆಯಲ್ಲಿ ಅವರು ನೀಡಿದ ಶೀರ್ಷಿಕೆಗಳು ಮನೆ ಮಾತಾಗಿದ್ದವು. ಉತ್ತಮ ಬರಹಗಾರರೂ ಆಗಿದ್ದ ವಸಂತ ನಾಡಿಗೇರ ಅವರು ಕನ್ನಡ ಪ್ರಭದಲ್ಲಿ ಆರ್ಥಿಕ ವಿಶ್ಲೇಷಣೆ ಬರೆಯುತ್ತಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ:

ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ‘ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರ ನಿಧನವಾರ್ತೆ ನೋವುಂಟುಮಾಡಿದೆ. ವಿಜಯ ಕರ್ನಾಟಕದಲ್ಲಿ ಹಿರಿಯ ಸಹಾಯಕ ಸಂಪಾದಕರಾಗಿ, ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ, ಹೀಗೆ ಹಲವು ದಶಕಗಳಿಂದ ಪತ್ರಿಕಾರಂಗದಲ್ಲಿ ಸೇವೆಸಲ್ಲಿಸುತ್ತಿದ್ದ ವಸಂತ ನಾಡಿಗೇರ ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು’ ಎಂದು ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ಹೇಳಿದ್ದಾರೆ.

More articles

Latest article