ಕರ್ನಾಟಕ ಪ್ರಾದೇಶಿಕ ಪಕ್ಷವಾಗಿರುವ ಜನತಾ ದಳ (ಜಾತ್ಯತೀತ) ಜೆಡಿ(ಎಸ್) ಪಕ್ಷವು ಕಳೆದ 6 ವರ್ಷಗಳ ಅವಧಿಯಲ್ಲಿ ಸುಮಾರು 90 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸಿದೆ. ಮುಖ್ಯ ವಿಷಯವೇನೆಂದರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲೇ ಶೇ.40 ರಷ್ಟು ದೇಣಿಗೆ ಚುನಾವಣಾ ಬಾಂಡ್ ಮೂಲಕ ಬಂದಿದೆ ಎಂದು ನಿನ್ನೆ ಚುನಾವಣಾ ಅಯೋಗ ಬಿಡುಗಡೆ ಮಾಡಿದ ದಾಖಲೆಯಲ್ಲಿ ಬಹಿರಂಗವಾಗಿದೆ.
2019ರಿಂದ ಇಲ್ಲಿಯವರೆಗೂ ಜೆಡಿಎಸ್ ಒಟ್ಟು 89.8 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ರೂಪದಲ್ಲಿ ಸಂಗ್ರಹ ಮಾಡಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅದರಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲೇ ಜೆಡಿಎಸ್ ಪಕ್ಷಕ್ಕೆ ಹಲವು ಕಂಪನಿಗಳು 35.5 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ್ದಾರೆ ಎಂಬುದು ದಾಖಲೆ ಸಮೇತ ಬಹಿರಂಗವಾಗಿದೆ.
2018ರಮೇ ತಿಂಗಳಿನಿಂದ 2019ರ ಏಪ್ರಿಲ್ ತಿಂಗಳವರೆಗೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆ ಸಮಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಏಪ್ರಿಲ್ ತಿಂಗಳಲ್ಲೇ ಜೆಡಿಎಸ್ ಪಕ್ಷಕ್ಕೆ ಅತಿ ಹೆಚ್ಚು ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದಿರುವುದು ಸ್ಪಷ್ಟವಾಗಿ ಕಾಣಬಹುದು.
2019 ಏಪ್ರಿಲ್ ನಿಂದ 2023 ಏಪ್ರಿಲ್ ವರೆಗೂ ಜೆಡಿಎಸ್ ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದಿದ್ದು, ಇಲ್ಲಿಯವರೆಗೂ ಒಟ್ಟು 89.8 ಕೋಟಿ ರೂ. ಎನ್ನಲಾಗಿದೆ. ಹೊಸ ವರದಿಗಳು ಬಿಡುಗಡೆಯಾಗಿದ್ದು ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಜೆಡಿಎಸ್ ಪಕ್ಷಕ್ಕೆ ದೇಣಿಗೆ ಕೊಟ್ಟಿರುವ ವ್ಯಕ್ತಿ ಹಾಗೂ ಸಂಸ್ಥೆಗಳ ಪೈಕಿ, ಚುನಾವಣಾ ಬಾಂಡ್ ಮೂಲಕ ಅತೀ ಹೆಚ್ಚು ದೇಣಿಗೆ ನೀಡಿದ ಸಂಸ್ಥೆ ಮೇಘಾ ಎಂಜಿನಿಯರಿಂಗ್ & ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್. ಜೆಡಿಎಸ್ ಅಧಿಕಾರದಲ್ಲಿ ಇದ್ದ ವೇಳೆಯಲ್ಲೇ ಈ ಸಂಸ್ಥೆ 10 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ರೂಪದಲ್ಲಿ ದೇಣಿಗೆ ನೀಡಿದೆ. ನಂತರ 2023ರಲ್ಲಿ ಸುಮಾರು 40 ಕೋಟಿ ದೇಣಿಗೆ ನೀಡಿದೆ ಎಂಬುದು ತಿಳಿದುಬಂದಿದೆ. 2018ರಲ್ಲಿ ಎಂಬೆಸಿ ಗ್ರೂಪ್ ಸಂಸ್ಥೆ ಜೆಡಿಎಸ್‌ಗೆ 22 ಕೋಟಿ ರೂ. ದೇಣಿಗೆ ನೀಡಿದೆ.
ನಾರಾ ಕನ್‌ಸ್ಟ್ರಕ್ಷನ್ & ರಿತ್ವಿಕ್ ಪ್ರಾಜೆಕ್ಟ್ ಸಂಸ್ಥೆಗಳು ತಲಾ 10 ಕೋಟಿ ರೂ. ದೇಣಿಗೆ ನೀಡಿವೆ. ಐಎಲ್‌ಎಬಿಎಸ್ ಎಚ್‌ವೈಡಿ ಟೆಕ್ನಾಲಜೀಸ್ ಹಾಗೂ ಕೆಸಿಆರ್ ಎಂಟರ್ ಪ್ರೈಸಸ್ ಸಂಸ್ಥೆಗಳು ತಲಾ 5 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿವೆ. ಇದಲ್ಲದೇ, ಶಂಕರ ನಾರಾಯಣ ಕನ್‌ಸ್ಟ್ರಕ್ಷನ್, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ಟೆಕ್ನಾಲಜೀಸ್, ಶಶಿ ಎಕ್ಸ್‌ಪೋರ್ಟ್ಸ್, ಅಮರ ರಾಜಾ ಗ್ರೂಪ್ಸ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ಗಳು ಜೆಡಿಎಸ್‌ಗೆ ಅಲ್ಪ ಪ್ರಮಾಣದ ದೇಣಿಗೆ ನೀಡಿದೆ.
ರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲು ಸ್ಥಾಪಿಸಲಾದ (ಎಸ್‌ಪಿವಿ) ಕಂಪನಿಗಳು, ಒಟ್ಟಾಗಿ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ರೂ 13.5 ಕೋಟಿ ದೇಣಿಗೆ ನೀಡಿವೆ.
ಅಶೋಕ ಮುಧೋಳ ನಿಪ್ಪಾಣಿ ರೋಡ್ಸ್ ಲಿಮಿಟೆಡ್ (AMNRL) 5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ , ಅಶೋಕ ಬಾಗೇವಾಡಿ ಸೌಂದತ್ತಿ ರೋಡ್ಸ್ ಲಿಮಿಟೆಡ್ (ABSRL) 4 ಕೋಟಿ ರೂಪಾಯಿ ಬಾಂಡ್, ಅಶೋಕ ಹುನಗುಂದ ತಾಳಿಕೋಟ್ ರೋಡ್ಸ್ ಲಿಮಿಟೆಡ್ (AHTRL) 4.5 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.