ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಪ್ರಳಯದಂಥ ಸ್ಥಿತಿ ನಿರ್ಮಾಣವಾಗಿಧ.
ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಯ, ಘಟಪ್ರಭಾ ತೀರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ತುಂಗಭದ್ರಾ ಜಲಾಶಯ ತುಂಬಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿರುವುದರಿಂದ ನದಿಪಾತ್ರದ ಜನರಿಗೆ ಎಚ್ಚರಿಕೆನೀಡಲಾಗಿದೆ.
ಹಾವೇರಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದೂ ಸಹ ರಜೆ ನೀಡಲಾಗಿದೆ. ಎರಡು ದಿನಗಳ ಕಾಲ ಹಾವೇರಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿಗಳಿಗೆ ರಜೆ ಘೋಷಿಸಿ ಹಾವೇರಿ ಜಿಲ್ಲಾಧಿಕಾರಿ ಮಹಂತೇಶ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ 6 ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಜುಲೈ16ರಂದು ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಲಕ್ಷ್ಮಣ್ ನಾಯ್ಕ್ ಹೋಟೆಲ್ ಅವಶೇಷ ಪತ್ತೆಯಾಗಿದೆ. ಗುಡ್ಡ ಕುಸಿತದಲ್ಲಿ ಹೋಟೆಲ್ ಕೊಚ್ಚಿ ಹೋಗಿ ನದಿ ದಡದ ಮಣ್ಣಿನಡಿ ಹೂತು ಹೋಗಿತ್ತು. ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಪೋಕ್ ಲೈನ್ ಮೂಲಕ ಮಣ್ಣು ತೆಗೆಯುತ್ತಿದ್ದಾರೆ. ಶಾಸಕ ಸತೀಶ್ ಸೈಲ್ ಸ್ಥಳದಲ್ಲೆ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಕಾವೇರಿ ಜಲಾನಯನದಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು KRS ಡ್ಯಾಂ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. KRS ಡ್ಯಾಂ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮ ಪ್ರವಾಹದ ಎಚ್ಚರಿಕೆ ನೀಡಿದೆ. KRS ಜಲಾಶಯ ಈಗಾಗಲೇ ತುಂಬಿದ್ದು, ಒಳಹರಿವು ಹೆಚ್ಚುತ್ತಲೇ ಇದೆ.