ಇಸ್ಲಾಮೋಫೋಬಿಯಾ ಅಂದ್ರೆ ಇದೇನಾ?

Most read

ಹಿಂದುತ್ವವಾದಿಗಳ ಕೃಪೆಯಿಂದಾಗಿ ಮತಾಂಧತೆ ಎನ್ನುವುದು ಪೊಲೀಸ್ ಇಲಾಖೆಯಲ್ಲೂ ನುಸುಳಿದೆ. ರಸ್ತೆಯಲ್ಲಿ ನಮಾಜು ಮಾಡಿದ್ದಕ್ಕೆ ಯಾವ ಸಾರ್ವಜನಿಕರೂ ತಮಗೆ ತೊಂದರೆಯಾಯ್ತು ಎಂದು ದೂರು ಕೊಡದೇ ಇದ್ದರೂ, ಆ ಮಸೀದಿಯ ಸುತ್ತ ಬರೀ ಮುಸ್ಲಿಮರೇ ವಾಸಿಸುತ್ತಿದ್ದರೂ, ಪೊಲೀಸ್ ಅಧಿಕಾರಿಯೇ ದೂರು ದಾಖಲಿಸಿಕೊಂಡು ಸಂಬಂಧ ಪಡದ ಸೆಕ್ಷನ್ ಗಳಲ್ಲಿ ಎಫ್ ಐ ಆರ್ ಬರೆದಿದ್ದು ಅಕ್ಷಮ್ಯ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಮಂಗಳೂರಿನಲ್ಲಿ  ಎಂಟತ್ತು ಜನ ಮುಸಲ್ಮಾನರು ರಸ್ತೆಯಲ್ಲಿ ನಮಾಜ್ ಮಾಡಿ ಘನಘೋರ ಅಪರಾಧ ಮಾಡಿದ್ದಾರೆ. ಅವರ ಮೇಲೆ ಕೇಸ್ ಹಾಕಿದ ಠಾಣಾಧಿಕಾರಿ ಅತ್ಯಂತ ಅದ್ಭುತ ಕೆಲಸ ಮಾಡಿದ್ದಾರೆ! ಹೀಗೆ ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದನ್ನು ಸಹಿಸಲಾಗದು. ಇಂತಹ ಅಸಹನೀಯ ಕೃತ್ಯಗಳನ್ನು ಈ ದೇಶವಾಸಿಗಳೆಲ್ಲಾ ವಿರೋಧಿಸಲೇ ಬೇಕು.

ಇದೇ ರೀತಿಯಲ್ಲಿ ಇನ್ನು ಮೇಲೆ ಯಾವುದೇ ಜಾತಿ ಮತ ಧರ್ಮದವರು ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ, ಪ್ರಾರ್ಥನೆ, ಜಾತ್ರೆ, ಯಾತ್ರೆ ಮೆರವಣಿಗೆಗಳನ್ನೆಲ್ಲಾ ಸಾರ್ವಜನಿಕರ ಹಿತಾಸಕ್ತಿಗೋಸ್ಕರ ಮಾಡಬಾರದು ಎಂದು ನಿರ್ಬಂಧಿಸಬೇಕಿದೆ. ಎಲ್ಲಾ ಧರ್ಮೀಯರೂ ತಮ್ಮ ಧಾರ್ಮಿಕ ರೀತಿರಿವಾಜುಗಳನ್ನು ತಮ್ಮ ಮನ ಇಲ್ಲವೇ ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಮಾತ್ರ ಆಚರಿಸಬೇಕೆಂದು ಕಾನೂನು ಮಾಡಬೇಕಿದೆ. ಇದನ್ನು ಉಲ್ಲಂಘಿಸಿದವರನ್ನು ಕಾನೂನಾತ್ಮಕವಾಗಿ ಶಿಕ್ಷಿಸಬೇಕಿದೆ. ಆಗ ಸಾರ್ವಜನಿಕರು ನೆಮ್ಮದಿಯಾಗಿ ಇರಬಹುದು. 

