ಅಪೂರ್ಣಗೊಂಡ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದನ್ನು ಯಾವ ವೈದಿಕ ಶಾಸ್ತ್ರಗಳೂ ಒಪ್ಪುವುದಿಲ್ಲ. ಆದರೆ ರಾಜಕೀಯ ಅಧಿಕಾರ ಪಡೆಯಲು ಈ ಶಾಸ್ತ್ರ ಸಂಪ್ರದಾಯಗಳೂ ಮೋದಿಗೆ ಲೆಕ್ಕಕ್ಕಿಲ್ಲ. ಸಮೂಹ ಸನ್ನಿ ಪೀಡಿತ ರಾಮ ಭಕ್ತರು ಈ ಯಾವುದನ್ನೂ ಪ್ರಶ್ನಿಸೋದಿಲ್ಲ. ಸ್ವಾಮಿಗಳಂತೆ ಯಾವುದನ್ನೂ ವಿರೋಧಿಸದೇ ಪ್ರಾಣ ಪ್ರತಿಷ್ಠಾಪನೆಗೆ ಬರುವುದಿಲ್ಲ ಎಂದು ಹೇಳಿದ ರಾಜಕೀಯ ಎದುರಾಳಿ ಕಾಂಗ್ರೆಸ್ ನಾಯಕರ ಮೇಲೆ ಬೆಂಕಿ ಕಾರುವುದನ್ನು ಸಂಘ ಪರಿವಾರದ ನಾಯಕರು ಬಿಡುವುದಿಲ್ಲ. ಮೋದಿ ಮೇನಿಯಾದಲ್ಲಿ ಮಿಂದೆದ್ದು ಮೆದುಳು ತೊಳೆದುಕೊಂಡ ಭಕ್ತರಿಗೆ ಇದ್ಯಾವುದೂ ಅರ್ಥವಾಗುವುದಿಲ್ಲ-ಶಶಿಕಾಂತ ಯಡಹಳ್ಳಿ, ಪತ್ರಕರ್ತರು
ಬಿಜೆಪಿಗರು ಇದಕ್ಕಾಗಿಯೇ ಕಾಯುತ್ತಿದ್ದರು. ಜನವರಿ 22 ರಂದು ಅಯೋಧ್ಯೆಯ ಮಂದಿರದಲ್ಲಿ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಬರಲು ಒಪ್ಪುತ್ತಾರೋ ಇಲ್ಲವೋ ಎಂದು ಕಾಯುತ್ತಿದ್ದರು. ಬರಬೇಕೆಂದು ಕಾಂಗ್ರೆಸ್ಸಿನ ಅಧಿನಾಯಕರನ್ನು ಆಹ್ವಾನಿಸಿಯೂ ಬಂದಿದ್ದರು. ಬಂದರೂ ಬರದಿದ್ದರೂ ರಾಜಕೀಯ ಮೈಲೇಜ್ ಪಡೆಯಲು ಬಿಜೆಪಿಗರು ಸಿದ್ಧರಾಗಿದ್ದರು.
