Sunday, September 8, 2024

ಜಾತ್ಯತೀತ ಮಿತ್ರರೊಂದಿಗಿದ್ದೂ ಮೋದಿ 3.0  ಆಡಳಿತದಲ್ಲಿ ಧಾರ್ಮಿಕ ಸಾಮರಸ್ಯ  ಮತ್ತಷ್ಟೂ ಹದಗೆಡುತ್ತಿದೆಯೇ?

Most read

* ಜೂನ್ 7ನೇ ತಾರೀಖು, ಶುಕ್ರವಾರದಂದು ಸದ್ದಾಂ ಖುರೇಷಿ ಚಂದ್ ಮಿಯಾ ಖಾನ್ ಹಾಗೂ ಗುಡ್ಡು ಖಾನ್ ಎಂಬಿಬ್ಬರು ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಕೊಲ್ಲಲ್ಪಟ್ಟರು. ಸದ್ದಾಂ ಖುರೇಶಿ ಎಂಬಾತ ಮಾರಣಾಂತಿಕವಾಗಿ ಹಲ್ಲೆಗೊಳಗಾದರು. ಎಲ್ಲರೂ ಉತ್ತರ ಪ್ರದೇಶದ ನಿವಾಸಿಗಳು. ಶುಕ್ರವಾರ ಬೆಳಿಗ್ಗೆ 1.45ರ ಸುಮಾರಿಗೆ ನನಗೆ ಖುರೇಶಿ ಚಾಂದ್ ಅವರಿಂದ ಕರೆ ಬಂತು. ತನ್ನ ಮೇಲೆ ಕೆಲವರು ಹಲ್ಲೆ ನಡೆಸುತ್ತಿದ್ದಾರೆ, ನನ್ನ ಕೈಕಾಲು ಮುರಿದು ಹೋಗಿದೆ, ನಮ್ಮನ್ನು ಬಿಟ್ಟುಬಿಡಿ ಎಂದು ಮನವಿ ಮಾಡುತ್ತಿದ್ದರು, ನೀರು ಕೊಡಿ ಎಂದು ಕೇಳುತ್ತಿದ್ದ, ಹಲವರು ಅವನನ್ನು ನಿಂದಿಸುತ್ತಿದ್ದರು. ಅಷ್ಟರಲ್ಲಿ ಫೋನ್ ಕಟ್ ಆಯ್ತು. ದಾಳಿಕೋರರು ಅವರ ಫೋನ್ ಕಸಿದು ಕೊಂಡಿರಬೇಕು. ಅದಾದಮೇಲೆ ನಾನು ಚಾಂದ್‌ಗೆ ಮತ್ತೆ ಕರೆ ಮಾಡಲು ಪ್ರಯತ್ನಿಸಿದೆ’ ಶೋಯೆಬ್ ಎಂಬಾತ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

* ಜೂನ್ 12ನೇ ತಾರೀಖು ಛತ್ತೀಸ್ ಗಢದ ಜಗದಲ್‌ಪುರದಲ್ಲಿ ಹಿಂದುತ್ವದ ದೊಡ್ಡಗುಂಪು ಸಣ್ಣ ಸಂಖ್ಯೆಯಲ್ಲಿದ್ದ ಕ್ರಿಶ್ಚಿಯನ್ ಕುಟುಂಬಗಳ ಮೇಲೆ ದಾಳಿ ಮಾಡಿ, ಹತ್ತು ದಿನಗಳ ಒಳಗೆ ಮತಾಂತರವಾಗಬೇಕೆಂದು ತಾಕೀತು ಮಾಡಿ ಹಲ್ಲೆ ಮಾಡುತ್ತೆ. ಬದಂಜಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡೇ ಪರೋಡಾ ಗ್ರಾಮದಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡರೆ, ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಬ್ಬರ ಕಾಲು ಮುರಿದುಹಾಕಿದ್ದಾರೆ. ಅಸಲಿಗೆ ಈ ಗ್ರಾಮವು 2023ರಿಂದ ಧಾರ್ಮಿಕ ಸೂಕ್ಷ್ಮ ಪ್ರದೇಶವಾಗಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರು ದಾಳಿ ಮತ್ತು ಬೆದರಿಕೆಗೆ ಗುರಿಯಾಗಿದ್ದಾರೆ. ದುರಂತವೇನೆಂದರೆ ಈ ಕುಟುಂಬಗಳನ್ನು ಆ ಗ್ರಾಮದಿಂದ ಬಹಿಷ್ಕರಿಸಲಾಗಿದ್ದು, ಅವರು ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿ ಹೇಳಿಕೆಗೆ ಸಹಿ ಹಾಕುವಂತೆ ಹೇಳಲಾಗಿದೆ. ಹಾಗಾಗಿ ಇದನ್ನು ಸರ್ಕಾರಿ ಪ್ರಾಯೋಜಿತ ಕೃತ್ಯವೆಂದು ಹೇಳಲಾಗಿದೆ.

