ಇಸ್ರೇಲ್ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಮಾಡಿರುವ ವಿಮರ್ಶಾತ್ಮಕ ಕಾಮೆಂಟ್‌ಗಳು ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ಮತ್ತು ಖಂಡನೆಗೆ ಗುರಿಯಾಗಿದ್ದು, ಹೊಸ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ. ಸೂಕ್ಷ್ಮ ಸಮಯದಲ್ಲಿ ಇಸ್ರೇಲ್ ಅಧಿಕಾರಿಗಳು, ಯುಎಸ್ ಸಂಸದರು ಮತ್ತು ತಜ್ಞರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆಸಿಫ್ ಅವರು ಎಕ್ಸ್ (X) “ಇಸ್ರೇಲ್ ಒಂದು ಕೆಟ್ಟ ಶಕ್ತಿ ಮತ್ತು ಮಾನವಕುಲಕ್ಕೆ ಶಾಪವಾಗಿದೆ. ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವಾಗಲೇ ಲೆಬನಾನ್‌ನಲ್ಲಿ ನರಮೇಧ ನಡೆಸಲಾಗುತ್ತಿದೆ. ಇಸ್ರೇಲ್‌ನಿಂದ ಅಮಾಯಕ ನಾಗರಿಕರನ್ನು ಕೊಲ್ಲಲಾಗುತ್ತಿದೆ; ಮೊದಲು ಗಾಜಾ, ನಂತರ ಇರಾನ್ ಮತ್ತು ಈಗ ಲೆಬನಾನ್‌ನಲ್ಲಿ ರಕ್ತಪಾತವು ಅವಿರತವಾಗಿ ಮುಂದುವರಿಯುತ್ತಿದೆ. ಯುರೋಪಿಯನ್ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೇಸ್ಟಿನಿಯನ್ ಭೂಮಿಯಲ್ಲಿ ಈ ಕ್ಯಾನ್ಸರ್ ತರಹದ ರಾಷ್ಟ್ರವನ್ನು ಸೃಷ್ಟಿಸಿದ ಜನರು ನರಕದಲ್ಲಿ ಉರಿಯಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ.”ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಯುಎಸ್ ಮತ್ತು ಇರಾನ್ ನಡುವೆ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ಮಹತ್ವದ ರಾಜತಾಂತ್ರಿಕ ಮಾತುಕತೆಗಳನ್ನು ಆಯೋಜಿಸಲು ಕೇವಲ 50 ಗಂಟೆಗಳಿಗಿಂತ ಕಡಿಮೆ ಸಮಯವಿರುವಾಗ ಈ ರೀತಿಯಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಸುದ್ದಿ ಮಾಡಿದ್ದಾರೆ . ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಕಚೇರಿ, ” ಇಸ್ರೇಲ್ ಅನ್ನು ನಿರ್ಣಾಮ ಮಾಡಲು ಪಾಕಿಸ್ತಾನ ರಕ್ಷಣಾ ಸಚಿವರು ಕರೆ ನೀಡಿರುವುದು ಅತಿರೇಕದ ಮಾತು. ಇದು ಯಾವುದೇ ಸರ್ಕಾರದಿಂದ, ವಿಶೇಷವಾಗಿ ಶಾಂತಿಗಾಗಿ ತಟಸ್ಥ ಮಧ್ಯಸ್ಥಗಾರ ಎಂದು ಹೇಳಿಕೊಳ್ಳುವ ಸರ್ಕಾರದಿಂದ ಸಹಿಸಬಹುದಾದ ಹೇಳಿಕೆಯಲ್ಲ .” ಎಂದು ಹೇಳಿದೆ .
ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವ ಗಿಡಿಯಾನ್ ಸಾರ್ (Gideon Sa’ar) ಕೂಡ ಈ ಹೇಳಿಕೆಗಳನ್ನು ಟೀಕಿಸಿದ್ದು, “ಶಾಂತಿಯ ಮಧ್ಯಸ್ಥಿಕೆ ವಹಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರವೊಂದು ಹರಡುತ್ತಿರುವ ಇಂತಹ ಹಸಿಬಿಸಿ ಯಹೂದಿ ವಿರೋಧಿ ದ್ವೇಷಪೂರಿತ ಸುಳ್ಳುಗಳನ್ನು ಇಸ್ರೇಲ್ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಯಹೂದಿ ರಾಷ್ಟ್ರವನ್ನು ‘ಕ್ಯಾನ್ಸರ್’ ಎಂದು ಕರೆಯುವುದು ಮೂಲಭೂತವಾಗಿ ಅದರ ನಿರ್ನಾಮಕ್ಕೆ ಕರೆ ನೀಡಿದಂತೆಯೇ ಸರಿ. ತನ್ನ ವಿನಾಶಕ್ಕೆ ಶಪಥ ಮಾಡುವ ಭಯೋತ್ಪಾದಕರ ವಿರುದ್ಧ ಇಸ್ರೇಲ್ ಖಂಡಿತವಾಗಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ.” ಎಂದು ಅವರು ಹೇಳಿದ್ದಾರೆ.
ಈ ವಿವಾದವು ಮಧ್ಯಸ್ಥಿಕೆದಾರನಾಗಿ ಪಾಕಿಸ್ತಾನದ ಪಾತ್ರದ ಮೇಲೆ ನೆರಳು ಬೀರಿದೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ನಡುವೆ ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ಒಳಗೊಂಡ ಮಾತುಕತೆಗಳಿಗೆ ಇಸ್ಲಾಮಾಬಾದ್ ವೇದಿಕೆಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಇತರ ವಿಶ್ಲೇಷಕರಿಂದಲೂ ಟೀಕೆಗಳು ವ್ಯಕ್ತವಾಗಿವೆ. ಎಮಿಲಿ ಶ್ರೇಡರ್ ಅವರು ಈ ಹೇಳಿಕೆಗಳನ್ನು “ಯಹೂದಿ ವಿರೋಧಿ ಭಾಷಣ” ಎಂದು ಬಣ್ಣಿಸಿದ್ದಾರೆ ಮತ್ತು ಪಾಕಿಸ್ತಾನವು ನಿಷ್ಪಕ್ಷಪಾತ ನಟನಲ್ಲ, ಅವರಿಗೆ ಯಾವುದೇ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನದ ನಾಯಕತ್ವವು ನೀಡಿದ್ದ ಕದನ ವಿರಾಮ ಘೋಷಣೆಯ ಬಗ್ಗೆ ಗೊಂದಲ ಉಂಟಾಗಿತ್ತು. ಕದನ ವಿರಾಮವು “ಲೆಬನಾನ್ ಸೇರಿದಂತೆ ಎಲ್ಲೆಡೆ” ಅನ್ವಯಿಸುತ್ತದೆ ಎಂದು ಪಾಕಿಸ್ತಾನ ಸೂಚಿಸಿತ್ತು, ಆದರೆ ಇಸ್ರೇಲ್ ಇದನ್ನು ನಿರಾಕರಿಸಿ ಲೆಬನಾನ್ ಸೇರಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇಸ್ರೇಲ್ ಸೇನೆಯು ಹೆಜ್ಬೊಲ್ಲಾ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಈ ಘಟನೆಗಳ ಸರಣಿಯು ನಿರ್ಣಾಯಕ ಹಂತದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆದಾರನ ಪಾತ್ರಕ್ಕೆ ಧಕ್ಕೆ ತಂದಿದೆ ಎಂದು ಟೀಕಿಸಲಾಗಿದೆ. ವಿವಾದದ ನಡುವೆಯೂ ಇಸ್ಲಾಮಾಬಾದ್‌ನಲ್ಲಿ ಮಾತುಕತೆಗಾಗಿ ಸಿದ್ಧತೆಗಳು ಮುಂದುವರಿದಿವೆ ಮತ್ತು ಅಂತರಾಷ್ಟ್ರೀಯ ನಿಯೋಗಗಳು ಈಗಾಗಲೇ ಅಲ್ಲಿ ತಲುಪಿವೆ. ಈ ಮಾತುಕತೆಗಳು ದಶಕಗಳಲ್ಲೇ ಅತ್ಯಂತ ಮಹತ್ವದ ಯುಎಸ್-ಇರಾನ್ ತೊಡಗಿಸಿಕೊಳ್ಳುವಿಕೆ ಎಂದು ವಿವರಿಸಲಾಗುತ್ತಿದೆ.