ಬಂದಿದ್ದೇ ಆದರೆ “ನೋಡಿ ಕಾಂಗ್ರೆಸ್ಸಿನವರೇ ನಮ್ಮ ರಾಮಮಂದಿರದ ಉದ್ಘಾಟನೆಗೆ ಬಂದಿದ್ದಾರೆ. ನಮ್ಮ ರಾಮಭಕ್ತಿಯನ್ನು ನಮ್ಮ ಶತ್ರು ಪಕ್ಷದವರೂ ಒಪ್ಪಿಕೊಂಡಿದ್ದಾರೆ. ಮಸೀದಿ ಒಡೆದು ರಕ್ತ ಹರಿಸಿ ರಾಮಮಂದಿರ ಕಟ್ಟಿದ್ದು ಸಾರ್ಥಕವಾಯ್ತು. ಅದೇ ನಮ್ಮ ಯಶಸ್ಸು, ಶತ್ರುಗಳ ಮನಸ್ಸಲ್ಲೂ ರಾಮಭಕ್ತಿ ಹುಟ್ಟಿಸುವಂತಹ ಮಹತ್ತರ ಮನಪರಿವರ್ತನಾ ಕಾರ್ಯವನ್ನು ನಮ್ಮ ಮೋದಿಯವರು ಮಾಡಿದ್ದಾರೆ. ಅದಕ್ಕೆ ಅವರನ್ನು ವಿಶ್ವಗುರು ಎನ್ನುವುದು” ಎಂದು ಮೋದಿ ಮಹಾತ್ಮೆಯನ್ನು ಹೊಗಳಿ ಮೋದಿ ಮೇನಿಯಾವನ್ನು ಹೆಚ್ಚಿಸಿ ಕೊಳ್ಳುತ್ತಿದ್ದರು. ಕಾಂಗ್ರೆಸ್ಸಿಗರು ಬರದೇ ಹೋದರೆ?
ಹಾಗೇ ಆಯಿತು. ದೇವರ ಹೆಸರಲ್ಲಿ ರಾಜಕೀಕರಣದ ಕಾರಣ ಕೊಟ್ಟು, ಒಂದು ಪಕ್ಷ ಪ್ರಾಯೋಜಿತ ಪ್ರಾಣ ಪ್ರತಿಷ್ಠಾಪನೆಗೆ ಬರಲು ಕಾಂಗ್ರೆಸ್ಸಿನ ಉನ್ನತ ನಾಯಕರು ನಿರಾಕರಿಸಿದರು. ‘ಇದು ಧಾರ್ಮಿಕ ಕಾರ್ಯಕ್ರಮ ಅಲ್ಲಾ, ಇದು ಬಿಜೆಪಿ ಆರೆಸ್ಸೆಸ್ ಪ್ರಾಯೋಜಿತ ರಾಜಕೀಯ ಪ್ರೇರಿತ ಪ್ರಾಣ ಪ್ರತಿಷ್ಠಾಪನೆ, ಆದ್ದರಿಂದ ನಾವು ಈ ರಾಜಕೀಯ ಉದ್ದೇಶದ ಕಾರ್ಯಕ್ರಮಕ್ಕೆ ಹೋಗಿವುದಿಲ್ಲವೆಂದು’ ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿತು. ಈ ರೀತಿಯ ಪ್ರತಿಕ್ರಿಯೆಗಾಗಿಯೇ ಕಾಯುತ್ತಿದ್ದ ಬಿಜೆಪಿಗರು ಅದನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಸಿದ್ಧವಾಗೇ ತುದಿಗಾಲಲ್ಲಿ ನಿಂತಿದ್ದರು. ” ಅಯ್ಯೋ ನೋಡಿ ಈ ಕಾಂಗ್ರೆಸ್ಸಿನವರು ಸಮಸ್ತ ಹಿಂದೂಗಳ ಆರಾಧ್ಯ ದೈವವಾದ ಶ್ರೀರಾಮಚಂದ್ರನ ವಿರೋಧಿಗಳು, ಹಿಂದೂಧರ್ಮದ್ರೋಹಿಗಳು, ದೇಶದ ಸಮಸ್ತ ಜನರ ಭಾವನೆಗೆ ಧಕ್ಕೆ ತಂದವರು. ರಾಮಭಕ್ತಿ ಅಂದರೆ ದೇಶಭಕ್ತಿ. ರಾಮನನ್ನೇ ನಿರಾಕರಿಸಿದ ಈ ಕಾಂಗ್ರೆಸ್ ಪಕ್ಷ ದೇಶದ್ರೋಹಿ” ಎಂದು ಸಂಘ ಪರಿವಾರದ ಪ್ರಮುಖ ಅಂಗಗಳು ಮೀಡಿಯಾಂಗದ ಮೈಕಿನ ಮುಂದೆ ಬಾಯಿ ಬಡಿದುಕೊಳ್ಳ ತೊಡಗಿದವು.