* ಜೂನ್ 15ನೇ ತಾರೀಖು ತೆಲಂಗಾಣದ ಮೇದಕ್‌ನಲ್ಲಿ  ಈದ್ ಸಿದ್ಧತೆಯ ಸಮಯದಲ್ಲಿ ಹಿಂದುತ್ವದ ಹೆಸರಿನಲ್ಲಿ ಗುಂಪುಗಳು ಹಿಂಸಾಚಾರಕ್ಕಿಳಿದವು. ಈದ್-ಉಲ್-ಅಧಾ ಹಬ್ಬಕ್ಕೆ ಗೋಹತ್ಯೆ ಮಾಡಲು ಯತ್ನಿಸಿದ ಆರೋಪದ ಮೇಲೆ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿತ್ತು. ಘರ್ಷಣೆಯಲ್ಲಿ ಎರಡೂ ಕಡೆಯ ಹಲವರು ಗಾಯಗೊಂಡರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೆದಕ್ ಜಿಲ್ಲಾಧ್ಯಕ್ಷ ಗದ್ದಂ ಶ್ರೀನಿವಾಸ್, ಮೇದಕ್ ಟೌನ್ ಅಧ್ಯಕ್ಷ ನಯನಿ ಪ್ರಸಾದ್ ಮತ್ತು ಎಂಟು ಮುಸ್ಲಿಮರು ಸೇರಿ ಒಟ್ಟು 21 ಜನರನ್ನು ಬಂಧಿಸಲಾಗಿತ್ತು. ಮೇದಕ್ ಭಾರತ್ ರಾಷ್ಟ್ರ ಸಮಿತಿಯ ಭದ್ರಕೋಟೆಯಾಗಿತ್ತು. 2004ರಿಂದ ಪಕ್ಷದಲ್ಲಿ ಉಳಿದು ಕೊಂಡಿದ್ದ ಸಂಸದೀಯ ಸ್ಥಾನವನ್ನು ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಶಪಡಿಸಿಕೊಂಡ ನಂತರ ಅಲ್ಲಿ ಕೋಮು ಸೂಕ್ಷ್ಮ ವಾತಾವರಣ ನಿರ್ಮಾಣವಾಗಿದೆ.