ಇಷ್ಟಕ್ಕೂ ಯಾವ ಮತ ಪಂಥ ಧರ್ಮೀಯರಾದರೇನು ಸಂವಿಧಾನದ ಮುಂದೆ ಎಲ್ಲರೂ ಒಂದೇ. ಧಾರ್ಮಿಕ ಆಚರಣೆಗಳಿಗೆ ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನ ಒದಗಿಸಿಕೊಟ್ಟಿದೆ. ಸಾರ್ವಜನಿಕವಾಗಿ ಧರ್ಮಾಚರಣೆಗಳನ್ನು ಮಾಡಬಹುದಾದರೆ ಅದು ಎಲ್ಲಾ ಧರ್ಮೀಯರಿಗೂ ಅನ್ವಯಿಸಬೇಕು.  ಜನರಿಗೆ ತೊಂದರೆ ಆಗುತ್ತದೆಯಾದ್ದರಿಂದ ಬೇಡ ಎನ್ನುವುದೇ ಆದರೆ ಎಲ್ಲಾ ಮತೀಯರ ಮೇಲೂ ನಿರ್ಬಂಧ ವಿಧಿಸಬೇಕು. ಸಮಾನತೆ ಅಂದ್ರೆ ಇದೇ ಅಲ್ಲವೇ?

“ಹಿಂದೂ ಧರ್ಮೀಯರು ಪ್ರತಿ ನಿತ್ಯ ಒಂದಿಲ್ಲೊಂದು ಕಡೆ ಸಾರ್ವಜನಿಕವಾಗಿ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾರಲ್ವಾ, ಅದೇ ರೀತಿ ಮುಸ್ಲಿಂ ಸಮುದಾಯದವರು ಮಾಡಿದ್ದೇ ಆದಲ್ಲಿ ಯಾಕೆ ಈ ಅಸಹನೆ?” ಎಂದು ಮತೀಯವಾದಿಗಳನ್ನು ಪ್ರಶ್ನಿಸಿದರೆ “ಇದು ಹಿಂದೂಗಳ ದೇಶ. ಇಲ್ಲಿ ಹಿಂದೂ ಧರ್ಮೀಯರು ತಮಗಿಷ್ಟ ಬಂದಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬಹುದು. ಅದು ಅವರ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯ. ಮುಸಲ್ಮಾನರು ಮುಸ್ಲಿಂ ದೇಶಗಳಿಗೆ ಹೋಗಿ ನಮಾಜೋ ಆಜಾನೋ ಮಾಡಬಹುದು” ಎನ್ನುವುದು ಹಿಂದೂ ಮತಾಂಧರ ವಾದವಾಗಿದೆ.

ರಸ್ತೆಯಲ್ಲಿ ನಮಾಜ್

ಆದರೆ ಪ್ರಜಾತಂತ್ರ ದೇಶವಾದ ಭಾರತದ ಸಂವಿಧಾನದಲ್ಲಿ ಎಲ್ಲೂ ‘ಭಾರತ ಹಿಂದೂ ರಾಷ್ಟ್ರ, ಹಿಂದೂ ಧರ್ಮವೊಂದೇ ಅಧಿಕೃತ’ ಎಂದು ನಮೂದಾಗಿಲ್ಲ. ಈ ದೇಶವಾಸಿಗಳಿಗೆಲ್ಲಾ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಡಲಾಗಿದೆ. ಹೀಗಿರುವಾಗ ಇಲ್ಲಿ ಹಿಂದೂಗಳು ಶ್ರೇಷ್ಠ ಅನ್ಯ ಧರ್ಮೀಯರು ಕನಿಷ್ಠ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾರು ಸಂವಿಧಾನಕ್ಕೆ ಬದ್ಧರಾಗಿರುತ್ತಾರೋ ಅಂತವರು ಧಾರ್ಮಿಕ ಸೌಹಾರ್ದತೆಯನ್ನು ಗೌರವಿಸುತ್ತಾರೆ. ಯಾರು ಅನ್ಯಧರ್ಮ ದ್ವೇಷವನ್ನೇ ಸಾಧಿಸುತ್ತಾರೋ ಅಂತವರು ಸಂವಿಧಾನವನ್ನು ಅಗೌರವಿಸುತ್ತಾರೆ. 