“ಮೋದಿಯವರ ರಾಜಕೀಕೃತ ಧಾರ್ಮಿಕ ಕಾರ್ಯಕ್ರಮಕ್ಕೆ ನಾವು ಯಾಕೆ ಬರಬೇಕು”? ಎನ್ನುವುದು ಕಾಂಗ್ರೆಸ್ಸಿನ ಆಕ್ಷೇಪ. “ದೇಶಕ್ಕೆ ದೇಶವೇ ಹಲವಾರು ವರ್ಷಗಳಿಂದ ರಾಮಮಂದಿರ ಉದ್ಘಾಟನೆಗೆ ಕಾಯುತ್ತಿದ್ದು ಬರದೇ ಇರುವವರು ಹಿಂದೂಗಳ ಭಾವನೆಗಳಿಗೆ ಅವಮಾನ ಮಾಡಿದ್ದಾರೆ” ಎಂಬುದು ಬಿಜೆಪಿಯ ವರಸೆ. ಕಾಂಗ್ರೆಸ್ ನವರು ರಾಜಕೀಯ ತಂತ್ರಗಾರಿಕೆಯ ವಾಸ್ತವವನ್ನು ಹೇಳಿ ನಿರಾಕರಿಸಿದರೆ, ಬಿಜೆಪಿಗರು ಭಾವನೆಗಳನ್ನು ಮುಂದೆ ತಂದು ಕಾಂಗ್ರೆಸ್ಸಿಗರ ಅವಹೇಳನ ಮಾಡಲು ಆರಂಭಿಸಿದರು. ಕಾಂಗ್ರೆಸ್ಸಿನ ನಿರಾಕರಣೆಯನ್ನೇ ಭಾವನಾತ್ಮಕ ಅಸ್ತ್ರ ಮಾಡಿಕೊಂಡು ಜನರ ಮನಸಲ್ಲಿ ಕಾಂಗ್ರೆಸ್ ವಿರುದ್ಧ ದ್ವೇಷವನ್ನು ಬಿತ್ತುವ ಪೂರ್ವಭಾವಿ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಸಂಘ ಪರಿವಾರಿಗರು ಆರಂಭಿಸಿದರು.
ಆಯ್ತು.. ಈ ಅಕಾಲಿಕ ಪ್ರಾಣ ಪ್ರತಿಷ್ಠಾಪನೆಯ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಹಾಗೂ ಕೆಲವೇ ತಿಂಗಳಲ್ಲಿ ಬರುವ ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅದನ್ನು ರಾಮಭಕ್ತಿಯ ಸಮ್ಮೋಹಿನಿಯಲ್ಲಿ ತೇಲಿಸಿ ಜನರಲ್ಲಿರುವ ಧಾರ್ಮಿಕ ಭಾವನೆಗಳನ್ನು ಉತ್ತೇಜಿಸಿ ಮತಗಳನ್ನು ಗಟ್ಟಿಗೊಳಿಸಿ ಕೊಳ್ಳುವುದಕ್ಕೆ ರಾಮಮಂದಿರ ಉದ್ಘಾಟನೆ ಎನ್ನುವುದು ನೆಪ ಅಷ್ಟೇ ಎಂಬುದು ವಾಸ್ತವ ಸತ್ಯ. ಇಲ್ಲದೇ ಹೋಗಿದ್ದರೆ ಅರ್ಧಂಬರ್ಧ ಕಟ್ಟಿದ ಮಂದಿರದಲ್ಲಿ ಇಷ್ಟೊಂದು ತರಾತುರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಅರ್ಧ ಕಟ್ಟಿದ ಮಂದಿರದಲ್ಲಿ ಮೂರ್ತಿ ಸ್ಥಾಪನೆ ಶಾಸ್ತ್ರಸಮ್ಮತವಲ್ಲ ಎಂದು ವೈದಿಕ ಮಠದ ಸ್ವಾಮೀಜಿಗಳೇ ಹೇಳಿದ್ದಾರೆ. ಆದರೂ ಚುನಾವಣೆ ಮುಂದಿರುವುದರಿಂದ, ಗೆಲ್ಲಲು ಶ್ರೀರಾಮ ಪಾದವೇ ಬಿಜೆಪಿಗೆ ಗತಿಯಾಗಿರುವುದರಿಂದ ಅಕಾಲಿಕ ಉದ್ಘಾಟನೆ ಅನಿವಾರ್ಯವಾಗಿದೆ. ಈ ಅವಸರದ ಅಕಾಲಿಕ ಉದ್ಘಾಟನೆಯ ಆರೋಪ ಮರೆಸಲು ಕಾಂಗ್ರೆಸ್ ವಿರುದ್ಧ ಹರಿಹಾಯುವ ಮೂಲಕ ಜನರ ಗಮನವನ್ನು ಕಾಂಗ್ರೆಸ್ಸಿನತ್ತ ತಿರುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ಆಯ್ತು ಇವರು ಆಹ್ವಾನಿಸಿದರು. ಅವರು ಬರೋಕಾಗೋದಿಲ್ಲ ಅಂದರು. ಆಹ್ವಾನಿಸಿದವರೆಲ್ಲಾ ಬರಲೇ ಬೇಕೆಂಬ ನಿಯಮವೇನಿಲ್ಲ. ಇದೇನು ಸಂವಿಧಾನಬದ್ದ ಸರಕಾರಿ ಕಾರ್ಯಕ್ರಮವಲ್ಲ. ಬರಲು ಇಲ್ಲವೇ ಬಾರದೇ ಇರಲು ಏನೇನೋ ಕಾರಣಗಳಿರುತ್ತವೆ. ರಾಜಕೀಯ ಕಾರಣಕ್ಕಾಗಿಯೇ ಮೋದಿಯವರು ತರಾತುರಿಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುತ್ತಿದ್ದರೆ, ಅದೇ ರಾಜಕೀಯ ಕಾರಣವನ್ನು ವಿರೋಧಿಸಿಯೇ ಕಾಂಗ್ರೆಸ್ ಬರಲು ನಿರಾಕರಿಸಿದೆ. ಇಷ್ಟಕ್ಕೆ ಸುಮ್ಮನಿರುವ ಜಾಯಮಾನವೇ ಬಿಜೆಪಿಗರದ್ದಲ್ಲ. ಅವರ ಮುಖ್ಯ ಟಾರ್ಗೆಟ್ ಇರೋದೆ ಕಾಂಗ್ರೆಸ್. ಬಿಜೆಪಿಗೆ ಥ್ರೆಟ್ ಆಗಿರೋದು ಕಾಂಗ್ರೆಸ್ಸೇ. ಆದ್ದರಿಂದ ರಾಮಭಕ್ತಿಯ ನೆಪದಲ್ಲಿ ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರದ ಭಾಗವಾಗಿಯೇ ಬಿಜೆಪಿ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿದೆ. ‘ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿಯೇ ಕಾಂಗ್ರೆಸ್ ರಾಮಮಂದಿರ ಉದ್ಘಾಟನೆಯನ್ನು ನಿರಾಕರಿಸುತ್ತಿದೆ’ ಎಂದು ಹೇಳುವ ಮೂಲಕ ಬಿಜೆಪಿಯು ಕೋಮುಭಾವನೆ ಕೆರಳಿಸುವ ತನ್ನ ಮಾಮೂಲಿ ತಂತ್ರಗಾರಿಕೆಯನ್ನು ಇಲ್ಲೂ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ಮುಸ್ಲಿಂ ಪರ ಎಂದು ಅಪಪ್ರಚಾರ ಮಾಡಿದರೆ ಹಿಂದೂ ಮತಗಳನ್ನು ಕ್ರೋಢೀಕರಣ ಮಾಡಬಹುದು ಎನ್ನುವುದು ಸಂಘಿಗಳ ಸಾರ್ವಕಾಲಿಕ ತಂತ್ರ.