* ಜೂನ್ 17ನೇ ತಾರೀಖು ಒಡಿಶಾದ ಬಾಲಸೋರ್ ಮತ್ತು ಖೋರ್ಧಾದಲ್ಲಿ ಈದ್ ವೇಳೆ ಗೋಹತ್ಯೆ ನಡೆಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೋಮು ಸಂಘರ್ಷ ನಡೆಯಿತು. ಪತ್ರಪದ ಪ್ರದೇಶದ ಸಮಾಧಿ ಬಳಿ ಗೋಹತ್ಯೆ ಆರೋಪದ ಮೇಲೆ ಎರಡು ಸಮುದಾಯಗಳು ಮುಖಾಮುಖಿಯಾಗಿದ್ದವು. ಸಮಾಧಿ ಬಳಿಯ ಚರಂಡಿಯಲ್ಲಿ ನೀರು ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿದ ಸ್ಥಳೀಯರು ಗೋಹತ್ಯೆ ಕಾರಣ ಎಂದು ಪ್ರತಿಭಟಿಸಿದರು. ಈ ಸುದ್ದಿ ಇತರ ಪ್ರದೇಶಗಳಿಗೆ ಹರಡುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿತು. ಎರಡೂ ಸಮುದಾಯಗಳು ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದು, ಅನೇಕ ಜನರು ಮತ್ತು ಪೊಲೀಸರು ಗಾಯಗೊಂಡರು. ಆಡಳಿತವು 144 ಸೆಕ್ಷನ್ ಜಾರಿಗೊಳಿಸಿ ಕರ್ಫ್ಯೂ ವಿಧಿಸಿತ್ತು. ಆದರೂ ಅದೇ ರಾತ್ರಿ ಗೋಲಾಪೋಖಾರಿ, ಮೋಟಿಗಂಜ್ ಮತ್ತು ಸಿನಿಮಾ ಛಾಕ್ ಪ್ರದೇಶಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದರು. ಕಲ್ಲು ತೂರಾಟ ನಡೆಸಲಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದರು.

* ಜೂನ್ 18ನೇ ತಾರೀಖು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ನಹಾನ್‌ನಲ್ಲಿ, ಈದ್ ಸಮಯದಲ್ಲಿ ವಧೆ ಮಾಡುವ ವಾಟ್ಸಾಪ್ ಸ್ಟೇಟಸ್ ಗೆ ಸಂಬಂಧಿಸಿದಂತೆ ಜಾವೇದ್ ಎಂಬ ವ್ಯಕ್ತಿಗೆ ಸೇರಿದ ಜವಳಿ ಅಂಗಡಿಯನ್ನು ಲೂಟಿ ಮಾಡಿ ಧ್ವಂಸ ಗೊಳಿಸಲಾಯಿತು. ಆನಂತರ ಆಸುಪಾಸಿನ ಸುಮಾರು 16 ಮುಸ್ಲಿಂ ಅಂಗಡಿ ಮಾಲೀಕರನ್ನು ಬೆದರಿಸಿ ಓಡಿಸಲಾಯಿತು. ಜವೇದ್ “ಜಾನುವಾರು ಹತ್ಯೆ” ಚಿತ್ರವನ್ನು ತನ್ನ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದು ಈ ಘಟನೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಘಟನೆಯ ವಿಡಿಯೋಗಳಲ್ಲಿ ಗುಂಪು ಅಂಗಡಿಯನ್ನು ಧ್ವಂಸ ಮಾಡಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು.

* ಜೂನ್ 19ನೇ ತಾರೀಖು ಉತ್ತರಪ್ರದೇಶದ ಅಲಿಗಢದಲ್ಲಿ ಜೈಶ್ರೀರಾಮ್ ಎನ್ನುತ್ತಾ ಒಂದು ಗುಂಪು ಮೊಹಮ್ಮದ್ ಫರೀದ್ ಅಲಿಯಾಸ್ ಔರಂಗಜೇಬನ ಪ್ಯಾಂಟ್ ಬಿಚ್ಚ ತೊಡಗುತ್ತೆ, ಆತ ಮುಸ್ಲಿಂ ಎಂದು ಖಾತ್ರಿಪಡಿಸಿಕೊಂಡು ಭಯಾನಕವಾಗಿ ಥಳಿಸ ತೊಡಗುತ್ತೆ. ಕಮಕ್ ಕಿಮಕ್ ಎನ್ನದೇ ಫರೀದ್ ಪ್ರಾಣಬಿಟ್ಟಿದ್ದ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಹುಲ್ ಸೇರಿದಂತೆ ಹತ್ತಾರು ಜನರನ್ನು ಬಂಧಿಸಿದ್ದಾರೆ. ರಾಹುಲ್ ತಾಯಿ, ಫರೀದ್ ನಮ್ಮ ಮನೆಯ ಕಳ್ಳತನಕ್ಕೆ ಬಂದಿದ್ದ, ಹಾಗಾಗಿ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮೃತ ಫರೀದ್ ಮೇಲೆ ದರೋಡೆ ಪ್ರಕರಣವನ್ನು ದಾಖಲಿಸಿದ್ದಾರೆ.

* ಜೂನ್ 22ನೇ ತಾರೀಖು ಗುಜರಾತಿನ ಚಿಖೋದ್ರಾದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್ ವೋಹ್ರಾ ಜೊತೆ ಕುಡಿದ ಮತ್ತಿನಲ್ಲಿದ್ದ ಮೆಹುಲ್ ದಿನೇಶ್ ಪರ್ಮರ್ ಎಂಬ ವ್ಯಕ್ತಿ ಜಗಳವಾಡ ತೊಡಗಿದ. ಜಗಳ ಬಿಡಿಸಲು ಬಂದ ಸುಹೇಲ್ ಎಂಬಾತನ ಮೇಲೆ ದಿನೇಶ್ ಎಗರಿಹೋದ, ಸುಹೇಲ್ ಅತ್ತ ಸರಿಯುತ್ತಿದ್ದಂತೆ ಜೈಶ್ರೀರಾಮ್ ಎನ್ನುತ್ತಾ ಒಂದು ಗುಂಪಿನವರು ಸಲ್ಮಾನ್ ಮೇಲೆ ಮುಗಿಬಿದ್ದು ಥಳಿಸ ತೊಡಗಿದರು. ನೋಡನೋಡುತ್ತಿದ್ದಂತೆ ಸಲ್ಮಾನ್ ನನ್ನು ಹೊಡೆದು ಕೊಂದೇಬಿಟ್ಟರು. ಕ್ಷುಲ್ಲಕ ಕಾರಣಕ್ಕೆ 23ರ ಪ್ರಾಯದ ಸಲ್ಮಾನ್ ಕೊಲೆಯಾಗಿ ಹೋದ. ಮದ್ವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ಆತನ ಪತ್ನಿ ಮಶೀರ ಮೂರು ವಾರದ ಗರ್ಭಿಣಿಯಾಗಿದ್ದರು. ಈ ಘಟನೆಯಲ್ಲಿ ದಿನೇಶ್ ಪರ್ಮರ್, ಕಿರಣ್, ಮಹೇಂದ್ರ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.

* ಇದೇ ಜೂನ್ 22ರಂದು ಅಸ್ಸಾಮಿನ ನಾಗಾವ್ ಜಿಲ್ಲೆಯ ಲಾವೋಖೋವೋ ವನ್ಯಜೀವಿ ಅಭಯಾರಣ್ಯದೊಳಗೆ ಅರಣ್ಯ ಅಧಿಕಾರಿಗಳು ಮೀನುಗಾರರಾಗಿದ್ದ ಜಲೀಲುದ್ದೀನ್ ಮತ್ತು ಸಮೀರುದ್ದೀನ್ ಎಂಬಿಬ್ಬರು ಸಹೋದರರನ್ನು ಎನ್‌ಕೌಂಟರ್ ಮಾಡಿ ಕೊಂದು ಹಾಕಿದ್ದರು. ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ರಾಜ್ಯ ಸರ್ಕಾರವು ಬೇಟೆಯಾಡುವ ಚಟುವಟಿಕೆಗಳ ಶಂಕೆಯ ಮೇಲೆ ಇವರನ್ನು ಕೊಂದುಹಾಕಿತ್ತು. ವಿಕಟವೆಂದರೇ ಅವರು ಗ್ರಾಮಸ್ಥರೊಂದಿಗೆ ಮೀನುಗಾರಿಕೆ ನಡೆಸುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಅವರನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಜೀವಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಆ ಸಹೋದರರು ದಿಂಗ್ಬರಿ ಚಪರಿ ನಿವಾಸಿಗಳು, ಇತರ ಕೆಲವು ಗ್ರಾಮಸ್ಥರೊಂದಿಗೆ ತಮ್ಮ ಸಾಂಪ್ರದಾಯಿಕ ಜೀವನೋಪಾಯದ ಭಾಗವಾಗಿ ಮೀನು ಹಿಡಿಯಲು ರೌಮರಿ ಬೀಲ್ ಜೌಗು ಪ್ರದೇಶಕ್ಕೆ ಹೋಗಿದ್ದರು.

