ಎಂಇಎಸ್ ಪುಂಡರು ಕನ್ನಡದ ತಂಟೆಗೆ ಬಂದ್ರೆ ಸರಿ ಇರಲ್ಲ: ಸಚಿವ ತಂಗಡಗಿ ಎಚ್ಚರಿಕೆ

Most read

ಬೆಂಗಳೂರು: ಎಂಇಎಸ್ ಪುಂಡರು ಕನ್ನಡದ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದೇ ಮಂಗಳವಾರ ತಮ್ಮ ಗೃಹ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕದ ನೀರು, ಗಾಳಿ, ಅನ್ನ ತಿಂದು ಮತ್ತೊಂದು ಭಾಷೆಯ ಬಗ್ಗೆ ಬಹಳ ಪ್ರೀತಿ ವ್ಯಾಮೋಹ ತೋರಿಸಿದರೆ ಮುಂದೆ ಪರಿಣಾಮ ನೆಟ್ಟಗಿರಲ್ಲ ಎಂದು ಕಿಡಿಕಾರಿದರು.

ಎಂಇಎಸ್ ಪುಂಡಾಟಿಕೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಬಗ್ಗೆ ಚರ್ಚೆ ಮಾಡುತ್ತೇವೆ. ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅಂತ ಹೇಳಿದ್ದೇವೆ. ಕನ್ನಡದ ವಿಚಾರಕ್ಕೆ ಬಂದರೆ ನಿಮಗೆ ಸರಿಯಾದ ಶಿಸ್ತು ಕಲಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂದು ತೀಷ್ಣವಾಗಿ ಹೇಳಿದರು.‌

ಪುಂಡಾಟಿಕೆ ಹೀಗೆ ಮುಂದುವರೆದರೆ ಗೂಂಡಾ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕಾಗುತ್ತದೆ. ನಾವು ಕನ್ನಡಿಗರು ಬೇರೆ ಭಾಷೆಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಆದರೆ ಈ ರಾಜ್ಯದಲ್ಲಿ ವಾಸವಿರುವ ಅನ್ಯ ಭಾಷಿಕರು ಈ ನೆಲದ ಭಾಷೆ ಮತ್ತು ಕಾನೂನನ್ನು ಗೌರವಿಸಿ, ಪಾಲಿಸಬೇಕು ಎಂದರು.

ಕನ್ನಡಿಗರು ಪುಂಡಾಟ ನಡೆಸಲ್ಲ. ಕನ್ನಡಿಗರು ಆ ರೀತಿ ಮಾತ ಮಾಡೋಕೆ ನಿಂತರೆ, ನೀವ್ಯಾರು ಉಳಿಯಂಗಿಲ್ಲ ಹುಷಾರಾಗಿರಿ ಎಂದು ಎಂಇಎಸ್ ಪುಂಡರಿಗೆ ಎಚ್ಚರಿಕೆ ನೀಡಿದರು‌‌.

ಎಲ್ಲಾ ಮರಾಠಿಗರು ಈ ರೀತಿ ಮಾಡಲ್ಲ‌. ಕೆಲವೇ ಕೆಲವು ಪುಂಡರು ಈ ರೀತಿ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರ ಕೊಡುವ ಪರಿಸ್ಥಿತಿ ಬಂದಿದೆ, ಕೊಟ್ಟೆ ಕೊಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು‌‌.

ಕನ್ನಡ ಭಾಷೆ, ನೆಲ ಮತ್ತು ಜಲದ ವಿಚಾರದ ಬಗ್ಗೆ ಪ್ರತಿಯೊಬ್ಬರು ಧ್ವನಿ ಎತ್ತಬೇಕು. ಬೆಳಗಾವಿ ನಾಯಕರು ಈ ಬಗ್ಗೆ ಮಾತನಾಡಬೇಕು.‌ ನಾವು ಇಲ್ಲಿ ಹೇಳೋದಲ್ಲ, ಮರಾಠರ ಜಾಗದಲ್ಲೇ ನಿಂತು ಉತ್ತರ ಕೊಡುತ್ತೀವಿ. ನಮಗೆ ಯಾವುದೇ ಅಂಜಿಕೆ ಇಲ್ಲ. ಕನ್ನಡದ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.‌

ಈ ಹಿಂದೆ ಪ್ರತಿ ವರ್ಷ ಎಂಇಎಸ್ ನವರು ಕರಾಳ ದಿನಾಚರಣೆ ಆಚರಿಸುತ್ತಿದ್ದರು. ಅದಕ್ಕೆ ಕಡಿವಾಣ ಹಾಕಿದ್ದೇವೆ. ಮುಂದೆಯೂ ಕಡಿವಾಣ ಹಾಕುತ್ತೇವೆ ಎಂದರು.‌

More articles

Latest article