“ಸಬ್ ಕಾ ಮಾಲಿಕ್ ಏಕ್ ಹೈ” ಎಂದು ಮಹಾನುಭಾವರು ಹೇಳಿದ್ದಾರೆ. ‘ದೇವನೊಬ್ಬ ನಾಮ ಹಲವು’ ಎಂದೂ ಸಾರಿದ್ದಾರೆ. ಆದರೆ ಹಿಂದೂ ಶ್ರೇಷ್ಠತೆಯ ವ್ಯಸನಪೀಡಿತ ಹಿಂದುತ್ವವಾದಿಗಳು ಹಾಗೂ ಅವರ ಸಮರ್ಥಕರು ಮಾತ್ರ ಅನ್ಯಧರ್ಮ ದ್ವೇಷದ ವಿಷವನ್ನು ಕಾರುತ್ತಲೇ ಇರುತ್ತಾರೆ. ಸಮಾಜದಲ್ಲಿ ಕೋಮುಸೌಹಾರ್ದತೆಯನ್ನು ಹಾಳುಮಾಡುತ್ತಾರೆ. 

ಕೆಲವು ಮುಸ್ಲಿಂ ದೇಶಗಳ ಹಾಗೆ ಭಾರತವು ಧರ್ಮಾಧಾರಿತ ದೇಶವಲ್ಲ. ಈ ದೇಶ ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸಂವಿಧಾನವು ಎಲ್ಲರಿಗೂ ನೀಡಿದೆ. ಎಲ್ಲಾ ಧರ್ಮೀಯರು ಸೌಹಾರ್ದತೆಯಿಂದ ಬಾಳಲಿ ಎನ್ನುವುದೇ ಸಂವಿಧಾನದ ಆಶಯವಾಗಿದೆ. ಇದು ಎಲ್ಲಾ ಧರ್ಮಾನುಯಾಯಿಗಳಿಗೂ ಅನ್ವಯಿಸುತ್ತದೆ. 

ಆದರೆ ಸಂವಿಧಾನದ ಆಶಯವನ್ನು ವೈದಿಕಶಾಹಿ ಹಿಂದುತ್ವವಾದಿಗಳಿಗೆ ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ವಧರ್ಮ ಸಮನ್ವಯದ ಬಂಧುತ್ವವನ್ನು ಬಿಟ್ಟು   ಹಿಂದುತ್ವವನ್ನು ಈ ದೇಶವಾಸಿಗಳ ಮೇಲೆ ಹೇರಿಕೆ ಮಾಡಲು ಮತಾಂಧ ಶಕ್ತಿಗಳು ಪ್ರಯತ್ನಿಸುತ್ತಲೇ ಇವೆ. ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ಈ ದೇಶವನ್ನು ಹಿಂದೂರಾಷ್ಟ್ರವನ್ನಾಗಿಸುವ ಕಾರ್ಯತಂತ್ರಗಳನ್ನು ಆರೆಸ್ಸೆಸ್ ಹೆಣೆಯುತ್ತಲೇ ಬಂದಿದೆ. ಸಂಘ ಪರಿವಾರದ ಮೂಲಕ ಹಿಜಾಬ್, ಹಲಾಲ್, ಆಜಾನ್, ನಮಾಜ್ ಗಳ ಕುರಿತು ತಕರಾರುಗಳನ್ನು ಹುಟ್ಟಿಸಿ ಸಾಮಾಜಿಕ ಸೌಹಾರ್ದತೆಯನ್ನು ಕದಡುತ್ತಿದೆ. ಅಲ್ಪಸಂಖ್ಯಾತರಿಂದ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹಿಂದೂಗಳನ್ನು ನಂಬಿಸಲಾಗುತ್ತಿದೆ.