* ಇನ್ನು ಜೂನ್ 24ನೇ ತಾರೀಖು ಬಿಂದು ಸೋಧಿ ಎಂಬ 32 ವರ್ಷದ ಹೆಣ್ಣುಮಗಳ ಮೇಲೆ ಛತ್ತಿಸ್‌ಘಡದ ಟಾಯ್ಲಾಂಕ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಒಂದು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿತು. ಆಕೆಯನ್ನು ಕೊಲ್ಲಲು ಬಿಲ್ಲು, ಬಾಣಗಳು, ಕೊಡಲಿಗಳು ಮತ್ತು ಚಾಕುಗಳನ್ನು ಬಳಸಲಾಯಿತು. ಅಸಲಿಗೆ ಕೇವಲ ಬಿಂದು ಸೋಧಿ ಮಾತ್ರವಲ್ಲ, ಇಡೀ ಕುಟುಂಬವನ್ನು ಕೊಲ್ಲಲು ಆ ಗುಂಪು ಪ್ರಯತ್ನ ಮಾಡಿತು. ಸೋಧಿ ಮತ್ತು ಅವರ ಕುಟುಂಬ ಭತ್ತವನ್ನು ನೆಡಲು ತಮ್ಮ ಹೊಲವನ್ನು ಸಿದ್ಧಪಡಿಸುತ್ತಿದ್ದಾಗ ಈ ದಾಳಿ ನಡೆಯಿತು, ಬಿಂದು ಅವರನ್ನು ಹೊರತುಪಡಿಸಿ ಎಲ್ಲರೂ ಪರಾರಿಯಾದರು. ಬಿಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಕ್ಕೆ ಈ ಹತ್ಯೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನೊಂದು ಬದಿಯಲ್ಲಿ ದಾಳಿ ನಡೆಸಿದ ಗುಂಪಿನಲ್ಲಿ ಕುಟುಂಬಸ್ಥರು ಇದ್ದಿದ್ದರಿಂದ ಇದು ಜಮೀನು ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದ ಹತ್ಯೆ ಎಂದೂ ಹೇಳಲಾಗುತ್ತೆ.

