ಮಾಧ್ಯಮಗಳು ಮತ್ತು ಪತ್ರಕರ್ತರನ್ನು ನಾಯಿಗಳಿಗೆ ಹೋಲಿಕೆ ಮಾಡಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ ಕೂಡಲೇ ಅವರು ಬೇಷರತ್ತಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಮತ್ತು ಸಾರ್ವಜನಿಕ ಚುನಾವಣೆಗಳಿಂದ ದೂರ ಇಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯು ಜೆ) ಒತ್ತಾಯಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಪ್ರತ್ರ ಬರೆದಿದ್ದಾರೆ.
ಪತ್ರದಲ್ಲಿ, ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನ್ನಾಡುತ್ತಾ ಆನೆ ಹೋಗಿದ್ದೇ ದಾರಿ ಎಂಬಂತೆ ನಾವು ಇರಬೇಕು. ಮಾಧ್ಯಮಗಳು ಏನು ಬೇಕಾದರೂ ಬರೆದುಕೊಳ್ಳಲಿ. ಆನೆಗಳು ಹೋಗುವಾಗ ನಾಯಿಗಳು ಬೊಗಳುವುದು ಸಹಜ ಎಂದು ಮಾಧ್ಯಮದವರನ್ನು ಹೀಯಾಳಿಸಿರುವುದು ಖಂಡನೀಯ. ಕೂಡಲೇ ಅವರು ಬೇಷರತ್ತಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಕೆಯುಡಬ್ಲ್ಯು ಜೆ ಆಗ್ರಹಿಸಿದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವದ ಸ್ಥಾನವಿದೆ. ತಮಗೆ ಬೇಕಾದಾಗ ಮಾಧ್ಯಮವನ್ನು ಹೊಗಳುವುದು ಬೇಡವೆನಿಸಿದಾಗ ತೆಗಳುವುದು ಕೆಲ ರಾಜಕಾರಣಿಗಳಿಗೆ ಪರಿಪಾಠವಾಗಿದೆ. ಅನಂತ ಕುಮಾರ ಹೆಗಡೆ ಅವರು ಜವಾಬ್ದಾರಿಯುತ ಸಂಸದರಾಗಿದ್ದು, ಆಗಿಂದ್ದಾಗೆ ಮನಸೋ ಇಚ್ಛೆ ಮಾತನಾಡುತ್ತಿರುವುದಲ್ಲದೆ ಮಾಧ್ಯಮವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಮತ್ತು ನಾಲಿಗೆ ಹಿಡಿತವಿಲ್ಲದ ಇಂತವರನ್ನು ಸಾರ್ವಜನಿಕ ಚುನಾವಣೆಗಳಿಂದ ದೂರ ಇಡಬೇಕು ಎಂದು ಕೆಯುಡಬ್ಲ್ಯು ಜೆ ಒತ್ತಾಯಿಸಿದೆ.