ಏನೇ ಆದರೂ ಇಂತಹ ಸಂಘೀ ಕುತಂತ್ರಗಳನ್ನು ಈ ದೇಶದ ಪ್ರಜಾತಂತ್ರವಾದಿಗಳು ಹಿಮ್ಮೆಟ್ಟಿಸುತ್ತಲೇ ಬಂದಿದ್ದಾರೆ. ಸಂವಿಧಾನವನ್ನು ಬದಲಾಯಿಸಿ ಹಿಂದುತ್ವವಾದಿ ದೇಶವನ್ನಾಗಿಸುವ ಪ್ರಯತ್ನವನ್ನು ವಿರೋಧಿಸುತ್ತಿದ್ದಾರೆ. ಆದರೂ ಈ ಹಿಂದುತ್ವವಾದಿ ಮತೀಯ ಶಕ್ತಿಗಳು ಸಮಾಜದಲ್ಲಿ ಇಸ್ಲೊಮೋಫೋಬಿಯಾ ಕಾಯಿಲೆಯನ್ನು ಹರಡುತ್ತಿವೆ. ಈ ಕೋಮುವ್ಯಾಧಿ ರೋಗಪೀಡಿತರು ಸರಕಾರಿ ಯಂತ್ರಾಂಗ ವ್ಯವಸ್ಥೆಯಲ್ಲೂ ವ್ಯಾಪಕವಾಗಿ ಹರಡಿ ಕೊಂಡಿದ್ದಾರೆ.

ದಸರಾ ಮೆರವಣಿಗೆ

ಇಂತಹುದರ ಪರಿಣಾಮವಾಗಿ ಮಂಗಳೂರಿನ ಮುಸಲ್ಮಾನರೇ ಹೆಚ್ಚಾಗಿ ವಾಸಿಸುವ ರೆಹಮಾನಿಯಾ ಜುಮ್ಮಾ ಮಸೀದಿಯ ಬಳಿ ರಸ್ತೆಯ ಮೇಲೆ ಕೆಲವರು ನಮಾಜ್ ಮಾಡಿದ ವಿಡಿಯೋ ಹರಿದಾಡಿದೆ. ಅದನ್ನೇ ಆಧರಿಸಿ ಸೋಮಶೇಖರ್ ಎನ್ನುವ ಠಾಣಾಧಿಕಾರಿ ಸ್ವಯಂಪ್ರೇರಿತವಾಗಿ ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಂಡು ಎಫ್ ಐ ಆರ್ ಬರೆದಿದ್ದಾರೆ. ಪ್ರಾರ್ಥನೆ ಮಾಡಿದವರ ಮೇಲೆ ‘ಕ್ರಿಮಿನಲ್ ಕೃತ್ಯ ಮಾಡಲೆಂದು ಸಭೆ ಸೇರಿದ್ದಾರೆ’ ಎಂದು ಐಪಿಸಿ 149 ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜುಮ್ಮಾ ಮಸೀದಿಯ ಆಡಳಿತ ಮಂಡಳಿಯವರನ್ನು ಕರೆಸಿ ಮುಚ್ಚಳಿಕೆ ಬರೆಸಿ ಕೊಂಡಿದ್ದಾರೆ. 

ಹಿಂದುತ್ವವಾದಿಗಳ ಕೃಪೆಯಿಂದಾಗಿ ಮತಾಂಧತೆ ಎನ್ನುವುದು ಪೊಲೀಸ್ ಇಲಾಖೆಯಲ್ಲೂ ನುಸುಳಿದೆ. ಕಾನೂನಿಗೆ ಬದ್ದನಾರಾಗಿರಬೇಕಾದ ಅಧಿಕಾರಿಗಳು ಕೋಮುವ್ಯಾಧಿ ಪೀಡಿತರಾಗಿ ಅನ್ಯ ಧರ್ಮೀಯರ ಪ್ರಾರ್ಥನೆಯನ್ನೂ ಅಪರಾಧಿಕ ಕೃತ್ಯವೆಂದು ಆರೋಪಿಸುತ್ತಾರೆ. ರಸ್ತೆಯಲ್ಲಿ ನಮಾಜು ಮಾಡಿದ್ದಕ್ಕೆ ಯಾವ ಸಾರ್ವಜನಿಕರೂ ತಮಗೆ ತೊಂದರೆಯಾಯ್ತು ಎಂದು ದೂರು ಕೊಡದೇ ಇದ್ದರೂ, ಆ ಮಸೀದಿಯ ಸುತ್ತ ಬರೀ ಮುಸ್ಲಿಮರೇ ವಾಸಿಸುತ್ತಿದ್ದರೂ, ಪೊಲೀಸ್ ಅಧಿಕಾರಿಯೇ ದೂರು ದಾಖಲಿಸಿಕೊಂಡು ಸಂಬಂಧ ಪಡದ ಸೆಕ್ಷನ್ ಗಳಲ್ಲಿ ಎಫ್ ಐ ಆರ್ ಬರೆದಿದ್ದು ಅಕ್ಷಮ್ಯ. ಹಿಂದೂಗಳು ಸಾರ್ವಜನಿಕ ರಸ್ತೆಗಳಲ್ಲಿ ಧಾರ್ಮಿಕ ಆಚರಣೆ ಮೆರವಣಿಗೆ ಮಾಡಿದರೆ ಸರಿ, ಅನ್ಯ ಧರ್ಮೀಯರು ಮಾಡಿದರೆ ತಪ್ಪು ಎನ್ನುವುದಾದರೆ ಅದು ಸಂವಿಧಾನಕ್ಕೆ ಮಾಡಿದ ಅಪಚಾರ. ಕಾನೂನು ಎನ್ನುವುದು ಧರ್ಮಾಧಾರಿತವಲ್ಲ. ಧಾರ್ಮಿಕ ತಾರತಮ್ಯಕ್ಕೆ ಯಾವುದೇ ಅವಕಾಶ ಕಾನೂನಿನಲ್ಲಿಲ್ಲ.