* ಜೂನ್ 25ನೇ ತಾರೀಖು ಸರ್ಕಾರಿ ಭೂಮಿಯಲ್ಲಿ ನಮಾಜ್ ಮಾಡಿದ 9 ಮುಸ್ಲಿಮರನ್ನು ಬಂಧಿಸಿದ ಯುಪಿ ಪೊಲೀಸರು; “ಅದನ್ನು ತಡೆಯಲು ವಿಫಲರಾದ” ಇಬ್ಬರು ಗ್ರಾಮದ ಹಿಂದೂ ಮುಖ್ಯಸ್ಥರನ್ನು ಬಂಧಿಸಿತ್ತು. ಉತ್ತರ ಪ್ರದೇಶದ ಖುಶಿನಗರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯಲ್ಲಿ ಗುಂಪು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಒಂಬತ್ತು ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ. ಜೂನ್ 17ರಂದು ಈದ್ ಅಲ್-ಅಧಾ ದಿನದಂದು ತುರ್ಕಹಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿತ್ತು. ಬಂಧಿತರಲ್ಲಿ ಒಂಬತ್ತು ಮುಸ್ಲಿಂ ಪುರುಷರು, ಗ್ರಾಮದ ಮುಖ್ಯಸ್ಥ ಕೇದಾರ್ ಯಾದವ್ ಸೇರಿದಂತೆ ಇಬ್ಬರು ಹಿಂದೂ ಪುರುಷರು ಸೇರಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ವಿವಾದಿತ ಆಸ್ತಿಯ ಮೇಲೆ ಯಾವುದೇ ಚಟುವಟಿಕೆಗಳನ್ನು ನಿಷೇಧಿಸುವ ಖುಶಿನಗರ ಜಿಲ್ಲಾಡಳಿತ ಮತ್ತು ಪೊಲೀಸರ ಸೂಚನೆಗಳ ಹೊರತಾಗಿಯೂ ಮುಸ್ಲಿಂ ಮತ್ತು ಹಿಂದೂ ಗ್ರಾಮಸ್ಥರ ನಡುವಿನ ವಿವಾದದ ಬಿಂದುವಾಗಿರುವ ಸರ್ಕಾರಿ ಭೂಮಿಯಲ್ಲಿ ನಮಾಜ್ ನಡೆದಿತ್ತು.

* ಜೂನ್ 26ನೇ ತಾರೀಖು ದೆಹಲಿಯಲ್ಲಿ 7 ದಿನಗಳ ಒಳಗೆ ಅತಿಕ್ರಮಣ ಮಾಡಿ ನಿರ್ಮಿಸಲಾದ ಎರಡು ಮಸೀದಿಗಳನ್ನು ಕೆಡವಲು ಹಿಂದುತ್ವ ಸಂಘಟನೆ ದೂರು ನೀಡಿದ ಸಂಬಂಧ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್, ಸ್ಥಳೀಯ ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಗಳ ಜೊತೆಗೂಡಿ ಬುಲ್ಡೋಜರ್‌ಗಳನ್ನು ತರುತ್ತಿದ್ದಂತೆ ಮಸೀದಿಯ ಸುತ್ತಲಿನ ಪ್ರದೇಶವು ಉದ್ವಿಗ್ನಗೊಂಡಿತು. ಮಹಿಳಾ ಪ್ರತಿಭಟನಾಕಾರರು ಸೇರಿದಂತೆ ದೊಡ್ಡ ಗುಂಪು ಮಸೀದಿಯ ಸುತ್ತಲೂ ಜಮಾಯಿಸಿ, ರಕ್ಷಣಾತ್ಮಕ ವೃತ್ತವನ್ನು ರಚಿಸಿ, ಪ್ರಾರ್ಥನಾ ಸ್ಥಳವನ್ನು ಕೆಡಹುವುದನ್ನು ವಿರೋಧಿಸಿತು. ಪ್ರತಿಭಟನೆಗಳು ಭುಗಿಲೆದ್ದವು.

* ಜೂನ್ 27ನೇ ತಾರೀಖು, ಹಿಂದುತ್ವ ಗುಂಪುಗಳ ದೂರಿನ ಆಧಾರದಲ್ಲಿ  ಪೊಲೀಸರು ಗೋಮಾಂಸ ಶೇಖರಿಸಿಟ್ಟು ಸರಬರಾಜು ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಬಂಧಿಸಿದ ನಂತರ ಸರ್ಕಾರ, ಮುಸ್ಲಿಂ ಒಡೆತನದ ಆಸ್ತಿಗಳನ್ನು ಧ್ವಂಸಗೊಳಿಸಿತ್ತು. ಶನಿವಾರ ಬೆಳಗ್ಗೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ಮುಸ್ಲಿಮರ ಒಡೆತನದ 11 ಮನೆಗಳ ರೆಫ್ರಿಜರೇಟರ್‌ಗಳಲ್ಲಿ ಗೋಮಾಂಸ ಶೇಖರಿಸಿಟ್ಟ ಆರೋಪದ ನಂತರ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಲಾದ ಮುಸ್ಲಿಂ ಒಡೆತನದ ಆಸ್ತಿಗಳನ್ನು ಕೆಡವಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ರಾಜ್ಯದ ಮಂಡ್ಲಾ ಜಿಲ್ಲೆಯಲ್ಲಿ ಗೋಮಾಂಸ ವಶಪಡಿಸಿಕೊಂಡ ಮನೆಗಳನ್ನು ನೆಲಸಮಗೊಳಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿ ಕೊಂಡಿದ್ದರು. ಬುಡಕಟ್ಟು ಪ್ರಾಬಲ್ಯವಿರುವ ಜಿಲ್ಲೆಯ ನೈನ್‌ಪುರ್ ಜನಪದದಲ್ಲಿರುವ ಭೈನ್ಸ್ವಾಹಿ ಪ್ರದೇಶದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೈದ್ರಾಬಾದ್ ಸಂಸದ ಅಸಾದುದ್ದಿನ್ ಒವೈಸಿ ಪ್ರತಿಕ್ರಿಯೆ ನೀಡಿದ್ದು, 2015ರಲ್ಲಿ ಗುಂಪೊಂದು ಅಖ್ಲಾಕ್ ಮನೆಗೆ ನುಗ್ಗಿ ಅವನನ್ನು ಕೊಂದು, ಅವನ ಫ್ರಿಡ್ಜ್‌ನಲ್ಲಿದ್ದ ಮಾಂಸವನ್ನು ಗೋಮಾಂಸ ಎಂದು ಕರೆಯಿತು. ಕಳ್ಳಸಾಗಾಣಿಕೆ ಮತ್ತು ಕಳ್ಳತನದ ಆರೋಪ ಹೊರಿಸಿ ಎಷ್ಟು ಮಂದಿ ಮುಸ್ಲಿಮರನ್ನು ಕೊಂದಿದ್ದಾರೋ ದೇವರೇ ಬಲ್ಲ” ಎಂದು ತಮ್ಮ x ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.

* ಜೂನ್ ೨೯ನೇ ತಾರೀಖು  ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮುಸ್ಲಿಂ ಬಾಹುಳ್ಯವಿರುವ ಕಲ್ಯಾಣಪುರ ಪಾದ್ರಿ ಪ್ರದೇಶದಲ್ಲಿ ಮಸೀದಿಯನ್ನು ಗುರಿಯಾಗಿಸಿಕೊಂಡು ಜಿಲ್ಲಾಡಳಿತ ನಡೆಸಿದ ವಿವಾದಾತ್ಮಕ ಧ್ವಂಸ ಕಾರ್ಯಾಚರಣೆಯ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು. ಹಿರಿಯ ಅಧಿಕಾರಿ ಸೇರಿದಂತೆ ಒಟ್ಟು ಆರು ಪೊಲೀಸರು ಗಾಯಗೊಂಡ ಘಟನೆ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ಜಂಟಿ ತಂಡವು ನಾಲ್ಕು ಬುಲ್ಡೋಜರ್‌ಗಳೊಂದಿಗೆ, ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಮಸೀದಿ ಮತ್ತು ಇತರ ಕಟ್ಟಡಗಳನ್ನು ಕೆಡವಲು ಮುಂದಾದಾಗ ಈ ಸಂಘರ್ಷ ನಡೆದಿದೆ. ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಕಥುವಾ ಜಿಲ್ಲಾಡಳಿತ ಮತ್ತು ಪೊಲೀಸರ ಕ್ರಮಗಳನ್ನು ತೀವ್ರವಾಗಿ ಖಂಡಿಸಿದೆ.

ರಾ ಚಿಂತನ್

ಪತ್ರಕರ್ತರು

More articles

Latest article