ಆಯ್ತು.. ರಾಜಕೀಯ ಕಾರಣಗಳಿಗೆ ಬಿಜೆಪಿ ನಾಯಕರುಗಳು ಕಾಂಗ್ರೆಸ್ ನ್ನು ಟಾರ್ಗೆಟ್ ಮಾಡಿ ಆ ಪಕ್ಷವನ್ನು ರಾಮವಿರೋಧಿ, ಧರ್ಮದ್ರೋಹಿ ಅದು ಇದು ಎಂದೆಲ್ಲಾ ಆರೋಪಿಸಿ ಚಾರಿತ್ರ್ಯವಧೆ ಮಾಡುತ್ತಲೇ ಇದ್ದಾರೆ ಎಂದುಕೊಳ್ಳೋಣ. ಅಸಲಿಗೆ ಕಾಂಗ್ರೆಸ್ ನಾಯಕರು ಯಾರೂ ರಾಮ ಮಂದಿರದ ಉದ್ಘಾಟನೆಯನ್ನು ವಿರೋಧಿಸಿಲ್ಲ. ರಾಮನ ವಿರುದ್ಧ ಮಾತಾಡಿಲ್ಲ. ಸಾಫ್ಟ್ ಹಿಂದುತ್ವವಾದಿಯಾಗಿರುವ ಕಾಂಗ್ರೆಸ್ ರಾಮದೇವರ ಪ್ರತಿಷ್ಠಾಪನೆಯನ್ನು ನೇರಾ ನೇರ ವಿರೋಧಿಸಲು ಸಾಧ್ಯವಿಲ್ಲ. ‘ಮಂದಿರದ ನೆಪದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ರಾಜಕಾರಣ ಮಾಡುತ್ತಿರುವುದರಿಂದ ಉದ್ಘಾಟನೆಗೆ ಕಾಂಗ್ರೆಸ್ ಪಕ್ಷದ ಅಧಿನಾಯಕರು ಬರುವುದಿಲ್ಲ’ಎಂದು ಹೇಳಿದ್ದಾರೆ. ಕೊಟ್ಟ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಿಸಿದ್ದಾರೆ. ಇದೇನೂ ದೊಡ್ಡ ಅಪರಾಧವೂ ಅಲ್ಲಾ, ಧರ್ಮದ್ರೋಹವೂ ಅಲ್ಲ.
ಆದರೆ.. ರಾಮದೇವರ ಪ್ರಾಣ ಪ್ರತಿಷ್ಠಾಪನೆಯನ್ನು ತೀಕ್ಷ್ಣವಾಗಿ ವಿರೋಧಿಸಿ ಬಹಿಷ್ಕರಿಸಿದ್ದು ಹಿಂದೂ ಧರ್ಮದ ವೈದಿಕ ಮಠ ಪೀಠಗಳ ಮಹಾಸ್ವಾಮಿಗಳು ಎನ್ನುವುದೇ ಸಂಘಿ ಕೃಪಾಕಟಾಕ್ಷದ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಶಂಕರಾಚಾರ್ಯ ಪೀಠದ ಸ್ವಾಮಿಗಳು ರಾಮಮಂದಿರದ ಉದ್ಘಾಟನೆಗೆ ಬರುವುದನ್ನು ನಿರಾಕರಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನಾ ಸಮಾರಂಭದಿಂದ ಹಿಂದೆ ಸರಿಯಲು ಶಂಕರಾಚಾರ್ಯರಿಂದ ಸ್ಥಾಪಿತಗೊಂಡ ಮಠಗಳ ಪೀಠಾಧ್ಯಕ್ಷರುಗಳು ನಿರ್ಧರಿಸಿದ್ದಾರೆ. ‘ಅಪೂರ್ಣವಾದ ಮಂದಿರದಲ್ಲಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಶಾಸ್ತ್ರ ಸಮ್ಮತವಲ್ಲ’ ಎಂದು ತಮ್ಮ ವಿರೋಧಕ್ಕೆ ಕಾರಣ ಕೊಟ್ಟಿದ್ದಾರೆ. ‘ಪ್ರಧಾನಿ ಮೋದಿ ಮೂರ್ತಿಯನ್ನು ಮುಟ್ಟಿ ಸ್ಥಾಪಿಸುವಾಗ ನಾನು ಅವರನ್ನು ಚಪ್ಪಾಳೆ ತಟ್ಟಿ ಶ್ಲಾಘಿಸಬೇಕೆ? ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳಂತೆ ಮೂಲ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಲ್ಲವೇ?’ ಎಂದು ಪುರಿ ಮಠದ ಸ್ವಾಮಿಗಳು ತಮ್ಮ ನಿರಾಕರಣೆಗೆ ಸಮರ್ಥನೆಗಳನ್ನು ಕೊಟ್ಟಿದ್ದಾರೆ. “ಅಪೂರ್ಣ ಮಂದಿರ ಉದ್ಘಾಟನೆಯ ಹಿಂದೆ ರಾಜಕೀಯ ಉದ್ದೇಶವಿದೆ. ಅಲ್ಲಿ ಯಾವ ಸಂಪ್ರದಾಯ ಪಾಲಿಸುತ್ತಿಲ್ಲ. ರಾಜಕೀಯ ಮುಖಂಡರು ಧಾರ್ಮಿಕ ಮುಖಂಡರಾಗುತ್ತಿದ್ದಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧ. ರಾಜಕೀಯ ಲಾಭಕ್ಕಿದನ್ನು ಮಾಡುತ್ತಿದ್ದಾರೆ” ಎಂದು ಉತ್ತರಾಖಾಂಡದ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಗಳು ಇಡೀ ಪ್ರಾಣ ಪ್ರತಿಷ್ಠಾಪನೆ ಪ್ರಹಸನವನ್ನೇ ತಿರಸ್ಕರಿಸಿದ್ದಾರೆ.
ಈ ಹಿಂದುತ್ವವಾದಿ ಸ್ವಾಮೀಜಿಗಳು ಹೇಳಿದ ಮಾತುಗಳನ್ನು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಹೇಳಿದ್ದರೆ ಇಷ್ಟೊತ್ತಿಗೆ ಈ ಸಂಘಿಗಳು ಹಾದಿ ಬೀದಿಯಲ್ಲಿ ಧರಣಿ ಸತ್ಯಾಗ್ರಹ ಹೋರಾಟ ಶುರುಮಾಡುತ್ತಿದ್ದರು. ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲೆಂದೇ ಕಾಂಗ್ರೆಸ್ಸಿಗರು ಹಿಂದೂ ವಿರೋಧಿಯಾಗಿದ್ದಾರೆಂದು ದೇಶಾದ್ಯಂತ ಹುಯಿಲೆಬ್ಬಿಸುತ್ತಿದ್ದರು. ಆದರೆ.. ಹಿಂದೂ ಧರ್ಮದ ಮಹಾಸ್ವಾಮಿಗಳು ಬಿಜೆಪಿಗೆ ಮುಖಭಂಗವಾಗುವಂತೆ ಮಾತಾಡಿ ಕಾರ್ಯಕ್ರಮವನ್ನೇ ಬಹಿಷ್ಕರಿಸಿದ್ದರೂ ಒಬ್ಬನೇ ಒಬ್ಬ ಬಿಜೆಪಿ ನಾಯಕ ಬಾಯಿ ಬಿಡುತ್ತಿಲ್ಲ. ಸಂಘ ಪರಿವಾರದವರ ನಾಲಿಗೆಗಳು ಬೆಂಕಿ ಉಗುಳುತ್ತಿಲ್ಲ. ಈಗ ಎಲ್ಲರ ಚಿತ್ತ ಕಾಂಗ್ರೆಸ್ಸಿನತ್ತ. ಯಾಕೆಂದರೆ ಈ ಬಂಡಾಯವೆದ್ದ ಸ್ವಾಮಿಗಳ ವಿರುದ್ಧ ಮಾತಾಡಿದರೆ ಮುಂದಿನ ಚುನಾವಣೆಯಲ್ಲಿ ಹಿಂದೂ ಮತಗಳ ಕೊರತೆಯಾಗಬಹುದು, ಅದೇ ಕಾಂಗ್ರೆಸ್ ವಿರುದ್ಧ ಹರಿಹಾಯ್ದರೆ ಹಿಂದೂ ಮತಗಳ ಕ್ರೋಢೀಕರಣವಾಗುವುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಆದರೂ ಆ ಒಬ್ಬ ಮಾತ್ರ ಈ ಬಂಡಾಯವೆದ್ದ ಸ್ವಾಮಿಗಳ ವಿರುದ್ಧ ಮಾತಾಡಿ ರಾಮ ಜನ್ಮಭೂಮಿಯ ಒಳಮರ್ಮಗಳನ್ನು ಬಯಲು ಗೊಳಿಸಿದ್ದಾನೆ. “ರಾಮಮಂದಿರವು ರಾಮಾನಂದಿ ಪಂಥದ ಜನರಿಗೆ ಸೇರಿದ್ದು. ಶಂಕರಾಚಾರ್ಯರಿಗಾಗಲೀ, ಶೈವರಿಗಾಗಲಿ ಅಥವಾ ಶಾಕ್ತರಿಗಾಗಲೀ ಸೇರಿದ್ದಲ್ಲ” ಎಂದು ರಾಮಜನ್ಮಭೂಮಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವಹಿಂದೂ ಪರಿಷತ್ತಿನ ಮುಖಂಡ ಚಂಪತ್ ರಾಯ್ ಎಂಬಾತ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟು ಈ ಬಂಡಾಯಮುನಿಗಳ ಕುಲವನ್ನೇ ರಾಮಮಂದಿರದಿಂದ ಬಹಿಷ್ಕರಿಸುವ ಮಾತಾಡಿದರು. “ಹಾಗಾದರೆ ರಾಮಾನಂದಿ ಪಂಥದವರಾಗಿಲ್ಲದ ಚಂಪಕ್ ರಾಯ್ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಮಮಂದಿರವನ್ನು ರಾಮಾನಂದಿ ಪಂಥದವರಿಗೆ ಬಿಟ್ಟು ಕೊಡಬೇಕು.ನಮಗೆ ರಾಮಮಂದಿರ ಸೇರಿದ್ದಲ್ಲವೆಂದಾದರೆ ರಾಮಮಂದಿರ ಕಟ್ಟಲು ನಮ್ಮಿಂದ ಯಾಕೆ ದೇಣಿಗೆ ತೆಗೆದುಕೊಳ್ಳಬೇಕಿತ್ತು” ಎಂದು ಪ್ರಶ್ನಿಸುವ ಮೂಲಕ ಅವಿಮುಕ್ತೇಶ್ವರಾನಂದ ಸ್ವಾಮಿಗಳು ಚಂಪಕ್ ರಾಯ್ ನಿಗೆ ಕೌಂಟರ್ ಕೊಟ್ಟಿದ್ದಾರೆ.
