‘ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಚಳವಳಿ ಆರಂಭಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಜುಲೈ 1ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದು ಇದಕ್ಕೆ ಪೂರಕವಾಗಿ ಸತತ 24 ಗಂಟೆಗಳ ಎಕ್ಸ್ (ಟ್ವಿಟರ್) ಅಭಿಯಾನಕ್ಕೆ ಕರೆ ನೀಡಲಾಗಿದೆ.
ಜೂನ್ 30 ರ ಭಾನುವಾರ ಸಂಜೆ 5 ಗಂಟೆಗೆ ಆರಂಭವಾಗುವ ಅಭಿಯಾನ ಜುಲೈ 1 ರ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಕನ್ನಡ ನಾಡಿನ ಯುವಪೀಳಿಗೆಯ ಭವಿಷ್ಯಕ್ಕಾಗಿ ಕನ್ನಡಿಗರಿಗೇ ಉದ್ಯೋಗ ಮೀಸಲಿರಿಸುವ ಸಮಗ್ರ ಕಾಯ್ದೆ ರೂಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕರೆ ನೀಡಿದ್ದಾರೆ.
ಜುಲೈ 1 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ದಿನ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಸಾವಿರಾರು ಕರವೇ ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ.
ಧರಣಿಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರವೇ ಮುಖಂಡರು ಹಕ್ಕೊತ್ತಾಯಗಳನ್ನು ಸಲ್ಲಿಸಲಿದ್ದಾರೆ.