ಆದ್ದರಿಂದ ಯಾವುದೇ ಧರ್ಮದ ಆಚರಣೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡದಂತೆ ಕಾನೂನಾತ್ಮಕವಾಗಿ ನಿರ್ಬಂಧಿಸಬೇಕು. ಇಲ್ಲದೇ ಹೋದರೆ ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶ ಕೊಡಬೇಕು. ಆದರೆ ಏನು ಮಾಡುವುದು?. ಇಂತಹ ಸಂಧರ್ಭಕ್ಕಾಗಿಯೇ ಸಂಘ ಪರಿವಾರದ ಮಿಲಿಟೆಂಟ್ ವಿಭಾಗದವರು ಕಾಯುತ್ತಲೇ ಇರುತ್ತಾರೆ. ಮುಸ್ಲಿಂ ಸಮುದಾಯದ ಮೇಲೆ ಹಿಂದೂಗಳನ್ನು ಎತ್ತಿಕಟ್ಟಿ ಕೋಮುಗಲಭೆಗಳನ್ನು ಹುಟ್ಟಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹೀಗಾಗಿ ಹಿಂದುತ್ವವಾದಿ ಮತೀಯ ಶಕ್ತಿಗಳು ರಾಜಕೀಯ ಅಧಿಕಾರ ಹೊಂದಿರುವಾಗ, ಆಡಳಿತಾಂಗದ ಆಯಕಟ್ಟಿನಲ್ಲಿ ಮತಾಂಧರು ಸ್ಥಾಪನೆಗೊಂಡಿರುವಾಗ, ಮುಸ್ಲಿಂ ಸಮುದಾಯದವರೇ ಸಂಯಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘನೆಗೆ ಅವಕಾಶ ಮಾಡಿಕೊಡದೆ ಸೌಹಾರ್ದತೆಯ ಮೂಲಕವೇ ಸಂಘಿ ಸಂತಾನಗಳನ್ನು ಎದುರಿಸಬೇಕಿದೆ. ಸಂಘಿಗಳು ಬೆಂಕಿ ಹಚ್ಚಲು ಕಾಯುತ್ತಿರುವಾಗ ಅದಕ್ಕೆ  ತೈಲ ಸುರಿಯುವಂತಹ ಅವಕಾಶಗಳನ್ನು ಕೊಡದೇ ತಣ್ಣಗೆ ನೀರಿನಂತೆ ಪ್ರತಿಕ್ರಿಯಿಸುವ ಮೂಲಕ ಕೋಮು ಪ್ರಚೋದನೆಯಾಗದಂತೆ ನೋಡಿಕೊಳ್ಳಬೇಕಿದೆ. ಯಾಕೆಂದರೆ ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದೆ. ಸಮಾಜವನ್ನು ಒಡೆದಾಳ ಬಯಸುವ ದುಷ್ಟಶಕ್ತಿಗಳಿಂದ ಎಚ್ಚರ ವಹಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article