ಈ ಪುರೋಹಿತಶಾಹಿ ಪಂಥಗಳ ಒಳಜಗಳ ಈಗ ಮುನ್ನಲೆಗೆ ಬಂದಿದೆ. ರಾಮಾನಂದಿ ಪಂಥದವರು ಶ್ರೀವೈಷ್ಣವರು. ಇವರಿಗೂ ಶೈವ ಪಂಥ ಹಾಗೂ ಶಾಕ್ತ ಪಂಥದವರಿಗೂ ಬೇಕಾದಷ್ಟು ಒಳಬೇಗುದಿಗಳಿವೆ. ಈಗ ಹಿಂದುತ್ವವಾದಿಗಳ ಹೂರಣ ಹೊರಗೆ ಬರುತ್ತಿವೆ. ಆದರೆ ಬಿಜೆಪಿ ಆರೆಸ್ಸೆಸ್ಸಿಗೆ ರಾಮನಾಮ ಎನ್ನುವುದು ರಾಜಕೀಯ ಅಜೆಂಡಾದ ಭಾಗ. ಮತ ಗಳಿಕೆಯ ಮಾರ್ಗ. ಈ ಶಂಕರಾಚಾರ್ಯರಿಗೆ ಧರ್ಮಶಾಸ್ತ್ರಗಳೇ ಮುಖ್ಯ, ಧಾರ್ಮಿಕ ಕಟ್ಟುಪಾಡುಗಳೇ ಅವರಿಗೆ ಸ್ವರ್ಗ. ಹೀಗಾಗಿ ಸಂಘರ್ಷ ಶುರುವಾಗಿದೆ. ಏನೇ ಆಗಲಿ ಅಪೂರ್ಣಗೊಂಡ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದನ್ನು ಯಾವ ವೈದಿಕ ಶಾಸ್ತ್ರಗಳೂ ಒಪ್ಪುವುದಿಲ್ಲ. ಆದರೆ ರಾಜಕೀಯ ಅಧಿಕಾರ ಪಡೆಯಲು ಈ ಶಾಸ್ತ್ರ ಸಂಪ್ರದಾಯಗಳೂ ಮೋದಿಗೆ ಲೆಕ್ಕಕ್ಕಿಲ್ಲ. ಸಮೂಹ ಸನ್ನಿ ಪೀಡಿತ ರಾಮ ಭಕ್ತರು ಈ ಯಾವುದನ್ನೂ ಪ್ರಶ್ನಿಸೋದಿಲ್ಲ. ಪ್ರಶ್ನಿಸಿದವರಿಗೆ ಮೋದಿಯವರು ಉತ್ತರಿಸೋದಿಲ್ಲ. ಸ್ವಾಮಿಗಳಂತೆ ಯಾವುದನ್ನೂ ವಿರೋಧಿಸದೇ ಪ್ರಾಣ ಪ್ರತಿಷ್ಠಾಪನೆಗೆ ಬರುವುದಿಲ್ಲ ಎಂದು ಹೇಳಿದ ರಾಜಕೀಯ ಎದುರಾಳಿ ಕಾಂಗ್ರೆಸ್ ನಾಯಕರ ಮೇಲೆ ಬೆಂಕಿ ಕಾರುವುದನ್ನು ಸಂಘ ಪರಿವಾರದ ನಾಯಕರು ಬಿಡುವುದಿಲ್ಲ. ಮೋದಿ ಮೇನಿಯಾದಲ್ಲಿ ಮಿಂದೆದ್ದು ಮೆದುಳು ತೊಳೆದುಕೊಂಡ ಭಕ್ತರಿಗೆ ಇದ್ಯಾವುದೂ ಅರ್ಥವಾಗುವುದಿಲ್ಲ. ಇದೇ ರಾಜಕೀಯ ಧರ್ಮ, ಇದೇ ಧರ್ಮ ರಾಜಕೀಯ.
–ಶಶಿಕಾಂತ ಯಡಹಳ್ಳಿ
ಪತ್ರಕರ್ತರು
ಇದನ್ನೂ ಓದಿ-ಸಾಂಸ್ಕೃತಿಕ ಜವಾಬ್ದಾರಿ ಮರೆತ ಸರ್ಕಾರ- ಈ ಅಲಕ್ಷ್ಯ ಏಕೆ ?